ರಾಜ್ಯದ ಹಿತಕ್ಕಾಗಿ ಯಾವುದೇ ಹೋರಾಟಕ್ಕೂ ಸಿದ್ಧ: ಡಿಕೆ ಸುರೇಶ್

Public TV
2 Min Read
DK Suresh

– ರಾಷ್ಟ್ರ ವಿಭಜನೆ ಹೇಳಿಕೆಯನ್ನು ಸಮರ್ಥಿಸಿಕೊಂಡ ಸಂಸದ

ಬೆಂಗಳೂರು: ರಾಜ್ಯದ ಜನರ ಹಿತ ಕಾಯಲು ನಾನು ಯಾವುದೇ ಹೋರಾಟಕ್ಕೂ ಸಿದ್ಧನಿದ್ದೇನೆ. ಕನ್ನಡಿಗರಿಗೆ ಅನ್ಯಾಯ ಆಗಿದೆ ಎಂದು ಮಾತನಾಡಿದರೆ ಅದನ್ನು ಬಿಜೆಪಿಯವರು ತಿರುಚಿ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದ್ದಾರೆ. ನಮ್ಮ ರಾಜ್ಯದ ಹಿತ ಕಾಯಲು ನಾನು ಹಿಂದೇಟು ಹಾಕುವ ಪ್ರಶ್ನೆಯೇ ಇಲ್ಲ ಎಂದು ಸಂಸದ ಡಿಕೆ ಸುರೇಶ್ (DK Suresh) ಬಿಜೆಪಿ  (BJP) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರು (Bengaluru) ಹೊರವಲಯದ ಬನ್ನೇರುಘಟ್ಟದಲ್ಲಿ ಕಾವೇರಿ ಕುಡಿಯುವ ನೀರಿನ ಯೋಜನೆಯ ಪೈಪ್‌ಲೈನ್ ಕಾಮಗಾರಿ ವೇಳೆ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನ್ನಡಿಗರಿಗೆ ಅನ್ಯಾಯ ಆಗಿದೆ ಎಂದು ನಾನು ಮಾತನಾಡಿದ್ದೆ. ಉತ್ತರ ಪ್ರದೇಶಕ್ಕೆ 33% ರಷ್ಟು ಹಣವನ್ನು ನೀಡುತ್ತಿದ್ದಾರೆ. ನಮ್ಮ ರಾಜ್ಯಕ್ಕೆ ತೆರಿಗೆಯ ಹಣವನ್ನು ವಾಪಸ್ ಕೊಡಿ ಎಂದು ಪ್ರಶ್ನೆ ಮಾಡಿದ್ದು ಹೇಗೆ ತಪ್ಪಾಗುತ್ತದೆ? ರಾಜ್ಯದಲ್ಲಿ ಬರಗಾಲ ತಾಂಡವ ಆಡುತ್ತಿದೆ. 224 ತಾಲೂಕು ಬರಗಾಲ ಪೀಡಿತ ತಾಲೂಕು ಎಂದು ಘೋಷಣೆ ಆಗಿದೆ. ಆದರೂ ಸಹ ರಾಜ್ಯಕ್ಕೆ ಅನ್ಯಾಯ ಆಗುತ್ತಿದೆ ಎಂದು ನಾನು ಮಾತನಾಡಿದ್ದೇನೆ. ಅದರಲ್ಲಿ ಯಾವುದೇ ಹಿಂಪಡೆಯುವ ಪ್ರಶ್ನೆ ಇಲ್ಲ. ನಾಡಿನ ಹಿತಕ್ಕೋಸ್ಕರ ನನ್ನ ಹೋರಾಟ ಎಂದರು. ಇದನ್ನೂ ಓದಿ: ಕೇಂದ್ರದಿಂದ ರಾಜ್ಯಕ್ಕೆ ನೀಡಿದ 20 ವರ್ಷದ ಅನುದಾನದ ಬಗ್ಗೆ ಶ್ವೇತಪತ್ರ ಹೊರಡಿಸಲಿ: ಆರ್.ಅಶೋಕ್

