ಬೆಂಗಳೂರು: ದಸರಾ ಹಬ್ಬದ (Dasara Festival) ಹಿನ್ನೆಲೆ ತಮ್ಮ ಊರುಗಳಿಗೆ ತೆರಳಲು ಮುಂದಾಗಿದ್ದ ಪ್ರಯಾಣಿಕರು, ನಿನ್ನೆ ರಾತ್ರಿ ಬೆಂಗಳೂರಿನಲ್ಲಿ ಉಂಟಾದ ಭಾರೀ ಟ್ರಾಫಿಕ್ ಜಾಮ್ನಿಂದಾಗಿ (Bengaluru Traffic Jam) ತೀವ್ರ ಪರದಾಟ ಅನುಭವಿಸಿದರು.
ನಗರದ ಪ್ರಮುಖ ರಸ್ತೆಗಳಲ್ಲಿ ಕಿಲೋಮೀಟರ್ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿದ್ದರಿಂದ ಪ್ರಯಾಣಿಕರು ಸುಮಾರು 6 ಗಂಟೆಗಳ ಕಾಲ ಟ್ರಾಫಿಕ್ನಲ್ಲೇ ಸಿಲುಕಿಕೊಂಡರು.

ಮೈಸೂರು ರಸ್ತೆ, ತುಮಕೂರು ರಸ್ತೆ ಹಾಗೂ ಏರ್ಪೋರ್ಟ್ ರಸ್ತೆಯಲ್ಲಿ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು. ದಸರಾ ಹಬ್ಬಕ್ಕಾಗಿ ಊರಿಗೆ ತೆರಳುತ್ತಿದ್ದ ಖಾಸಗಿ ಬಸ್ಗಳು ಕೂಡ ಟ್ರಾಫಿಕ್ ಜಾಮ್ನಲ್ಲಿ ಸಿಲುಕಿದ್ದರಿಂದ, ಕೆಲವು ಬಸ್ಗಳು ಬೆಳಗಿನ ಜಾವ 3ರಿಂದ 4 ಗಂಟೆಯ ವೇಳೆಗೆ ಮಾತ್ರ ಬೆಂಗಳೂರು ನಗರದಿಂದ ಹೊರಬರಲು ಸಾಧ್ಯವಾಯಿತು.
ಇದರ ನಡುವೆ ಜಿಟಿಜಿಟಿ ಮಳೆಯೂ ಪ್ರಯಾಣಿಕರಿಗೆ ಮತ್ತಷ್ಟು ತ್ರಾಸು ನೀಡಿತ್ತು. ಗಂಟೆಗಟ್ಟಲೆ ರಸ್ತೆಯಲ್ಲೇ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದರಿಂದ ಮಕ್ಕಳು, ವೃದ್ಧರು ಸೇರಿದಂತೆ ಹಲವು ಪ್ರಯಾಣಿಕರು ಹೈರಾಣಾದರು.
ಟ್ರಾಫಿಕ್ ಜಾಮ್ನಿಂದ ಕಂಗೆಟ್ಟ ಸಾರ್ವಜನಿಕರು, ಸಂಚಾರ ಸುಗಮಗೊಳಿಸುವಂತೆ ಸ್ಥಳೀಯ ಸಂಚಾರಿ ಪೊಲೀಸ್ ಠಾಣೆಗಳಿಗೆ ಕರೆ ಮಾಡಿ ಮನವಿ ಮಾಡಿದರು. ದಸರಾ ರಜೆ ಹಿನ್ನೆಲೆ ಊರಿಗೆ ತೆರಳುವವರ ಸಂಖ್ಯೆ ಹೆಚ್ಚಾಗಿದ್ದರೂ, ಪ್ರಮುಖ ರಸ್ತೆಗಳಲ್ಲಿ ವಾಹನ ದಟ್ಟಣೆ ನಿಯಂತ್ರಿಸಲು ಸೂಕ್ತ ವ್ಯವಸ್ಥೆ ಇಲ್ಲದಿರುವ ಬಗ್ಗೆ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದರು.

