ಮುಂಬೈ: ಅಮೆರಿಕಾದ (America) ಹೊಸ ಟ್ಯಾರಿಫ್ (Tariff) ನೀತಿಯಿಂದ ನಲುಗಿ ಹೋಗಿದ್ದ ಭಾರತೀಯ ಷೇರು ಮಾರುಕಟ್ಟೆಯಲ್ಲಿ (Indian Share Market) ಇಂದು ಚೇತರಿಕೆ ಕಂಡು ಬಂದಿದೆ. ಇಂದಿನ ಆರಂಭಿಕ ವಹಿವಾಟಿನಲ್ಲಿ ಷೇರುಪೇಟೆ ಕಂಬ್ಯಾಕ್ ಮಾಡಿದ್ದು, ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕವು ಭರ್ಜರಿಯಾಗಿ ಏರಿಕೆಯಾಗಿದೆ.
ಬೆಳಗ್ಗೆ ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ (BSE) 1,100 ಪಾಯಿಂಟ್ಸ್ ಏರಿಕೆಗೊಂಡಿದ್ದು, 74,300ರ ಗಡಿಯನ್ನು ದಾಟಿತು. ನಿಫ್ಟಿ ಸೂಚ್ಯಂಕವು 400 ಪಾಯಿಂಟ್ಸ್ ಹೆಚ್ಚಾಗಿದ್ದು, 22,550ರ ಗಡಿಯನ್ನು ಸಮೀಪಿಸಿತು. ಬಳಿಕ ಕೆಲವು ಪಾಯಿಂಟ್ ಕೆಳಕ್ಕೆ ಟ್ರೇಡ್ ಮಾಡಿತು.ಇದನ್ನೂ ಓದಿ: ಷೇರುಪೇಟೆ ಸ್ಥಿತಿಗೆ ಮೋದಿ ಕಾರಣ: ಕಾಂಗ್ರೆಸ್ ಆರೋಪ
ಇಂದು ಆರಂಭಿಕ ವಹಿವಾಟಿನಲ್ಲಿ ಬಹುತೇಕ ಎಲ್ಲಾ ವಲಯಗಳು ಗ್ರೀನ್ ಮಾರ್ಕ್‌ನಲ್ಲಿ ವಹಿವಾಟು ನಡೆಸಿವೆ. 2,445 ಷೇರುಗಳು ಏರಿಕೆಗೊಂಡಿದ್ದು, 333 ಷೇರುಗಳು ಕುಸಿತ ಸಾಧಿಸಿವೆ ಮತ್ತು 96 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ನಿಫ್ಟಿ ಮಿಡ್‌ಕ್ಯಾಪ್ 100 ಮತ್ತು ನಿಫ್ಟಿ ಸ್ಮಾಲ್ ಕ್ಯಾಪ್ 100 ಸೂಚ್ಯಂಕವು ತಲಾ 2.3 ಪರ್ಸೆಂಟ್‌ನಷ್ಟು ಜಿಗಿದಿದ್ದು, ನಿಫ್ಟಿ ರಿಯಾಲ್ಟಿ, ಮೆಟಲ್ ಹಾಗೂ ಐಟಿ ಸೂಚ್ಯಂಕವು ತಲಾ 3 ಪರ್ಸೆಂಟ್ ಹೆಚ್ಚಾಗಿದೆ.
ಇಂದಿನ ವಹಿವಾಟಿನಲ್ಲಿ ಕೆಲವು ಷೇರುಗಳು ಉತ್ತಮ ಪ್ರದರ್ಶನ ತೋರಿವೆ. ಎನ್‌ಟಿಪಿಸಿ, ಟೈಟನ್, ನೆಸ್ಲೆ ಇಂಡಿಯಾ, ಕೊಟಕ್ ಮಹೀಂದ್ರಾ ಬ್ಯಾಂಕ್ ಮತ್ತು ಟಾಟಾ ಕನ್ಸೂಮರ್ ಪ್ರಾಡಕ್ಟ್ಸ್ ನಿಫ್ಟಿ 50ರಲ್ಲಿ ಲಾಭ ಗಳಿಸಿದ ಪ್ರಮುಖ ಷೇರುಗಳಾಗಿವೆ. ಈ ಕಂಪನಿಗಳು ತಮ್ಮ ವಲಯದಲ್ಲಿ ಸ್ಥಿರತೆಯನ್ನು ಕಾಪಾಡಿಕೊಂಡು ಹೂಡಿಕೆದಾರರ ವಿಶ್ವಾಸವನ್ನು ಗಳಿಸಿವೆ. ವಿಶೇಷವಾಗಿ ಗ್ರಾಹಕ ಉತ್ಪನ್ನಗಳು ಮತ್ತು ಬ್ಯಾಂಕಿಂಗ್ ವಲಯದ ಷೇರುಗಳು ಇಂದು ಚೇತರಿಕೆಯ ಹಾದಿಯಲ್ಲಿ ಮುಂದುವರಿದಿವೆ.
