ಬೆಂಗಳೂರು: ನಮ್ಮ ರಾಷ್ಟ್ರಭಾಷೆ ಹಿಂದಿ, ನಮ್ಮ ಮಳಿಗೆಯಲ್ಲಿ ಕನ್ನಡದ ಹಾಡು ಹಾಕುವುದಿಲ್ಲ, ಹಿಂದಿಯನ್ನೇ ಹಾಕುತ್ತೇವೆ. ನೀವು ಏನೂ ಮಾಡಿಕೊಳ್ಳಲು ಆಗುವುದಿಲ್ಲ ಎಂದು ದುರಹಂಕಾರ ಮೆರೆದ ಕೆಎಫ್‍ಸಿ ಸಂಸ್ಥೆ ವಿರುದ್ಧ ಪ್ರತಿಭಟನೆಯ ಕಾವು ಹೆಚ್ಚಾಗುತ್ತಿದೆ. ಕಳೆದ ಮೂರು ದಿನಗಳಿಂದ ನಡೆಯುತ್ತಿರುವ #RejectKFC ಅಭಿಯಾನಕ್ಕೆ ತಮಿಳುನಾಡಿನ ತಮಿಳು ಭಾಷಿಕರು ಸಹ ಭಾರೀ ಬೆಂಬಲ ವ್ಯಕ್ತಪಡಿಸಿದ್ದಾರೆ.
ತಮಿಳುನಾಡಿನ ತಮಿಳರು ಭಾನುವಾರದಿಂದ #RejectKFC ಹ್ಯಾಶ್ ಟ್ಯಾಗ್ ನೊಂದಿಗೆ ಟ್ವೀಟ್ ಮಾಡುತ್ತಿದ್ದು, ಕೆಎಫ್‍ಸಿಯಂಥಹ ಸಂಸ್ಥೆಗಳು ಆಯಾ ರಾಜ್ಯದ ಭಾಷೆ, ಸಂಸ್ಕøತಿಯನ್ನು ಗೌರವಿಸಬೇಕು. ಇಲ್ಲವಾದಲ್ಲಿ ಅಂಥವುಗಳನ್ನು ನಾವೇ ಧಿಕ್ಕರಿಸಬೇಕು ಎಂದು ಅಭಿಪ್ರಾಯವ್ಯಕ್ತಪಡಿಸಿ, ಕನ್ನಡಿಗರ ಹೋರಾಟಕ್ಕೆ ಬೆಂಬಲ ನೀಡುತ್ತಿದ್ದಾರೆ. ಇದನ್ನೂ ಓದಿ: 26 ಪ್ರಕರಣಗಳಲ್ಲಿ ಸಮೀರ್ ತನಿಖೆ ನಡೆಸುವಾಗ ಸರಿಯಾದ ನಿಯಮಗಳನ್ನು ಅನುಸರಿಸಿಲ್ಲ: ನವಾಬ್ ಮಲಿಕ್
ಸಣ್ಣಪುಟ್ಟ ವಿಷಯಗಳಿಗೆ ಸ್ಪಂದಿಸಿ ಉತ್ತರ ನೀಡುವ ಕೆಎಫ್‍ಸಿ, ಇದುವರೆಗೆ ಕನ್ನಡಿಗರ ಅಭಿಯಾನದ ಕುರಿತು ಮಾತನಾಡದೇ ಇರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಕರ್ನಾಟಕ ರಕ್ಷಣಾ ವೇದಿಕೆ ಈಗಾಗಲೇ ಒಂದು ವಾರದ ಗಡುವು ನೀಡಿದ್ದು, ಉಗ್ರ ಸ್ವರೂಪದ ಹೋರಾಟದ ಎಚ್ಚರಿಕೆ ನೀಡಿದೆ.
ಇಂದು ಬೆಂಗಳೂರಿನ ರಾಜಾಜಿನಗರದ ಕೆಎಫ್‍ಸಿ ಮಳಿಗೆಗೆ ಕರವೇ ಬೆಂಗಳೂರು ನಗರ ಉಪಾಧ್ಯಕ್ಷ ಕೆ.ಪಿ.ನರಸಿಂಹ ಅವರ ನೇತೃತ್ವದ ತಂಡ ಭೇಟಿ ನೀಡಿ, ಅಲ್ಲಿನ ಮೇಲ್ವಿಚಾರಕರಿಗೆ ಎಚ್ಚರಿಕೆಯ ಪತ್ರ ನೀಡಿತು. ವಾರದ ಒಳಗೆ ಕೆಎಫ್‍ಸಿ ನಾಮಫಲಕಗಳು ಕನ್ನಡೀಕರಣಗೊಳ್ಳಬೇಕು. ಕನ್ನಡಿಗರಿಗೆ ಉದ್ಯೋಗ ನೀಡಬೇಕು. ಗ್ರಾಹಕರೊಂದಿಗೆ ಕನ್ನಡದಲ್ಲೇ ವ್ಯವಹರಿಸಬೇಕು. ಇಲ್ಲವಾದಲ್ಲಿ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗುತ್ತೀರಿ ಎಂದು ಕೆ.ಪಿ.ನರಸಿಂಹ ಎಚ್ಚರಿಸಿದರು.
ಕರವೇ ರಾಜಾಜಿನಗರ ಕ್ಷೇತ್ರ ಅಧ್ಯಕ್ಷರಾದ ಮಂಜುನಾಥ್, ಬಸವೇಶ್ವರನಗರ ಕ್ಷೇತ್ರ ಅಧ್ಯಕ್ಷರಾದ ಸಿದ್ಧರಾಜು, ಪ್ರಕಾಶನಗರ ವಾರ್ಡ್ ಉಪಾಧ್ಯಕ್ಷ ರವಿ, ಮುಖಂಡರಾದ ಗಂಗಣ್ಣ, ನಿರ್ಮೋಹ, ಲಕ್ಷ್ಮಿನಾರಾಯಣಪುರ ಮಂಜುನಾಥ್ ಮತ್ತಿತರರು ಪಾಲ್ಗೊಂಡಿದ್ದರು. ಇದನ್ನೂ ಓದಿ: ರಾಗಿಣಿ ಕೇಸ್ ಉಲ್ಲೇಖ, ಆರ್ಯನ್‍ಗೆ ಜಾಮೀನು ನೀಡಿ – ಮುಕುಲ್ ರೊಹ್ಟಗಿ ವಾದ