ದೆಹಲಿಗೆ ಸಂಪೂರ್ಣ ಸ್ಥಾನಮಾನ ಇಲ್ಲ, ಎಲ್‍ಜಿ ಸ್ವತಂತ್ರ ಅಧಿಕಾರ ಹೊಂದಿಲ್ಲ: ಸುಪ್ರೀಂ ತೀರ್ಪಿನಲ್ಲಿರೋ ಪ್ರಮುಖ ಅಂಶಗಳು ಇಲ್ಲಿದೆ

Public TV
3 Min Read
SUPREM COURT ARAVIND CORNEL

ನವದೆಹಲಿ: ಲೆಫ್ಟಿನೆಂಟ್ ಗವರ್ನರ್ ಮತ್ತು ದೆಹಲಿ ಸರ್ಕಾರ ನಡುವೆ ಅಧಿಕಾರ ಹಂಚಿಕೆ ಸಂಬಂಧ ನಡೆಯುತ್ತಿದ್ದ ಜಟಾಪಟಿ ಸಂಬಂಧ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ಪ್ರಕಟಿಸಿದೆ.

ದೆಹಲಿಯ ಭೂಮಿ, ಕಾನೂನು ವ್ಯವಸ್ಥೆ ಹಾಗೂ ಪೊಲೀಸ್ ಅಧಿಕಾರಿಗಳನ್ನು ರಾಜ್ಯಪಾಲರೇ ನೋಡಿಕೊಳ್ಳಬೇಕೆಂಬ ದೆಹಲಿ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸುಪ್ರೀಂ ಕೋರ್ಟ್ ನ ಮೊರೆ ಹೋಗಿದ್ದರು. ಇಂದು ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಿಂದಾಗಿ ಆಡಳಿತಾರೂಢ ಕೇಜ್ರಿವಾಲ್ ಸರ್ಕಾರಕ್ಕೆ ಸಿಹಿ ಸಿಕ್ಕಿದೆ.

ಮುಖ್ಯ ನ್ಯಾಯಾಧೀಶರಾದ ದೀಪಕ್ ಮಿಶ್ರಾ ಹಾಗೂ ನ್ಯಾಯಾಧೀಶರಾದ ಎ.ಕೆ.ಸಿಕ್ರಿ, ಎ.ಎಂ.ಖಾನ್ವಿಲ್ಕರ್, ಡಿ.ವೈ.ಚಂದ್ರಚೂಡ್ ಮತ್ತು ಅಶೋಕ್ ಭೂಷಣ್ ಅವರನ್ನು ಒಳಗೊಂಡ ಸಂವಿಧಾನಿಕ ಪೀಠ ಈ ತೀರ್ಪು ಪ್ರಕಟಿಸಿದೆ.

supreme Court 1521081735

ತೀರ್ಪಿನಲ್ಲಿ ಹೇಳಿದ್ದು ಏನು?
ದೆಹಲಿಯು ಕೇಂದ್ರಾಡಳಿತ ಪ್ರದೇಶವಾಗಿದ್ದರಿಂದ ಪೂರ್ಣ ರಾಜ್ಯದ ಸ್ಥಾನಮಾನ ನೀಡಿದರೆ ರಾಷ್ಟ್ರೀಯ ಹಿತಾಸಕ್ತಿಗೆ ಮಾರಕವಾಗುತ್ತದೆ. ರಾಷ್ಟ್ರೀಯ ಹಿತಾಸಕ್ತಿಗೆ ಮಾರಕವಾಗುವ ಹಿನ್ನೆಲೆಯಲ್ಲಿ ಯಾವುದೇ ಚುನಾಯಿತ ಸರ್ಕಾರಕ್ಕೆ ದೆಹಲಿಯ ಸಂಪೂರ್ಣ ಅಧಿಕಾರ ಕೊಡಲು ಸಾಧ್ಯವಿಲ್ಲ.