ಬಿಜೆಪಿಯವರು ಎಷ್ಟೇ ರಾಜಕಾರಣ ಮಾಡಿದರು ನನ್ನನ್ನು ನಾಯಕನನ್ನಾಗಿ ಮಾಡಲು ಅವರು ಹೊರಟಿದ್ದಾರೆ. ನನ್ನ ವಿರುದ್ಧ ಯಾವುದೇ ಠಾಣೆಯಲ್ಲಿ ಬೇಕಾದರೂ ದೂರನ್ನು ನೀಡಲಿ. ನಾನು ಹೋರಾಟ ಮಾಡಲು ಸಿದ್ಧನಿದ್ದೇನೆ. ಯಾವುದೇ ರಾಜ್ಯದ ಮುಖ್ಯಮಂತ್ರಿಯನ್ನು ಕ್ಷಣಮಾತ್ರದಲ್ಲಿ ಬದಲಾವಣೆ ಮಾಡುವ ಬಿಜೆಪಿಯವರಿಗೆ ಅಭಿವೃದ್ಧಿಯ ವಿಚಾರದಲ್ಲಿ ಸರಿಯಾದ ಹಿತಾಸಕ್ತಿ ಗೊತ್ತಾಗುವುದಿಲ್ಲವೇ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಸಿದ್ದರಾಮಯ್ಯ ಹೃದಯದಲ್ಲಿ ಟಿಪ್ಪು ಇದ್ದಾನೆ, ಅದಕ್ಕೆ ನಾಮ ಇಟ್ಟುಕೊಳ್ಳಲ್ಲ: ಆರ್.ಅಶೋಕ್

ನಿಮಗೆ ಬೇಕಾದಾಗ ಹೇಗೆ ಬೇಕಾದರೂ ಆಡಳಿತವನ್ನು ಮಾಡುತ್ತೀರಿ. ನನ್ನ ವಿರುದ್ಧ ಕೇಸ್ ಹಾಕಬೇಕು, ಅಮಾನತು ಮಾಡಬೇಕು ಎನ್ನುವುದು ಬಿಜೆಪಿಯವರ ಉದ್ದೇಶ ಆಗಿದ್ದು ನನ್ನ ಹಾಗೂ ದಕ್ಷಿಣ ಭಾರತದ ಜನರ ಪರ ನಾನು ಮಾತನಾಡಿದ್ದೇನೆ. ಇದನ್ನು ತಪ್ಪು ಎನ್ನುವ ಬಿಜೆಪಿಯವರು ಡೋಂಗಿ ಹಿಂದುತ್ವವಾದಿಗಳು. ಡೋಂಗಿ ಹಿಂದುತ್ವ ಇಟ್ಟುಕೊಂಡು ರಾಜಕಾರಣ ಮಾಡುತ್ತಿದ್ದೀರಿ. ಬಜೆಟ್‌ನಲ್ಲಿ ನಿಮಗೆ ದೇಶಕ್ಕೋಸ್ಕರ ಏನನ್ನೂ ಕೊಡಲು ಸಾಧ್ಯ ಆಗಿಲ್ಲ. ಇದನ್ನು ಮುಚ್ಚಿಕೊಳ್ಳಲು ನನ್ನ ಹೇಳಿಕೆಯನ್ನು ತಿರುಚಿ ರಾಜಕಾರಣ ಮಾಡಲಾಗುತ್ತಿದೆ ಎಂದು ಹರಿಹಾಯ್ದರು. ಇದನ್ನೂ ಓದಿ: ಸಿದ್ದರಾಮಯ್ಯ-ಡಿ.ಕೆ.ಸುರೇಶ್ ಪಾಕಿಸ್ತಾನ, ಬಾಂಗ್ಲಾದೇಶದಲ್ಲಿ ನೆಲೆಸುತ್ತಾರಾ?: ಯಶ್‌ಪಾಲ್ ಸುವರ್ಣ

Share This Article