ಬೆಂಗಳೂರು: ಮುಜರಾಯಿ ಇಲಾಖೆಗೆ (Muzrai Department) ದೇವಸ್ಥಾನಗಳು ಸಲ್ಲಿಕೆ ಮಾಡುವ ಆದಾಯ ಮೊತ್ತದಲ್ಲಿ ಏರಿಕೆ ಮತ್ತು ಇನ್ನಿತರೆ ತಿದ್ದುಪಡಿ ಇರುವ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳ ಮತ್ತು ಧರ್ಮದಾಯ ದತ್ತಿಗಳ ವಿಧೇಯಕ-2024 ಅನ್ನು ವಿಧಾನಸಭೆಯಲ್ಲಿ ಇಂದು ಅಂಗೀಕಾರ ಮಾಡಲಾಗಿದೆ.
ಮುಜರಾಯಿ ಇಲಾಖೆಗೆ ದೇವಸ್ಥಾನಗಳು ಕೊಡುತ್ತಿದ್ದ ಆದಾಯದ ಹಣವನ್ನು ದ್ವಿಗುಣಗೊಳಿಸಲಾಗಿದೆ. ಇನ್ಮುಂದೆ 10 ಲಕ್ಷದಿಂದ 1 ಕೋಟಿ ಆದಾಯದ ದೇವಸ್ಥಾನಗಳು ಆದಾಯದ 5% ರಷ್ಟು ಹಣ ಇಲಾಖೆಗೆ ಸಲ್ಲಿಸಬೇಕು. ಇನ್ನು 1 ಕೋಟಿಗೂ ಆದಾಯ ಮೀರಿದ ದೇವಸ್ಥಾನಗಳು ಆದಾಯದ 10% ರಷ್ಟು ಹಣ ಸಲ್ಲಿಕೆ ಮಾಡಬೇಕು. ಇದರ ಜೊತೆಗೆ ಸಿ ಗ್ರೇಡ್ ದೇಗುಲದ ಅರ್ಚಕರು, ಸಿಬ್ಬಂದಿಗೆ ಇನ್ಶೂರೆನ್ಸ್ ಸೌಕರ್ಯ ಒದಗಿಸಲು ವಿಧೇಯಕದಲ್ಲಿ ಅವಕಾಶ ಕೊಡಲಾಗಿದೆ.
ದೇವಸ್ಥಾನಗಳ ಅರ್ಚಕರು, ದೇಗುಲ ಸಿಬ್ಬಂದಿ ಮೃತಪಟ್ಟಾಗ 5 ಲಕ್ಷ ಪರಿಹಾರ ಕೊಡಲಾಗುತ್ತದೆ. ಈ ಮುಂಚೆ ಮೃತಪಟ್ಟವರಿಗೆ ಕೇವಲ 35 ಸಾವಿರ ರೂ. ಕೊಡಲಾಗ್ತಿತ್ತು. ಜೊತೆಗೆ ಅರ್ಚಕರು, ದೇಗುಲ ಸಿಬ್ಬಂದಿ ಮಕ್ಕಳ ವಿದ್ಯಾಭ್ಯಾಸಕ್ಕೆ 5 ಸಾವಿರ ರೂ.ನಿಂದ 5೦ ಸಾವಿರ ರೂ. ವರೆಗೆ ಸ್ಕಾಲರ್ಶಿಪ್ ಕೊಡಲು ವಿಧೇಯಕದಲ್ಲಿ ಅವಕಾಶ ಮಾಡಿಕೊಡಲಾಗಿದೆ.
ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿಯ ಸಾಮಾನ್ಯ ಸದಸ್ಯರಲ್ಲಿ ಒಬ್ಬರು ವಾಸ್ತು ಶಿಲ್ಪ, ಶಿಲ್ಪಶಾಸ್ತ್ರ ಕೌಶಲ್ಯ ಇರುವ ವಿಶ್ವಕರ್ಮ ಸಮುದಾಯದ ಒಬ್ಬರ ನೇಮಕಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇದನ್ನೂ ಓದಿ: ಕೊಲ್ಲೂರು ದೇಗುಲದ ಪಕ್ಕದಲ್ಲೇ ಹೈವೇ ಪ್ರಶ್ನಿಸಿ PIL- ಯಥಾಸ್ಥಿತಿಗೆ ಹೈಕೋರ್ಟ್ ಆದೇಶ