– ಬಿಡದಿ ಟೌನ್ಶಿಪ್ ಖಂಡಿಸಿ ರೈತರ ಉಪವಾಸ ಸತ್ಯಾಗ್ರಹ
ರಾಮನಗರ: ಬಿಡದಿ (Bidadi Township) ಹೋಬಳಿಯ ಭೈರಮಂಗಲ ಗ್ರಾಮದಲ್ಲಿ ರೈತರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಹಾಗೂ ಮಾಜಿ ಶಾಸಕ ಎ.ಮಂಜುನಾಥ್ ಭೇಟಿ ನೀಡಿ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿದರು.
ಈ ವೇಳೆ ಪ್ರತಿಭಟನಾ ಸ್ಥಳಕ್ಕೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು (H.D.Deve Gowda) ಬರಲೇಬೇಕು ಎಂದು ರೈತ ಮಹಿಳೆಯರು ಹಾಗೂ ರೈತ ಮುಖಂಡರು ನಿಖಿಲ್ ಕುಮಾರಸ್ವಾಮಿ ಎದುರು ಘೋಷಣೆಗಳನ್ನು ಕೂಗಿ ಪಟ್ಟು ಹಿಡಿದರು. ಬರಲೇಬೇಕು, ಬರಲೇಬೇಕು, ದೇವೇಗೌಡರು ಬರಲೇಬೇಕು ಎಂಬ ಕೂಗು ಮುಗಿಲು ಮುಟ್ಟಿತು. ರೈತರ ಒತ್ತಾಯಕ್ಕೆ ತಕ್ಷಣವೇ ಸ್ಪಂದಿಸಿದ ನಿಖಿಲ್ ಕುಮಾರಸ್ವಾಮಿ, ಸ್ಥಳದಲ್ಲೇ ಮಾಜಿ ಪ್ರಧಾನಿ ದೇವೇಗೌಡರಿಗೆ ವೀಡಿಯೋ ಕಾಲ್ ಮಾಡಿ ರೈತರೊಂದಿಗೆ ಮಾತನಾಡಿಸಿದರು. ಇದನ್ನೂ ಓದಿ: ಬಿಡದಿ ರೈತರ ಮೇಲೆ ದೌರ್ಜನ್ಯ – ಹಿರಣ್ಯಾಕ್ಷನ ಪಾಪದ ಕೊಡ ತುಂಬುತ್ತಿದೆ: ಹೆಚ್ಡಿಕೆ ಕಿಡಿ
ವೀಡಿಯೋ ಕಾಲ್ ಮೂಲಕ ರೈತರನ್ನು ಉದ್ದೇಶಿಸಿ ಮಾತನಾಡಿದ ಹೆಚ್.ಡಿ.ದೇವೇಗೌಡರು, ನನಗೆ ತೀವ್ರ ಹಲ್ಲು ನೋವು ಇರುವ ಕಾರಣ ವೈದ್ಯರ ಸಲಹೆಯಂತೆ ಪ್ರಸ್ತುತ ಸ್ಥಳಕ್ಕೆ ಬರಲು ಸಾಧ್ಯವಾಗಿಲ್ಲ. ಆದರೆ ರೈತರು ಯಾವುದೇ ಕಾರಣಕ್ಕೂ ಧೃತಿಗೆಡಬೇಡಿ, ನಿಮ್ಮ ಹೋರಾಟವನ್ನು ಮುಂದುವರೆಸಿ. ಪ್ರಾಣ ಹೋದರೂ ನಾನು ರೈತರನ್ನು ಬಿಟ್ಟುಕೊಡುವುದಿಲ್ಲ. ನಮ್ಮ ಕುಟುಂಬ ಮೊದಲಿನಿಂದಲೂ ರೈತರ ಪರವಾಗಿಯೇ ಹೋರಾಟ ಮಾಡಿಕೊಂಡು ಬಂದಿದೆ. ಅಗತ್ಯಬಿದ್ದರೆ ರೈತರ ಹಕ್ಕುಗಳಿಗಾಗಿ ವಿಧಾನಸೌಧದ ಮುಂದೆ ಧರಣಿ ಕುಳಿತುಕೊಳ್ಳಲು ಸಿದ್ಧ, ಜೈಲಿಗೆ ಹೋಗಲು ನಾನು ಸಿದ್ಧ ಎಂದು ರೈತರಿಗೆ ಧೈರ್ಯ ತುಂಬಿದರು.

