ನವದೆಹಲಿ: ನನ್ನನ್ನು ಅನರ್ಹಗೊಳಿಸಿರುವುದು ಸರಿಯಲ್ಲ. ಆದುದರಿಂದ ಸುಪ್ರೀಂ ಕೋರ್ಟಿನಲ್ಲಿ ನನ್ನ ಪರ ತೀರ್ಪು ಬರುತ್ತದೆ ಎಂದು ಆರ್ ಶಂಕರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸುಪ್ರೀಂಕೋರ್ಟಿನಲ್ಲಿ ಇಂದು ಅನರ್ಹ ಶಾಸಕರ ಅರ್ಜಿ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೂರಕ್ಕೆ ನೂರು ಅನರ್ಹರ ಪರವಾದ ತೀರ್ಪು ಬರುತ್ತದೆ. ನಾನು ನೇರವಾಗಿ ಸ್ಪೀಕರ್‍ಗೆ ಪತ್ರ ಬರೆದಿರಲಿಲ್ಲ. ನಾನು ಸ್ಪೀಕರ್‍ಗೆ ಕೊಟ್ಟಿದ್ದು ಸಿದ್ದರಾಮಯ್ಯ ಬರೆದಿದ್ದ ಪತ್ರವಾಗಿದೆ. ಇದಾದ ಮೇಲೆ ನನಗೆ ಸ್ಪೀಕರ್ ಪತ್ರ ಬರೆದು ಪ್ರತಿಕ್ರಿಯೆ ಕೇಳಿದ್ದರು. ಅದು ಇಂಗ್ಲೀಷ್ ನಲ್ಲಿದೆ, ನಿಮ್ಮ ಪ್ರತಿಕ್ರಿಯೆ ಏನು ಎಂದು ಕೇಳಿದ್ದರು. ದಾಖಲೆ ಇದ್ದರೆ ಕೊಡು ಅಂತನೂ ಕೇಳಿದ್ದರು. ಆಮೇಲೆ ನಾನು ಸ್ಪೀಕರ್ ಗೆ ಯಾವುದೇ ಪತ್ರ ಬರೆದಿಲ್ಲ. ಅಲ್ಲದೆ ಸ್ಪೀಕರ್ ಭೇಟಿಯಾಗಿ ಕೂಡ ಏನನ್ನೂ ತಿಳಿಸಿಲ್ಲ. ಹಾಗಾಗಿ ನಾನು ಕಾಂಗ್ರೆಸ್ ಸೇರುವ ಪ್ರಕ್ರಿಯೆಯೇ ಪೂರ್ಣ ಆಗಿಲ್ಲ ಎಂದರು.
Advertisement
Advertisement
ನನ್ನನ್ನು ಅನರ್ಹಗೋಳಿಸಿರುವುದು ಸರಿಯಲ್ಲ. ಆದ್ದರಿಂದ ಸುಪ್ರೀಂ ಕೋರ್ಟಿನಲ್ಲಿ ನನ್ನ ಪರ ತೀರ್ಪು ಬರುತ್ತದೆ. ನನ್ನ ಪ್ರಕರಣದ ವಾದಕ್ಕೆ ಪ್ರತ್ಯೇಕ ವಕೀಲರನ್ನು ನಿಯೋಜಿಸಿದ್ದೇವೆ. ನನ್ನ ಕ್ಷೇತ್ರದಲ್ಲಿ ಚುನಾವಣೆ ಬರಲ್ಲ ಎಂಬುದು ನನ್ನ ವಾದ. ಆದುದರಿಂದ ಟಿಕೆಟ್ ಕೊಡುವುದು ಬಿಡುವುದು ಮುಂದಿನ ವಿಚಾರವಾಗಿದೆ. ಬಿಜೆಪಿಯಲ್ಲಿ ಪೈಪೋಟಿ ಇದೆ. ಆಕಾಂಕ್ಷಿಗಳಿರುತ್ತಾರೆ ಅದಕ್ಕೆ ಏನೂ ಮಾಡೋಕಾಗಲ್ಲ ಎಂದು ತಿಳಿಸಿದ್ದಾರೆ.
