ಕನ್ನಡ ರ‍್ಯಾಪರ್ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ (Chandan Shetty- Niveditha Gowda) ಅವರ ವಿಚ್ಛೇದನ ಶುಕ್ರವಾರ ಭಾರೀ ಸುದ್ದಿಯಾಗಿತ್ತು. ಚಂದನವನದಲ್ಲಿ ಕ್ಯೂಟ್ ಕಪಲ್ ಆಗಿದ್ದ ದಂಪತಿ ಏಕಾಏಕಿ ಬೇರೆಯಾಗಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿತು. ಅಲ್ಲದೇ ಹಲವರು ಇದಕ್ಕೆ ಕಾರಣವನ್ನೂ ಹುಡುಕಲು ಮುಂದಾಗಿದ್ದರು. ಈ ಸಂಬಂಧ ಸೋಶಿಯಲ್ ಮಿಡಿಯಾದಲ್ಲಿ ಸಾಕಷ್ಟು ಚರ್ಚೆಗಳು ಕೂಡ ನಡೆದವು. ಆದರೆ ಇದೀಗ ಚಂದನ್ ಪರ ವಕೀಲೆ ಅನಿತಾ ಅವರು ವಿಚ್ಛೇದನಕ್ಕೆ ನಿಜವಾದ ಕಾರಣ ಏನು ಎಂಬುದನ್ನು ರಿವೀಲ್ ಮಾಡಿದ್ದಾರೆ.
ವಕೀಲೆ ಅನಿತಾ ಅವರು ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಒಂದು ವರ್ಷದಿಂದ ದೂರ ಇರುವುದನ್ನೇ ತೋರಿಸಿ ಪರಸ್ಪರ ಮ್ಯೂಚುವಲ್ ಅಂಡರ್ ಸ್ಟಾಂಡಿಂಗ್ ಮೂಲಕ ವಿಚ್ಛೇದನ ಪಡೆದಿದ್ದಾರೆ. ಪತಿ-ಪತ್ನಿಯಾಗಿ ಮುಂದುವರಿಯಲು ಪರಸ್ಪರ ಹೊಂದಾಣಿಕೆ ಇಲ್ಲದಿರುವುದೇ ಮುಖ್ಯ ಕಾರಣ ಕೊಟ್ಟು ವಿಚ್ಛೇದನ ಪಡೆದಿದ್ದಾರೆ ಎಂದರು. ಇದನ್ನೂ ಓದಿ: ಡಿವೋರ್ಸ್ ವಿಚಾರ ಅಧಿಕೃತವಾಗಿ ಬಹಿರಂಗಪಡಿಸಿದ ಚಂದನ್- ನಿವೇದಿತಾ
ಡಿವೋರ್ಸ್ ಪ್ರೊಸೆಸ್ ಬೇಗ ಆಗಿದ್ದೇಗೆ..?: ಸಂಧಾನ ಮಾಡುವ ಪ್ರಯತ್ನ ಮಾಡಿದರೂ ಇಬ್ಬರೂ ಯಾವುದೇ ಕಾರಣಕ್ಕೂ ಡಿವೋರ್ಸ್ ಪರಿಹಾರದ ಮಾತಿಗೇ ಬರಲಿಲ್ಲ. ಉತ್ತಮ ಫ್ರೆಂಡ್ಸ್ ಆಗಿ ಮುಂದುವರಿಯಲು ಇಚ್ಛಿಸಿದ್ದಾರೆ. ಆದರೆ ಗಂಡ-ಹೆಂಡತಿಯಾಗಲು ಇಷ್ಟಪಡಲಿಲ್ಲ. ಡಿಸ್ಪ್ಯೂಟ್ ಇದ್ದಲ್ಲಿ ಪ್ರೊಸೆಸ್ ತಡವಾಗುತ್ತೆ. ಆದರೆ ಇವರ ಕೇಸ್ ನಲ್ಲಿ ಇಬ್ಬರದ್ದೂ ಒಂದೇ ಮಾತಾಗಿತ್ತು. 13-ಬಿ ಪ್ರಕಾರ ವಿಚ್ಛೇದನ ಧಾವೆಯಲ್ಲಿ ಒಂದು ವರ್ಷದಿಂದ ಪರಸ್ಪರ ದೂರ ಇರುವುದು ಹಾಗೂ ಹೊಂದಾಣಿಕೆ ಇಲ್ಲದಿರೋದನ್ನ ತೋರಿಸಿದ್ದರಿಂದ ವಿಚ್ಛೇದನದ ಪ್ರೊಸೆಸ್ ಬೇಗ ಆಗಿದೆ ಎಂದು ಹೇಳಿದರು.
