– 2 ವರ್ಷಗಳ ಸುದೀರ್ಘ ಸಂಚು; ಉಗ್ರ ಸಂಘಟನೆ ಜೊತೆ ಉಮರ್ ನಂಟು
– 7,500 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ
ನವದೆಹಲಿ: ಇಲ್ಲಿನ ಕೆಂಪು ಕೋಟೆ ಬಳಿ ಸಂಭವಿಸಿದ್ದ ಸ್ಫೋಟವು (Red Fort Blast) ಆತ್ಮಹತ್ಯಾ ಬಾಂಬ್ ದಾಳಿಯಾಗಿದ್ದು, ಆರೋಪಿ ಉಮರ್ ಉನ್ ನಬಿ ತಾನು ಚಲಾಯಿಸುತ್ತಿದ್ದ ಐ20 ಕಾರಿನೊಳಗಿನಿಂದಲೇ ಸುಧಾರಿತ ಸ್ಫೋಟಕ ಸಾಧನ (IED) ಸ್ಫೋಟಿಸಿದ್ದ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಇಂದು ಸಲ್ಲಿಸಿದ 7,500 ಪುಟಗಳ ಚಾರ್ಜ್‌ಶೀಟ್‌ನಲ್ಲಿ ತಿಳಿಸಿದೆ.
ಕಳೆದ ವರ್ಷ ನವೆಂಬರ್ 10ರಂದು ನಡೆದ ಈ ಸ್ಫೋಟದಲ್ಲಿ 15 ಮಂದಿ ಮೃತಪಟ್ಟಿದ್ದರು. ವೃತ್ತಿಯಲ್ಲಿ ವೈದ್ಯರಾಗಿರುವ ಹಾಗೂ ಫರೀದಾಬಾದ್‌ನ ಅಲ್ ಫಲಾಹ್ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದ ನಬಿ ಸ್ಫೋಟ ಸಂಭವಿಸಿದ ವೇಳೆ ಕಾರಿನೊಳಗೇ ಇದ್ದ ಎಂದು ಎನ್‌ಐಎ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದೆ. ಕಮಾಂಡ್ ವ್ಯವಸ್ಥೆಯ ಮೂಲಕ ನಬಿಯೇ ಐಇಡಿಯನ್ನ ಸಕ್ರಿಯಗೊಳಿಸಿದ್ದಾನೆ ಎಂದು ತನಿಖಾ ಸಂಸ್ಥೆ ಆರೋಪಿಸಿದೆ.

ಸ್ಫೋಟದ ಸ್ಥಳದಲ್ಲಿ ಪತ್ತೆಯಾದ ಜೈವಿಕ ವಸ್ತುಗಳ ಡಿಎನ್‌ಎ ಪರೀಕ್ಷೆಯಲ್ಲೂ ಸ್ಫೋಟದ ಸಮಯದಲ್ಲಿ ನಬಿ ಕಾರಿನೊಳಗಿದ್ದ ಎಂಬುದು ದೃಢಪಟ್ಟಿದೆ ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.
2 ವರ್ಷಗಳ ಸುದೀರ್ಘ ಸಂಚು
7,500 ಪುಟಗಳ ಚಾರ್ಜ್‌ಶೀಟ್‌ನಲ್ಲಿ ಸ್ಫೋಟವು ಒಂದೇ ದಿನದಲ್ಲಿ ನಡೆದ ದಾಳಿಯಲ್ಲ, ಸುಮಾರು 2 ವರ್ಷಗಳ ಕಾಲ ನಡೆದ ಸಂಚಿನ ಅಂತಿಮ ಹಂತವಾಗಿತ್ತು ಎಂದು ಎನ್‌ಐಎ ಹೇಳಿದೆ. ಈ ಸಂಚಿನ ಪ್ರಮುಖ ರೂವಾರಿ ಹಾಗೂ ಪುನಶ್ಚೇತನಗೊಂಡ ಅನ್ಸಾರ್ ಘಜ್ವತ್-ಉಲ್-ಹಿಂದ್ (AGuH) ಘಟಕದ ʻಆಪರೇಷನಲ್ ಇನ್‌ಚಾರ್ಜ್ʼ ಆಗಿ ನಬಿಯನ್ನ ತನಿಖಾ ಸಂಸ್ಥೆ ಗುರುತಿಸಿದೆ. AGuH ಎಂಬುದು ಭಾರತೀಯ ಉಪಖಂಡದಲ್ಲಿನ ಅಲ್-ಖೈದಾ (AQIS)ನ ನಿಯೋಜಿತ ಅಂಗಸಂಸ್ಥೆಯಾಗಿದೆ ಎಂದು ಎನ್‌ಐಎ ಹೇಳಿದೆ.