ಇದೇ ವೇಳೆ, ಕೆಲವು ಷೇರುಗಳು ಇಂದು ಕಳಪೆ ಪ್ರದರ್ಶನ ತೋರಿವೆ. ಬಿಪಿಸಿಎಲ್, ಕೋಲ್ ಇಂಡಿಯಾ, ಒಎನ್‌ಜಿಸಿ, ಅದಾನಿ ಪೋರ್ಟ್ಸ್, ಮತ್ತು ಶ್ರೀರಾಮ್ ಫೈನಾನ್ಸ್ ಇವುಗಳು ನಷ್ಟ ಅನುಭವಿಸಿದ ಪ್ರಮುಖ ಷೇರುಗಳಾಗಿವೆ. ಶಕ್ತಿ ವಲಯ ಮತ್ತು ಲಾಜಿಸ್ಟಿಕ್ಸ್ ವಲಯದ ಈ ಷೇರುಗಳು ಜಾಗತಿಕ ಒತ್ತಡಗಳಿಗೆ ಒಳಗಾಗಿ ಇಳಿಮುಖವಾಗಿವೆ. ಅದಾನಿ ಸಮೂಹದ ಷೇರುಗಳ ಮೇಲಿನ ಒತ್ತಡವು ಇನ್ನೂ ತಗ್ಗಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಇದನ್ನೂ ಓದಿ: ಗೋಲ್ಡ್ ಪ್ರಿಯರಿಗೆ ಗುಡ್‌ನ್ಯೂಸ್ – ಚಿನ್ನದ ದರ ಇಳಿಕೆ!
ಜಾಗತಿಕ ಮಾರುಕಟ್ಟೆಗಳು ತತ್ತರಿಸಿದ ಒಂದು ದಿನದ ನಂತರ ಏಷ್ಯಾದ ಎಲ್ಲಾ ಮಾರುಕಟ್ಟೆಯು ಭರ್ಜರಿಯಾಗಿ ರಿಟರ್ನ್ ಆಗಿದೆ. ಜಪಾನ್ ಷೇರು ಮಾರುಕಟ್ಟೆ ನಿಕ್ಕಿ ಸೂಚ್ಯಂಕ ಸೋಮವಾರ ಶೇ.7.8ರಷ್ಟು ಕುಸಿದಿದ್ದರೆ, ಮಂಗಳವಾರ ಬೆಳಗ್ಗೆ ಅದು ಸುಮಾರು ಶೇ.6 ರಷ್ಟು ಲಾಭದೊಂದಿಗೆ ವಹಿವಾಟು ನಡೆಸಿತು. ನಿಕ್ಕಿ 225 ಸೂಚ್ಯಂಕವು 5.81% ಅಥವಾ 1,809.92 ಪಾಯಿಂಟ್‌ಗಳ ಏರಿಕೆಯಾಗಿ 32,946.50ಕ್ಕೆ ತಲುಪಿದೆ. ಮತ್ತೊಂದೆಡೆ, ದಕ್ಷಿಣ ಕೊರಿಯಾದ ಕೋಸ್ಪಿ ಸೂಚ್ಯಂಕವು ಸುಮಾರು 2 ಪ್ರತಿಶತಕ್ಕಿಂತ ಹೆಚ್ಚಿನ ವಹಿವಾಟು ನಡೆಸಿತು.