ಕೋಲಾರ: ಮಾಲೂರು ಕ್ಷೇತ್ರದ (Maluru Recounting) ಮರು ಮತ ಎಣಿಕೆಗೆ ದಿನಾಂಕ ನಿಗದಿಯಾಗಿದೆ. ಕರ್ನಾಟಕ ಚುನಾವಣಾ ಆಯೋಗ (Karnataka Election Commission) ನ.11 ರಂದು ಮರು ಎಣಿಕೆಗೆ ದಿನಾಂಕ ನಿಗದಿ ಪಡಿಸಿದೆ.
ಮಾಲೂರು ವಿಧಾನಸಭೆ ಕ್ಷೇತ್ರದ ಮರು ಮತ ಎಣಿಕೆಗೆ ಕೋರ್ಟ್ ಆದೇಶ ಮಾಡಿದ ಬೆನ್ನಲ್ಲೇ ಹಾಲಿ ಹಾಗೂ ಮಾಜಿ ಶಾಸಕರ ಮಧ್ಯೆ ಮಾತಿನ ಸಮರ ಶುರುವಾಗಿದೆ. ಮರು ಮತ ಎಣಿಕೆಯಲ್ಲ ಮರು ಚುನಾವಣೆಯೇ ಆಗುತ್ತದೆ ಎಂದು ಮಾಜಿ ಶಾಸಕ ಹೇಳಿದರೆ ತಿರುಕನ ಕನಸು ಕಾಣುತ್ತಿದ್ದಾರೆ ಎಂದು ಹಾಲಿ ಶಾಸಕ ಟಾಂಗ್ ನೀಡಿದ್ದಾರೆ.
ಮಾಲೂರಿನ ಮಾಜಿ ಶಾಸಕ ಕೆ.ಎಸ್.ಮಂಜುನಾಥ ಗೌಡ(Manjunath Gowda) ಮರು ಮತ ಎಣಿಕೆ ಸಂಬಂಧ ನ್ಯಾಯಾಲಯದ ಮೊರೆ ಹೋಗಿದ್ದರು. ಅದರಂತೆ ನ್ಯಾಯಾಲಯ ಸಹ ಮರು ಮತ ಎಣಿಕೆಗೆ ಆದೇಶ ಮಾಡಿದ ಹಿನ್ನೆಲೆಯಲ್ಲಿ ಪರಸ್ಪರ ಕೆಸರೆರಾಚಾಟ, ಮಾತಿನ ಸಮರಕ್ಕೆ ಮಾಲೂರು ಕ್ಷೇತ್ರ ಸಾಕ್ಷಿಯಾಗಿದೆ.
ರಾಜ್ಯ ಮುಖ್ಯ ಚುನಾವಣಾ ಆಯುಕ್ತರಿಗೆ ಪತ್ರ ಬರೆದಿರುವ ಮಾಜಿ ಶಾಸಕ ಮಂಜುನಾಥ್ ಗೌಡ ಚುನಾವಣಾ ಸಾಮಗ್ರಿಗಳನ್ನ ಅಕ್ರಮವಾಗಿ ಸಂಗ್ರಹ ಮಾಡಲಾಗಿದೆ. ಚುನಾವಣಾ ಆಯೋಗ ತುರ್ತು ಮಧ್ಯ ಪ್ರವೇಶ ಮಾಡಿ ಭಾರತ ಚುನಾವಣಾ ಆಯೋಗದ ಕಡ್ಡಾಯ ಕಾರ್ಯ ವಿಧಾನದ ಪ್ರಕಾರ ಮತದಾನ ಮತ್ತು ಎಣಿಕೆಯ ನಂತರ ಚುನಾವಣಾ ಸಾಮಾಗ್ರಿಗಳನ್ನು ಮಹಜರು ಮಾಡಿ ಕೋಲಾರದ ಡಿಸಿ ಕಚೇರಿ ಬಳಿ ಇರುವ ಸ್ಟ್ರಾಂಗ್ ರೂಂ ನಲ್ಲಿಡಬೇಕು, ಆದ್ರೆ ಕೆಲ ಸಾಮಗ್ರಿಗಳು ಪತ್ರಿಕೆಗಳು ಮಾಲೂರು ತಹಶೀಲ್ದಾರ್ ಅವರ ಬಳಿ ಇದೆ. ಇದು ಕಾನೂನು ಬಾಹಿರ ಹಾಗೂ ಚುನಾವಣಾ ಪ್ರೋಸಿಡಿಂಗ್ಸ್ಗೆ ವಿರುದ್ದವಾಗಿದೆ. ಮರು ಮತ ಎಣಿಕೆ ಪಾರದರ್ಶಕವಾಗಿರಬೇಕಾದ್ರೆ ತಕ್ಷಣವೆ ವಶಕ್ಕೆ ಪಡೆದು ಅರ್ಜಿದಾರರ ಸಮ್ಮುಖದಲ್ಲಿ ಸ್ಟ್ರಾಂಗ್ ರೂಂಗೆ ಮರಳಿ ತಂದು ಈ ವಿಚಾರ ತಕ್ಷಣ ಸುಪ್ರೀಂ ಕೋರ್ಟ್ ಮುಂದೆ ತರಬೇಕೆಂದು ಮನವಿ ಮಾಡಿದ್ದರು. ಅಲ್ಲದೇ ಜಿಲ್ಲಾಧಿಕಾರಿಗಳನ್ನ ಭೇಟಿಯಾದ ಬಳಿಕ ಮರು ಮತ ಎಣಿಕೆಯಲ್ಲ ಮರು ಚುನಾವಣೆಯೆ ಮಾಡಬೇಕಾಗುತ್ತದೆ ಎಂದರು. ಇದನ್ನೂ ಓದಿ: ಪ್ರಧಾನಿ ಮೋದಿ ಯುವಜನತೆಗೆ ರೀಲ್ಸ್ ನಶೆ ಏರಿಸುತ್ತಿದ್ದಾರೆ: ರಾಹುಲ್ ಗಾಂಧಿ
ಇನ್ನೂ ಮರು ಎಣಿಕೆ ಸಂಬಂಧ ಅಧಿಕಾರಿಗಳು ಸಹ ಚುನಾವಣಾ ಆಯೋಗದ ಆದೇಶಕ್ಕಾಗಿ ಕಾದು ಕುಳಿತಿದ್ದಾರೆ. ಆಯೋಗ ನೀಡುವ ಕಾರ್ಯ ವಿಧಾನಗಳಂತೆ ಇದೆ ತಿಂಗಳ 11 ರಂದು ಮರು ಮತ ಎಣಿಕೆಗೆ ದಿನಾಂಕ ನಿಗದಿಯಾಗಿದೆ. ಅಂದು ಮರು ಮತ ಎಣಿಕೆಯಾದರೂ ಫಲಿತಾಂಶ ಘೋಷಣೆ ಮಾಡುವಂತಿಲ್ಲ. ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿದ ಬಳಿಕ ಅಂತಿಮವಾಗಿ ಸುಪ್ರೀಂ ಕೋರ್ಟ್ ಫಲಿತಾಂಶ ಪ್ರಕಟಿಸಲಿದೆ. ಇದನ್ನೂ ಓದಿ: ಮದುವೆಗಾಗಿ ಅಲ್ಲ, ಕ್ಷೇತ್ರದ ಕೆಲಸಕ್ಕೆ ಓಡಾಡಲು ಕಾರು ಬೇಕು ಅಂತ ಕೇಳಿದ್ದೆ: ಡಿಕೆಶಿಗೆ ತೇಜಸ್ವಿ ಸೂರ್ಯ ಟಾಂಗ್
ನ್ಯಾಯಾಲಯ ಮರು ಮತ ಎಣಿಕೆಗೆ ಆದೇಶ ನೀಡಿದೆ, ಮರು ಚುನಾವಣೆಗಲ್ಲ ಎನ್ನುವ ದೂರುದಾರ ಮಾಜಿ ಶಾಸಕ ತಿರುಕನ ಕನಸು ಕಾಣುತ್ತಾ, ಮಾಲೂರು ಕ್ಷೇತ್ರದ ಜನರನ್ನ ಮರಳು ಮಾಡುತ್ತಿದ್ದಾರೆ, ದಿನಕ್ಕೊಂದು ಹೇಳಿಕೆ ಕೊಡುತ್ತಿದ್ದಾರೆ ಎಂದು ಹಾಲಿ ಶಾಸಕ ಕೆ.ವೈ.ನಂಜೇಗೌಡ (KY Nanjegowda) ಟಾಂಗ್ ನೀಡಿದರು.
ನ್ಯಾಯಾಲಯದ ವಿಚಾರದಲ್ಲಿ ರಾಜಕಾರಣವೆ ಬೇರೆ ನ್ಯಾಯಾಲಯದ (Court) ತೀರ್ಮಾನವೆ ಬೇರೆ. ಹಾದಿ ಬೀದಿಯಲ್ಲಿ ಕೋರ್ಟ್ ವಿಚಾರವನ್ನು ಚರ್ಚೆ ಮಾಡುವುದು ಸರಿಯಲ್ಲ. ಎಲ್ಲವೂ ನ್ಯಾಯಾಲಯ ತೀರ್ಮಾನ ಮಾಡಲಿದೆ. ಮರು ಎಣಿಕೆಯಲ್ಲಿ100ಕ್ಕೆ 200 ರಷ್ಟು ನಾನು ಗೆಲ್ಲುತ್ತೇನೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