ತನಿಖೆಯ ಪ್ರಕಾರ, ಕೆಂಪು ಕೋಟೆಯನ್ನು ಗುರಿಯಾಗಿಸುವ ಪ್ರಕ್ರಿಯೆ 2023ರ ಡಿಸೆಂಬರ್‌ನಲ್ಲೇ ಆರಂಭವಾಗಿತ್ತು. ನಬಿ ಮತ್ತು ಇತರ ಆರೋಪಿಗಳು ಹಲವು ಬಾರಿ ಕೆಂಪು ಕೋಟೆಗೆ ತೆರಳಿ ಸ್ಥಳದ ಪರಿಶೀಲನೆ ನಡೆಸಿದ್ದರು. ಕೆಂಪು ಕೋಟೆ ದೇಶದ ಪ್ರತೀಕ ಎಂಬ ಕಾರಣಕ್ಕೆ ಕೆಂಪು ಕೋಟೆ ಮೇಲೆ ದಾಳಿ ನಡೆಸುವ ಸಂಚನ್ನು ಮಾಡಲಾಗಿತ್ತು ಎಂದು ತನಿಖಾಧಿಕಾರಿಗಳು ಆರೋಪಿಸಿದ್ದಾರೆ.

2022 ರಿಂದಲೇ ಉಗ್ರ ಸಂಘಟನೆ ಪುನಶ್ಚೇತನಕ್ಕೆ ಯತ್ನ?
ಎನ್‌ಐಎ ಪ್ರಕಾರ, 2022ರ ಆರಂಭದಿಂದಲೇ ನಬಿ ನಿಷ್ಕ್ರಿಯವಾಗಿದ್ದ AGuH ಘಟಕವನ್ನ ಸಕ್ರಿಯಗೊಳಿಸುವ ಹಾಗೂ ಭಯೋತ್ಪಾದಕ ಚಟುವಟಿಕೆಗಳನ್ನ ನಡೆಸಬಲ್ಲ ಉಗ್ರಗಾಮಿಗಳ ಜಾಲವನ್ನ ನಿರ್ಮಿಸುವ ಕಾರ್ಯದಲ್ಲಿ ತೊಡಗಿದ್ದ. ಆದರೆ ದಾಳಿ ನಡೆಸುವುದಕ್ಕೆ ಇನ್ನೂ ಯಾವುದೇ ದಿನಾಂಕ ನಿಗದಿ ಮಾಡಿರಲಿಲ್ಲ. ಶ್ರೀನಗರದಲ್ಲಿ ಸರಣಿ ಬಂಧನಗಳು ನಡೆಯುತ್ತಿದ್ದಂತೆ ತನ್ನ ಸಂಚಿನ ಸುಳಿವು ತನಿಖಾ ಸಂಸ್ಥೆಗಳಿಗೆ ಸಿಗುತ್ತಿದೆ ಎಂದು ನಬಿ ಭಯಪಟ್ಟಿದ್ದ. ಹಾಗಾಗು ತನಿಖಾ ತಂಡಗಳು ತನ್ನತ್ತ ಸುಳಿಯುವ ಭಯದಿಂದ ಅವಸರದಲ್ಲಿ ಕಾರು ಸ್ಫೋಟಿಸಿದ್ದಾನೆ ಎಂದು ಎನ್‌ಐಎ ಹೇಳಿದೆ.