ದೆಹಲಿಯು ರಾಷ್ಟ್ರದ ರಾಜಧಾನಿಯಾಗಿರುವುದರಿಂದ ಕೇಂದ್ರ ಸರ್ಕಾರವು ಕೂಡ ಅಧಿಕಾರವನ್ನು ಹೊಂದಿರುತ್ತದೆ. ಮಿಲಿಟರಿ, ರಕ್ಷಣಾ ಹಾಗೂ ಸಾಕಷ್ಟು ವಿಷಯಕ್ಕೆ ಸಂಬಂಧಿಸಿ ಎಲ್ಲಾ ಕೇಂದ್ರ ಕಛೇರಿಗಳು ದೆಹಲಿಯಲ್ಲಿರುವುದರಿಂದ ಸ್ವತಂತ್ರ ರಾಜ್ಯದ ಸ್ಥಾನಮಾನ ನೀಡಲು ಸಾಧ್ಯವಿಲ್ಲ. ಸಂವಿಧಾನವನ್ನು ಪಾಲಿಸುವುದು ಪ್ರತಿಯೊಬ್ಬರ ಕರ್ತವ್ಯ ಮತ್ತು ಜವಾಬ್ದಾರಿಯಾಗಿರುತ್ತದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಸಂಬಂಧ ಆರೋಗ್ಯಕರವಾಗಿರಬೇಕು. ನಿರಂಕುಶವಾದ ಮತ್ತು ಅರಾಜಕತೆಗೆ ಸಂವಿಧಾನದಲ್ಲಿ ಸ್ಥಳವಿಲ್ಲ. ಲೆಫ್ಟಿನೆಂಟ್ ಗರ್ವನರ್ ರಾಜ್ಯದೊಂದಿಗೆ ಸೌಹಾರ್ದಯುತವಾಗಿ ಕಾರ್ಯನಿರ್ವಹಿಸಬೇಕು. ಲೆಫ್ಟಿನೆಂಟ್ ಗವರ್ನರ್ ಮತ್ತು ಸಚಿವರ ನಡುವೆ ಹೊಂದಾಣಿಕೆ ಅಗತ್ಯವಾಗಿರಬೇಕು.

ಸಂವಿಧಾನಾತ್ಮಕ ಅವಕಾಶವಿರದ ಹೊರತು ಲೆಫ್ಟಿನೆಂಟ್ ಗವರ್ನರ್ ಸ್ವಂತತ್ರ ಆಡಳಿತ ನಡೆಸಲು ಸಾಧ್ಯವಿಲ್ಲ ಹಾಗೂ ಸರ್ಕಾರದ ಪ್ರತಿರೋಧಿಯಾಗಿ ವರ್ತಿಸುವಂತಿಲ್ಲ. ಎಲ್ಲ ವಿಚಾರಗಳನ್ನು ರಾಷ್ಟ್ರಪತಿಗಳಿಗೆ ಪ್ರಸ್ತಾಪಿಸುವ ಅಗತ್ಯವಿರುವುದಿಲ್ಲ. ದೆಹಲಿಯ ಚುನಾಯಿತ ಸರ್ಕಾರವನ್ನು ಲೆಫ್ಟಿನೆಂಟ್ ಗವರ್ನರ್ ಗೌರವಿಸಬೇಕು ಮತ್ತು ಸಚಿವ ಸಂಪುಟದೊಂದಿಗೆ ಸಲಹೆ ಮತ್ತು ಸಹಕಾರ ಪಡೆದುಕೊಂಡು ಆಡಳಿತ ನಡೆಯಬೇಕು. ನಿರ್ಣಾಯಕ ಸಂದರ್ಭಗಳಲ್ಲಿ ಮಾತ್ರ ಲೆಫ್ಟಿನೆಂಟ್ ಗವರ್ನರ್ ವಿಶೇಷ ಅಧಿಕಾರವನ್ನು ಬಳಸುವ ಅಧಿಕಾರವನ್ನು ಹೊಂದಿರುತ್ತಾರೆ.

ಮೊದಲು ದೆಹಲಿ ಆಡಳಿತ ಹೇಗಿತ್ತು?
ದೆಹಲಿಯ ಭೂಮಿ, ಕಾನೂನು ವ್ಯವಸ್ಥೆ, ಪೊಲೀಸ್ ಅಧಿಕಾರಿಗಳು ಹಾಗೂ ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದರೆ ಕಡ್ಡಾಯವಾಗಿ ಲೆಫ್ಟಿನೆಂಟ್ ಗವರ್ನರ್ ಅನುಮತಿ ಪಡೆದುಕೊಳ್ಳಬೇಕಾಗಿತ್ತು. ಇದರಿಂದಾಗಿ ಚುನಾಯಿತ ಸರ್ಕಾರಕ್ಕೆ ಯಾವುದೇ ಸ್ವತಂತ್ರ ಅಧಿಕಾರ ನಿರ್ವಹಿಸುವ ಅಧಿಕಾರವಿರುತ್ತಿರಲಿಲ್ಲ. ನೀರು, ವಿದ್ಯುತ್, ಆಹಾರ ಮತ್ತು ನಾಗರಿಕ ಸರಬರಾಜು, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ಸಮಾಜ ಕಲ್ಯಾಣ ಇಲಾಖೆ ಸಂಬಂಧಪಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಲು ಸರ್ಕಾರಕ್ಕೆ ಅನುಮತಿ ಇದೆ. ಉಳಿದ ವಿಚಾರಗಳಿಗೆ ಸಂಬಂಧಿಸಿದಂತೆ ಸರ್ಕಾರ ತೆಗೆದುಕೊಳ್ಳುವ ನಿರ್ಧಾರವನ್ನು ಲೆಫ್ಟಿನೆಂಟ್ ಗವರ್ನರ್ ತಡೆಹಿಡಿಯಲು ಅವಕಾಶವಿತ್ತು. ಈ ವಿಚಾರವನ್ನು ಮುಂದಿಟ್ಟುಕೊಂಡು ಆಪ್ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲು ಏರಿತ್ತು.