Advertisement
ಇಂದು ಕೇಸ್ ಇದ್ದರೂ ನಿನ್ನೆಯೇ ಎಸ್.ಟಿ ಸೋಮಶೇಖರ್, ಬೈರತಿ ಬಸವರಾಜ್, ಶಿವರಾಂ ಹೆಬ್ಬಾರ್, ಪ್ರತಾಪಗೌಡ ಪಾಟೀಲ್, ರಮೇಶ್ ಜಾರಕಿಹೊಳಿ ಬೆಂಗಳೂರಿಗೆ ಬಂದಿದ್ದಾರೆ. ಏರ್‍ಪೋರ್ಟಿನಲ್ಲಿ ಮಾತನಾಡಿದ ಬೈರತಿ ಬಸವರಾಜ್, ನಾವೇನೂ ತಪ್ಪು ಮಾಡಿಲ್ಲ. ಚುನಾವಣೆಗೆ ನಿಲ್ಲುತ್ತೇವೆ. ತೀರ್ಪು ನಮ್ಮ ಪರವಾಗಿಯೇ ಬರಲಿದೆ. ಬಿಜೆಪಿಯವರು ಟಿಕೆಟ್ ಕೊಡಲ್ಲ ಅಂತ ಹೇಳಿಲ್ಲ ಅಂದರು. ಇತ್ತ ಎಲೆಕ್ಷನ್‍ಗೆ ಹೋಗುವುದೇ ನಮ್ಮ ನಡೆ ಅಂತ ಪ್ರತಾಪಗೌಡ ಪಾಟೀಲ್ ಹೇಳಿದ್ದಾರೆ. ಈ ಮಧ್ಯೆ, ನಾವು ಕಳೆದುಕೊಂಡಿದ್ದು ಏನೂ ಇಲ್ಲ. ಪಡೆದದ್ದೂ ಏನೂ ಇಲ್ಲ. ಹಿರೇಕೆರೂರಿಗೆ 270 ಕೋಟಿ ಅಭಿವೃದ್ಧಿ ಹಣ ಬಂದಿದೆ. ನಮ್ಮ ತ್ಯಾಗ ಸಾರ್ಥಕ ಆಗಿದೆ ಅಂತ ಅನರ್ಹ ಶಾಸಕ ಬಿ.ಸಿ ಪಾಟೀಲ್ ಹೇಳಿದ್ದಾರೆ.
Advertisement
ಇಂದು ಸ್ಪೀಕರ್ ಆದೇಶ ಪ್ರಶ್ನಿಸಿ 17 ಮಂದಿ ಅನರ್ಹ ಶಾಸಕರು ಸುಪ್ರೀಂಕೋರ್ಟ್ ಸಲ್ಲಿಸಿದ್ದ ಅರ್ಜಿ ಇಂದು ಸುಧೀರ್ಘ ವಿಚಾರಣೆಗೆ ಬರಲಿದೆ. ನ್ಯಾ. ಎನ್.ವಿ ರಮಣ, ನ್ಯಾ. ಸಂಜೀವ್ ಖನ್ನಾ, ನ್ಯಾ ಕೃಷ್ಣ ಮುರಾರಿ ನೇತೃತ್ವದ ತ್ರಿ ಸದಸ್ಯ ಪೀಠ ವಿಚಾರಣೆ ನಡೆಸಲಿದೆ. ಅನರ್ಹ ಶಾಸಕರ ಪರ ಘಟಾನುಘಟಿ ವಕೀಲರಾದ ಮುಕುಲ್ ರೊಹ್ಟಗಿ, ಹರೀಶ್ ಸಾಳ್ವೆ, ಗಿರಿ ಸೇರಿದಂತೆ ಮೂರ್ನಾಲ್ಕು ಮಂದಿ ವಕೀಲರು ವಾದ ಮಂಡಿಸಲಿದ್ದಾರೆ. ಸೋಮವಾರ ನಡೆದ ವಿಚಾರಣೆಗೆ ವೇಳೆ ರೋಹಟಗಿ ವಾದ ಆಲಿಸಿದ್ದ ಕೋರ್ಟ್ ಸುದೀರ್ಘ ವಿಚಾರಣೆಗಾಗಿ ಇಂದಿಗೆ ಮುಂದೂಡಿದೆ. ಇಂದು ಕೇವಲ ಅನರ್ಹ ಶಾಸಕರ ಪರ ವಕೀಲರು ವಾದ ಮಾಡಲಿದ್ದು, ಅನರ್ಹರ ಮನವಿಯನ್ನಷ್ಟೇ ಸುಪ್ರೀಂಕೋರ್ಟ್ ಆಲಿಸಲಿದೆ.