ನವದೆಹಲಿ: ಪಾಕ್ ಉಗ್ರರನ್ನು ಸಂಹಾರ ಮಾಡಲು ಭಾರತ (India) ಆಪರೇಷನ್ ಸಿಂಧೂರ್ (Operation Sindoor) ಹೆಸರಿನಲ್ಲಿ ಕಾರ್ಯಾಚರಣೆ ನಡೆಸಿದ ಬೆನ್ನಲ್ಲೇ ʼಆಪರೇಷನ್ ಸಿಂಧೂರ್ʼ ಹೆಸರಿಗಾಗಿ ಹಲವು ಮಂದಿ ಅರ್ಜಿ ಸಲ್ಲಿಸಿದ್ದಾರೆ.
ಭಾರತ ಆಪರೇಷನ್ ಸಿಂಧೂರ್ ಘೋಷಣೆ ಮಾಡಿದ ಕೆಲವೇ ಗಂಟೆಗಳಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ (Reliance Industries) ಟ್ರೇಡ್‌ಮಾರ್ಕ್ ಪಡೆಯಲು ಮೊದಲ ಅರ್ಜಿ ಸಲ್ಲಿಸಿದೆ. ನಂತರ ಮನರಂಜನೆ, ಶಿಕ್ಷಣ, ಸಾಂಸ್ಕೃತಿಕ ಮತ್ತು ಮಾಧ್ಯಮ ಸೇವೆಗಳನ್ನು ಒಳಗೊಂಡಿರುವ ವರ್ಗ 41 ರ ಅಡಿಯಲ್ಲಿ ವಿಶೇಷ ಹಕ್ಕುಗಳನ್ನು ಬಯಸುವ ಇನ್ನೂ ಮೂವರು ಅರ್ಜಿ ಸಲ್ಲಿಸಿದ್ದಾರೆ. ಇದನ್ನೂ ಓದಿ: ರಫೇಲ್ ಬಗ್ಗೆ ಸುಳ್ಳು ಹೇಳಿ ಜಗತ್ತಿನ ಮುಂದೆ ಮತ್ತೆ ಬೆತ್ತಲಾದ ಪಾಕಿಸ್ತಾನ!
ರಿಲಯನ್ಸ್ ಇಂಡಸ್ಟ್ರೀಸ್ ಬುಧವಾರ ಬೆಳಗ್ಗೆ 10:42ಕ್ಕೆ ಅರ್ಜಿ ಸಲ್ಲಿಸಿದರೆ ಮುಕೇಶ್ ಚೇತನ್ ಅಗರ್‌ವಾಲ್ ಬೆಳಗ್ಗೆ 11:25, ನಿವೃತ್ತ ಭಾರತೀಯ ವಾಯುಪಡೆಯ ಅಧಿಕಾರಿ ಗ್ರೂಪ್ ಕ್ಯಾಪ್ಟನ್ ಮಲ್ ಸಿಂಗ್ ಮಧ್ಯಾಹ್ನ 12.16, ದೆಹಲಿ ಮೂಲದ ವಕೀಲ ಅಲೋಕ್ ಕೊಠಾರಿ ಸಂಜೆ 6:27ಕ್ಕೆ ಅರ್ಜಿ ಹಾಕಿದ್ದಾರೆ.
ಪ್ರತಿಯೊಂದು ಅರ್ಜಿಯಲ್ಲಿ ಮುಂದಿನ ದಿನದಲ್ಲಿ ವಾಣಿಜ್ಯ ಉದ್ದೇಶಕ್ಕಾಗಿ ಬಳಕೆ ಮಾಡಲಾಗುವುದು ಎಂದು ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಬಲೂಚಿಸ್ತಾನ್ ಲಿಬರೇಶನ್ ಆರ್ಮಿಯಿಂದ ಐಇಡಿ ದಾಳಿ – 12 ಪಾಕ್ ಸೈನಿಕರು ಸಾವು
ನಾಲ್ವರು ಅರ್ಜಿದಾರರು ನೈಸ್ ವರ್ಗೀಕರಣದ 41ನೇ ತರಗತಿಯ ಅಡಿಯಲ್ಲಿ ನೋಂದಣಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಈ ವರ್ಗವನ್ನು OTT ಪ್ಲಾಟ್‌ಫಾರ್ಮ್‌ಗಳು, ನಿರ್ಮಾಣ ಸಂಸ್ಥೆಗಳು, ಪ್ರಸಾರಕರು ಮತ್ತು ಈವೆಂಟ್ ಕಂಪನಿಗಳು ಹೆಚ್ಚಾಗಿ ಬಳಸುತ್ತವೆ. ಆಪರೇಷನ್ ಸಿಂಧೂರ್ ಶೀಘ್ರದಲ್ಲೇ ಚಲನಚಿತ್ರ ಶೀರ್ಷಿಕೆ, ವೆಬ್ ಸರಣಿಯಾಗುವ ಸಾಧ್ಯತೆಯಿದೆ.
ಮೊದಲು ಬಂದವರಿಗೆ ಮೊದಲ ಆದ್ಯತೆಯಾದರೆ ಆಪರೇಷನ್ ಸಿಂಧೂರ್ ಟ್ರೇಡ್‌ಮಾರ್ಕ್‌ನ ರಿಲಯನ್ಸ್ ಕಂಪನಿಯ ಪಾಲಾಗಲಿದೆ.
ಭಾರತದಲ್ಲಿ ಆಪರೇಷನ್ ಸಿಂಧೂರ್‌ನಂತಹ ಮಿಲಿಟರಿ ಕಾರ್ಯಾಚರಣೆಯ ಹೆಸರುಗಳ ಪೇಟೆಂಟ್ ತನಗೆ ಬೇಕೆಂದು ರಕ್ಷಣಾ ಸಚಿವಾಲಯ ಸಾಮಾನ್ಯವಾಗಿ ಅರ್ಜಿ ಸಲ್ಲಿಸುವುದಿಲ್ಲ. ಸರ್ಕಾರ ಮಧ್ಯಪ್ರವೇಶ ಮಾಡದೇ ಇದ್ದರೆ ಈ ಹೆಸರು ಖಾಸಗಿ ವ್ಯಕ್ತಿಗಳು ಅಥವಾ ಸಂಸ್ಥೆಗಳಿಂದ ಟ್ರೇಡ್‌ಮಾರ್ಕ್ ಹಕ್ಕುಗಳಿಗೆ ಮುಕ್ತವಾಗಿರುತ್ತವೆ.