ಕಾರನ್ನೇ ಸ್ಫೋಟಕ ವಾಹನವಾಗಿ ಪರಿವರ್ತನೆ
ದಾಳಿಗೆ ಬಳಸಿದ ವಾಹನವನ್ನ ʻವಾಹನ ಆಧಾರಿತ ಸುಧಾರಿತ ಸ್ಫೋಟಕ ಸಾಧನʼ (VBIED) ಆಗಿ ಪರಿವರ್ತಿಸಲಾಗಿತ್ತು. ಸ್ಫೋಟಕಗಳನ್ನ ತಯಾರಿಸಲು ಮತ್ತು ಸಂಗ್ರಹಿಸಲು ಸಿದ್ಧತೆ ನಡೆಸಲಾಗಿತ್ತು ಎಂಬುದನ್ನು ಸೂಚಿಸುವ ರಾಸಾಯನಿಕ ವಸ್ತುಗಳು ಹಾಗೂ ಪ್ರಯೋಗಾಲಯ ಉಪಕರಣಗಳನ್ನೂ ತನಿಖೆಯ ವೇಳೆ ವಶಪಡಿಸಿಕೊಳ್ಳಲಾಗಿದೆ ಎಂದು ಎನ್‌ಐಎ ಹೇಳಿದೆ.

ಸ್ಫೋಟದ ಸ್ಥಳದಿಂದ ಪತ್ತೆಯಾದ ವಸ್ತುಗಳ ವಿಧಿವಿಜ್ಞಾನ ಪರೀಕ್ಷೆಯಲ್ಲಿ TATP ಮತ್ತು ಅಮೋನಿಯಂ ನೈಟ್ರೇಟ್ನ ಕುರುಹುಗಳು ಪತ್ತೆಯಾಗಿವೆ. ಕಾರಿನೊಳಗಿನಿಂದಲೇ ಕಮಾಂಡ್ ವ್ಯವಸ್ಥೆಯ ಮೂಲಕ ಸ್ಫೋಟಕ ಸಾಧನ ಸಕ್ರಿಯಗೊಳಿಸಲಾಗಿತ್ತು ಎಂಬುದನ್ನು ಸಾಕ್ಷ್ಯಗಳು ಸೂಚಿಸುತ್ತವೆ ಎಂದು ತನಿಖಾ ಸಂಸ್ಥೆ ಹೇಳಿದೆ.
ನೇಮಕಾತಿ, ಶಸ್ತ್ರಾಸ್ತ್ರ, ಹಣಕಾಸಿನ ವ್ಯವಸ್ಥೆ
ಇನ್ನೂ ನಬಿ ಸ್ಫೋಟದ ಹಿಂದಿನ ಮಾಸ್ಟರ್ ಮೈಂಡ್ ಎಂದು ಎನ್‌ಐಎ ಹೇಳಿದೆ. ಉಗ್ರ ಸಂಘಟನೆಗಳಿಗೆ ಹೊಸ ಸದಸ್ಯರನ್ನ ನೇಮಿಸಿ, ಅವರನ್ನ ಉಗ್ರರನ್ನಾಹಿ ರೂಪಿಸುವುದು ಹಾಗೂ ರಹಸ್ಯ ಸಭೆಗಳನ್ನ ನಡೆಸಿ ಭಯೋತ್ಪಾದಕ ತರಬೇತಿಗೆ ವ್ಯವಸ್ಥೆ ಮಾಡುವುದು, ಹಣಕಾಸಿನ ನೆರವು ಒದಗಿಸುವುದು, ಅಕ್ರಮ ಶಸ್ತ್ರಾಸ್ತ್ರಗಳನ್ನ ಸಂಗ್ರಹಿಸುವುದು ಹಾಗೂ ಘಟಕಕ್ಕೆ ಸುರಕ್ಷಿತ ಸ್ಥಳಗಳನ್ನ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎಂದು ತನಿಖಾ ಸಂಸ್ಥೆ ಹೇಳಿದೆ.
ಆರೋಪಿಗಳು Signal ಸೇರಿದಂತೆ ಎನ್‌ಕ್ರಿಪ್ಟ್ ಮಾಡಿದ ಸಂವಹನ ವೇದಿಕೆಗಳನ್ನ ಬಳಸುತ್ತಿದ್ದರು. ಜಮ್ಮು ಮತ್ತು ಕಾಶ್ಮೀರ ಹಾಗೂ ದೆಹಲಿ-ಎನ್‌ಸಿಆರ್ ಪ್ರದೇಶಗಳಲ್ಲಿ ರಹಸ್ಯ ಸಭೆಗಳನ್ನು ನಡೆಸಲಾಗುತ್ತಿತ್ತು ಎಂದು ಎನ್‌ಐಎ ಚಾರ್ಜ್‌ಶೀಟ್‌ನಲ್ಲಿ ತಿಳಿಸಿದೆ.