ಕಳೆದ ಮೂರು ತಿಂಗಳಿಂದ ಸಮಯಾವಕಾಶ ಕೊಟ್ಟು ಕೌನ್ಸೆಲಿಂಗ್ ಕೂಡ ಮಾಡಲಾಯಿತು. ಆದರೂ ಇಬ್ಬರ ನಿರ್ಧಾರ ಒಂದೇ ಇರೋದ್ರಿಂದ ಜೂನ್ 7 ರ ಶುಕ್ರವಾರದಂದು ವಿಚ್ಛೇದನ ಪ್ರಕ್ರಿಯೆ ಸಂಪೂರ್ಣವಾಗಿದೆ ಎಂದು ಅನಿತಾ ತಿಳಿಸಿದರು.
ಬಿಗ್ ಬಾಸ್ ಕನ್ನಡ ಸೀಸನ್ 5ರ ರಿಯಾಲಿಟಿ ಶೋನಲ್ಲಿ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಅವರು ಸ್ಪರ್ಧಿಸಿದ್ದರು. ಅಲ್ಲಿಯೇ ಅವರಿಗೆ ಮೊದಲ ಬಾರಿಗೆ ಪರಿಚಯ ಆಗಿ, ಸ್ನೇಹ ನಂತರ ಪ್ರೀತಿಯಾಗಿ ಬದಲಾಯಿತು. ಬಳಿಕ 2017ರಲ್ಲಿ ಮೈಸೂರಿನ ಯುವ ದಸರಾ ವೇದಿಕೆಯಲ್ಲಿ ನಿವೇದಿತಾಗೆ ಚಂದನ್ ಶೆಟ್ಟಿ ಅವರು ಪ್ರಪ್ರೋಸ್ ಮಾಡಿದ್ದರು. ಅಲ್ಲದೇ 2020 ಫೆಬ್ರವರಿಯಲ್ಲಿ ಇಬ್ಬರೂ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.
ಇದಾದ ಬಳಿಕ ಚೆನ್ನಾಗಿಯೇ ಇದ್ದ ಜೋಡಿ, ಸೊಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದರು. ನಿವೇದಿತಾ ರಿಯಾಲಿ ಶೋದಲ್ಲಿ ಕೂಡ ಕೆಲ ಸಮಯದ ಹಿಂದೆ ಕಾಣಿಸಿಕೊಂಡಿದ್ದರು. ಸದ್ಯ ಮೂವಿಯಲ್ಲಿ ಬ್ಯುಸಿಯಾಗಿದ್ದಾರೆ ಎಂದು ಹೇಳಲಾಗಿತ್ತು. ಈ ನಡುವೆ ಶುಕ್ರವಾರ ದಿಢೀರ್ ಎಂದು ಶಾಂತಿನಗರದ ಫ್ಯಾಮಿಲಿ ಕೋರ್ಟ್‍ಗೆ ಹಾಜರಾಗಿ ಅಭಿಮಾನಿಗಳಿಗೆ ಶಾಕ್ ನೀಡಿ ಗೊಂದಲಕ್ಕೀಡು ಮಾಡಿದ್ದರು. ನಂತರ ಸಂಜೆಯ ವೇಳೆಗೆ ಇಬ್ಬರೂ ತಮ್ಮ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಳ್ಳುವ ಮೂಲಕ ವಿಚ್ಛೇದನ ವಿಚಾರವನ್ನು ಅಧಿಕೃತವಾಗಿ ಬಹಿರಂಗಪಡಿಸಿದ್ದರು.