ತೀರ್ಪಿನಿಂದಾದ ಬದಲಾವಣೆ ಏನು?
ಲೆಫ್ಟಿನೆಂಟ್ ಪರಮಾಧಿಕಾರ ಹೊಂದಿರುವಂತೆ ಅಧಿಕಾರ ನಡೆಸುವಂತಿಲ್ಲ. ದೆಹಲಿಯ ಅಭಿವೃದ್ದಿ ದೃಷ್ಟಿಯಿಂದ ಯಿಂದ ಚುನಾಯಿತ ಸರ್ಕಾರದ ಜೊತೆಗೂಡಿ ಪರಸ್ಪರ ಸಹಕಾರ ಮತ್ತು ಸಹಭಾಳ್ವೆಯಿಂದ ಕಾರ್ಯನಿರ್ವಹಿಸಬೇಕು. ಯಾವುದೇ ಅಧಿಕಾರ ನಿರ್ಣಯ ತೆಗೆದುಕೊಳ್ಳಬೇಕಾದಲ್ಲಿ ಚುನಾಯಿತ ಸರ್ಕಾರದ ಜೊತೆಗೂಡಿ ನಿರ್ಧಾರ ಕೈಗೊಳ್ಳಬೇಕಾಗಿದೆ.

ಸುಪ್ರೀಂ ಕೋರ್ಟ್ ತೀರ್ಪು ಹೊರಬಿದ್ದ ನಂತರ ತಮ್ಮ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಇದು ದೆಹಲಿ ಜನತೆಗೆ ಸಿಕ್ಕ ದೊಡ್ಡ ಗೆಲುವು, ಪ್ರಜಾಪ್ರಭುತ್ವದ ವಿಜಯ ಎಂದು ಹಾಕಿಕೊಂಡಿದ್ದಾರೆ.

ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿ ಸೋಡಿಯ ಸಹ ತಮ್ಮ ಟ್ವಿಟ್ಟರ್ ನಲ್ಲಿ, ಇದೊಂದು ಮಹತ್ತರ ತೀರ್ಮಾನವಾಗಿದ್ದು, ಇದರಿಂದಾಗಿ ದೆಹಲಿ ಸರ್ಕಾರ ಪ್ರತಿಯೊಂದು ಅನುಮತಿಗಾಗಿ ಲೆಫ್ಟಿನೆಂಟ್ ಗವರ್ನರ್ ಗೆ ಕಡತಗಳನ್ನು ರವಾನಿಸುವ ಅಗತ್ಯವಿಲ್ಲ. ಇದರಿಂದಾಗಿ ಯಾವುದೇ ಕಾರ್ಯಗಳು ಕುಂಠಿತಗೊಳ್ಳುವುದಿಲ್ಲ ಇದು ಪ್ರಜಾಪ್ರಭುತ್ವದ ಗೆಲುವು. ಸುಪ್ರೀಂ ಕೋರ್ಟ್‍ಗೆ ಧನ್ಯವಾದಗಳು ಎಂದು ಹಾಕಿಕೊಂಡಿದ್ದಾರೆ.

ದೆಹಲಿ ಸರ್ಕಾರದ ಪರವಾಗಿ ಕಾಂಂಗ್ರೆಸ್ ಮುಖಂಡ ಚಿದಂಬರಂ, ಮಾಜಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಇಂದಿರಾ ಜೈಸಿಂಗ್ ಹಾಗೂ ಸಾಲಿಸಿಟರ್ ಜನರಲ್ ಗೋಪಾಲ್ ಸುಬ್ರಮಣಿಯನ್ ಸೇರಿದಂತೆ ಹಲವು ಹಿರಿಯ ವಕೀಲರು ಕೋರ್ಟ್ ನಲ್ಲಿ ವಾದಿಸಿದ್ದರು.  ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಏನಿದೆ ಪಿಡಿಎಫ್ ಕಾಪಿ ಡೌನ್ ಲೋಡ್ ಮಾಡಲು ಕ್ಲಿಕ್ ಮಾಡಿ..DelhiPowerTussle Supreme Court Verdict

Share This Article
Leave a Comment

Leave a Reply

Your email address will not be published. Required fields are marked *