ಚಿತ್ರದುರ್ಗ: ರಿಯಲ್ ಸ್ಟಾರ್ ಉಪೇಂದ್ರ ಚಿತ್ರದುರ್ಗ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿ ಟೈಲರ್ ದೇವೇಂದ್ರಪ್ಪ ಪರ ಪ್ರಚಾರ ಮಾಡಿದ್ದಾರೆ. ಈ ವೇಳೆ ಅವರು ಒಂದೇ ನಿಮಿಷದಲ್ಲಿ ರ‍್ಯಾಲಿ ಏಕೆ ಮುಗಿಯಿತು ಎಂಬುದರ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಒಂದು ನಿಮಿಷ ರೋಡ್ ಶೋ ಮಾಡಿದ ಬಗ್ಗೆ ಮಾತನಾಡಿದ ಉಪೇಂದ್ರ, “ಬಿಸಿಲಿನ ತಾಪಕ್ಕೆ ನಾನು ಹೆದರಿಲ್ಲ. ನನಗೆ ರೋಡ್ ಶೋ ಮಾಡುವ ಅಗತ್ಯವಿಲ್ಲ. ಜನರನ್ನು ತಲುಪಲು ನಮಗೆ ರೋಡ್ ಶೋ ಬೇಕಿಲ್ಲ. ನನ್ನ ಪ್ರಜಾಕೀಯ ಪಕ್ಷದಲ್ಲಿ ರ‍್ಯಾಲಿ ಮಾಡಿ ಜನರಿಗೆ ಕಷ್ಟ ಕೊಡುವುದಿಲ್ಲ. ನಮ್ಮ ಅಭ್ಯರ್ಥಿ ಹಾಗೂ ಜೊತೆಯಲ್ಲಿ ಇರುವವರು ಉಪೇಂದ್ರ ಬರುತ್ತಾರೆ ಎಂದು ಈ ರೀತಿ ಮಾಡಿದ್ದಾರೆ. ಇಷ್ಟು ದಿನ ರಾಜಕೀಯದಲ್ಲಿ ಹೀಗೆ ನಡೆಯುತ್ತಿತ್ತು. ಇದನ್ನು ನೋಡಿ ಇಲ್ಲಿಯೂ ರೋಡ್ ಶೋ ಮಾಡಲು ಮುಂದಾಗಿದ್ದರು” ಎಂದು ತಿಳಿಸಿದರು.
Advertisement
Advertisement
ಇಲ್ಲಿ ಮೋದಿ ಹವಾ ಇಲ್ಲ. ಪ್ರಜಾ ಹವಾ ಇದೆ. ಇಲ್ಲಿ ಪ್ರಜಾಕೀಯನೇ ಗೆಲ್ಲುವುದು. ನೀವು ಆಟೋಗೆ ವೋಟ್ ಹಾಕಿ, ಆಟೋಮ್ಯಾಟಿಕ್ ಆಗಿ ಎಲ್ಲಾ ಸರಿಯಾಗುತ್ತದೆ. ಅಭ್ಯರ್ಥಿಗಳ ಆಯ್ಕೆ, ಪ್ರಚಾರದ ಒತ್ತಡದ ಕಾರಣಕ್ಕೆ ನಾನು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿಲ್ಲ. ಮುಂದಿನ ವಿಧಾನಸಭೆ ಚುನಾವಣೆಗೆ ನಾನು ಸ್ಪರ್ಧಿಸುತ್ತೇನೆ. ವಿಧಾನಸಭಾ ಚುನಾವಣೆ ಸ್ಪರ್ಧೆಗೆ ಯಾವ ಕ್ಷೇತ್ರದಿಂದ ನಿಲ್ಲಬೇಕು ಎಂಬುದನ್ನು ಇನ್ನು ನಿರ್ಧರಿಸಿಲ್ಲ ಎಂದರು.
Advertisement
ರಾಜಕೀಯವನ್ನು ಸಂಪೂರ್ಣ ಬದಲಾಯಿಸಿ ಒಳ್ಳೆಯ ಪ್ರಜಾಪ್ರಭುತ್ವ ತರಬೇಕಿದೆ. ಉತ್ತಮ ಪ್ರಜಾಕೀಯ ಪಕ್ಷ ಎನ್ನುವ ಉದ್ದೇಶಕ್ಕೆ ಅಸ್ತಿತ್ವಕ್ಕೆ ಬಂದಿದೆ. ಇನ್ನು ಪಕ್ಷದ ಪ್ರಣಾಳಿಕೆ ಕಾನೂನುಗಳ ಪ್ರಕಾರ ಆಗಬೇಕು. ನಾವು ಕೊಟ್ಟ ಭರವಸೆ ಈಡೇರಿಸದಿದ್ದರೆ ಕಾನೂನು ಕ್ರಮ ಆಗಬೇಕು. ಅಲ್ಲಿಯವರೆಗೂ ನಾವು ಪ್ರಣಾಳಿಕೆಯನ್ನು ತರಲ್ಲ ಎಂದರು.
Advertisement
ಇಂದು ಉಪೇಂದ್ರ ಬರಲಿರುವ ಹಿನ್ನೆಲೆಯಲ್ಲಿ ಮೊದಲೇ ರೋಡ್ ಶೋಗೆ ಪ್ರಜಾಕೀಯ ಪಕ್ಷ ಅನುಮತಿಯನ್ನು ಪಡೆದುಕೊಂಡಿತ್ತು. ಹೊಸದುರ್ಗ ಪಟ್ಟಣದ ವೀರಭದ್ರಸ್ವಾಮಿ ದೇವಾಲಯದಲ್ಲಿ ಉಪೇಂದ್ರ ಪೂಜೆ ಸಲ್ಲಿಸಿ ರೋಡ್ ಶೋ ವಾಹನ ಏರಿ ತಕ್ಷಣ ಇಳಿದಿದ್ದಾರೆ.
ಇಂದು ಬೆಳಗ್ಗೆ 9 ಗಂಟೆಗೆ ರೋಡ್ ಶೋ ನಿಗದಿಯಾಗಿತ್ತು. ಆದರೆ ನಟ ಉಪೇಂದ್ರ ಅರ್ಧ ಗಂಟೆ ತಡವಾಗಿ ರ‍್ಯಾಲಿಗೆ ಆಗಮಿಸಿ 1 ನಿಮಿಷ ಮಾತನಾಡಿ ರ‍್ಯಾಲಿ ಮುಗಿಸಿದರು.