ಈಗಷ್ಟೇ ಬಿಸಿಲಿಂದ ಬಂದೆ… ಸಾಕ್ ಸಾಕ್ ಆಗೋಯ್ತು… ಎಷ್ಟೊಂದು ಸೆಕೆ ಅಲ್ವಾ…? ಹಾಗಾದ್ರೆ ತಕ್ಷಣ ತಂಪಾಗೋಕೆ ನಾನ್ ನಿಮಗೆ ಇವತ್ತೊಂದು ರೆಸಿಪಿ ಹೇಳ್ಕೊಡ್ತೀನಿ! ಅದೇನಂದ್ರೆ ರಾಗಿ ಹಾಲು, ಇದನ್ನ ನೀವು ಟೀ, ಕಾಫಿ ಬದಲಿಗೂ ಮಾಡಿ ಕುಡಿಬಹುದು. ಇದನ್ನ ಮಾಡೋದು ಹೇಗೆ ಗೊತ್ತಾ? ಹಾಗಾದ್ರೆ ಮುಂದೆ ಓದಿ..
ರಾಗಿ ಹಾಲು ಮಾಡೋಕೆ ಏನೆಲ್ಲ ಬೇಕು?
1 ಲೋಟ ರಾಗಿ
1 ಏಲಕ್ಕಿ
ಸ್ವಲ್ಪ ಬೆಲ್ಲ
ಚಿಟಿಕೆಯಷ್ಟು ಉಪ್ಪು
ರಾಗಿ ಹಾಲು ಮಾಡುವ ವಿಧಾನ
ಒಂದು ಲೋಟ ರಾಗಿಯನ್ನು ತೊಳೆದು ನೆನೆ ಹಾಕಿ, ನಂತರ ರಾಗಿಗೆ ಅದೇ ನೀರು ಹಾಕಿ, 1 ಏಲಕ್ಕಿ ಹಾಕಿ ನುಣ್ಣನೆ ರುಬ್ಬಿ ಆ ರಾಗಿ ನೀರನ್ನು ಒಂದು ಪಾತ್ರೆಗೆ ಸೋಸಿ ಹಾಕಬೇಕು. ನಂತರ ಸ್ವಲ್ಪ ನೀರು ಹಾಕಿ ಮಿಕ್ಸ್ ಮಾಡಿ, ಅದನ್ನು ಬಿಸಿ ಮಾಡಿ, ಚಿಟಿಕೆಯಷ್ಟು ಕಲ್ಲುಪ್ಪು ಹಾಕಿ, ಒಂದು ತುಂಡು ಬೆಲ್ಲ ಹಾಕಿ, ಸೌಟ್ ನಲ್ಲಿ ಮಿಕ್ಸ್ ಮಾಡಬೇಕು. ರಾಗಿ ಬೇಯುತ್ತಾ ಬರುವಾಗ ಹಾಲನ್ನು ಹಾಕಿ, ಬಿಸಿ ಮಾಡಿ ಇಳಿಸಬೇಕು.
ರಾಗಿ ಹಾಲನ್ನು ಬಿಸಿ ಬಿಸಿಯಾಗಿಯೂ ಕುಡಿಯಬಹುದು ಅಥವಾ ತಣ್ಣಗಾದ ಮೇಲೂ ಕುಡಿಯಬಹುದು. ಇನ್ನು ಸಿಹಿ ಬೇಡ, ಹಾಲು ಬೇಡ ಎನ್ನುವವರು ರಾಗಿ ಹಾಲಿಗೆ ಸ್ವಲ್ಪ ಉಪ್ಪು ಹಾಕಿ ಕಾಯಿಸಿ ಕುಡಿಯಬಹುದು, ಆದರೆ ರುಚಿಯಾಗಿ ಬೇಕೆಂದರೆ ಮೇಲೆ ಹೇಳಿದಂತೆ ಮಾಡಬೇಕು.
ರಾಗಿ ಹಾಲನ್ನು ಮಧುಮೇಹಿಗಳು ಬೆಲ್ಲ ಸೇರಿಸದೆ ಬರಿ ಉಪ್ಪು ಮಾತ್ರ ಹಾಕಿ ಕುಡಿಯಬೇಕು. ಇದು ರಕ್ತ ಹೀನತೆ ಸಮಸ್ಯೆ ತಡೆಗಟ್ಟಲು ಸಹ ಸಹಕಾರಿಯಾಗಿದೆ.