IPL 2025 | ಜಿತೇಶ್‌ ನಾಯಕನ ಆಟಕ್ಕೆ ಲಕ್ನೋ ಧೂಳೀಪಟ – ಕ್ವಾಲಿಫೈಯರ್-1ಗೆ ಲಗ್ಗೆಯಿಟ್ಟ ಆರ್‌ಸಿಬಿ

Public TV
3 Min Read
Jitesh Sharma

– ದಾಖಲೆಯ ರನ್‌ ಚೇಸ್‌ನೊಂದಿಗೆ 6 ವಿಕೆಟ್‌ಗಳ ಅಮೋಘ ಜಯ

ಲಕ್ನೋ: ಜಿತೇಶ್‌ ಶರ್ಮಾ (Jitesh sharma) ನಾಯಕನ ಆಟಕ್ಕೆ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಲಕ್ನೋ ಸೂಪರ್‌ ಜೈಂಟ್ಸ್‌ (LSG) ವಿರುದ್ಧ 6 ವಿಕೆಟ್‌ಗಳ ಅಮೋಘ ಜಯ ಸಾಧಿಸಿದೆ. ಈ ಮೂಲಕ 18ನೇ ಆವೃತ್ತಿಯ ಲೀಗ್‌ ಪಂದ್ಯಗಳನ್ನು ಮುಗಿಸಿದ್ದು, ಕ್ವಾಲಿಫೈಯರ್‌-1ಗೆ ಲಗ್ಗೆಯಿಟ್ಟಿದೆ.

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ್ದ ಲಕ್ನೋ ತಂಡ ಪಂತ್‌ ಅಮೋಘ ಶತಕದ ನೆರವಿನಿಂದ 3 ವಿಕೆಟ್‌ ನಷ್ಟಕ್ಕೆ 227 ರನ್‌ ಗಳಿಸಿತ್ತು. ಬೃಹತ್‌ ಮೊತ್ತದ ಗುರಿ ಬೆನ್ನಟ್ಟಿದ ಆರ್‌ಸಿಬಿ (RCB) 18.4 ಓವರ್‌ಗಳಲ್ಲಿ ಕೇವಲ 4 ವಿಕೆಟ್‌ ನಷ್ಟಕ್ಕೆ 230 ರನ್‌ ಗಳಿಸಿ ಗೆದ್ದು ಬೀಗಿದೆ. ಈ ಮೂಲಕ ಏಕನಾ ಕ್ರೀಡಾಂಗಣದಲ್ಲಿ ಅತಿದೊಡ್ಡ ಮೊತ್ತ ಚೇಸಿಂಗ್‌ ಮಾಡಿದ ದಾಖಲೆಯನ್ನೂ ಬರೆದಿದೆ.

virat kohli 6

ಚೇಸಿಂಗ್‌ ಆರಂಭಿಸಿದ ಆರ್‌ಸಿಬಿ ಬಿರುಸಿನ ಆಟಕ್ಕೆ ಮುಂದಾಯಿತು. ಮೊದಲ ವಿಕೆಟಿಗೆ ವಿರಾಟ್‌ ಕೊಹ್ಲಿ (Virat Kohli), ಸಾಲ್ಟ್‌ ಜೋಡಿ 34 ಎಸೆತಗಳಲ್ಲಿ 61 ರನ್‌ಗಳ ಜೊತೆಯಾಟ ನೀಡಿತ್ತು. ಫಿಲ್‌ ಸಾಲ್ಟ್‌ 19 ಎಸೆತಗಳಲ್ಲಿ 30 ರನ್‌ಗಳಿಸಿ ಔಟಾಗುತ್ತಿದ್ದಂತೆ ರನ್‌ ವೇಗವೂ ಕಡಿತಗೊಂಡಿತ್ತು. ಅಲ್ಲದೇ ರಜ್‌ ಪಾಟೀದಾರ್‌, ಲಿಯಾಮ್‌ ಲಿವಿಂಗ್‌ಸ್ಟೋನ್‌ ಬ್ಯಾಟಕ್‌ ಟು ಬ್ಯಾಕ್‌ ವಿಕೆಟ್‌ ಒಪ್ಪಿಸಿದರು. ಇದರಿಂದ ಆರ್‌ಸಿಬಿಗೆ ಗೆಲುವು ಕಠಿಣವಾಗಿತ್ತು.

Rishabh Pant 3

ಮಯಾಂಕ್‌ ಜಿತೇಶ್‌ ಶತಕದ ಜೊತೆಯಾಟ:
ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೀಡಾಗಿದ್ದ ಆರ್‌ಸಿಬಿಗೆ ಜಿತೇಶ್‌ ಶರ್ಮಾ – ಮಯಾಂಕ್‌ ಅಗರ್ವಾಲ್‌ ಬ್ಯಾಟಿಂಗ್‌ನಲ್ಲಿ ಬಲ ತುಂಬಿದರು. ಮುರಿಯದ 5ನೇ ವಿಕೆಟಿಗೆ ಈ ಜೋಡಿ 45 ಎಸೆತಗಳಲ್ಲಿ ಸ್ಫೋಟಕ 107 ರನ್‌ ಬಾರಿಸಿತು. ಇದು ತಂಡದ ಗೆಲುವನ್ನು ಸುಲಭವಾಗಿಸಿತು. 257.57 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಜಿತೇಶ್‌ ಶರ್ಮಾ 33 ಎಸೆತಗಳಲ್ಲಿ 85 ರನ್‌ (6 ಸಿಕ್ಸರ್‌, 8 ಬೌಂಡರಿ) ಚಚ್ಚಿದ್ರೆ, ವಿರಾಟ್‌ ಕೊಹ್ಲಿ 54 ರನ್‌ (30 ಎಸೆತ, 10 ಬೌಂಡರಿ), ಮಯಾಂಕ್‌ ಅಗರ್ವಾಲ್‌ 41 ರನ್‌ (23 ಎಸೆತ, 5 ಬೌಂಡರಿ) ಫಿಲ್‌ ಸಾಲ್ಟ್‌ 30 ರನ್‌ (19 ಎಸೆತ, 6 ಬೌಂಡರಿ), ರಜತ್‌ ಪಾಟೀದಾರ್‌ 14 ರನ್‌ ಗಳಿಸಿದ್ರು.

RCB 1

ಲಕ್ನೋ ಪರ ರೂರ್ಕಿ 2 ವಿಕೆಟ್‌ ಕಿತ್ತರೆ, ಅಕಾಶ್‌ ಸಿಂಗ್‌, ಅವೇಶ್‌ ಖಾನ್‌ ತಲಾ ಒಂದೊಂದು ವಿಕೆಟ್‌ ಪಡೆದರು.

ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಲಕ್ನೋ 20 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 227 ರನ್‌ ಗಳಿಸಿತ್ತು. ಈಗಾಗಲೇ ಪ್ಲೇ ಆಫ್‌ನಿಂದ ಹೊರಬಿದ್ದಿರುವ ಲಕ್ನೋ ಕೊನೆಯ ಪಂದ್ಯದಲ್ಲಿ ಆರಂಭದಿಂದಲೇ ಸ್ಫೋಟಕ ಪ್ರದರ್ಶನಕ್ಕೆ ಮುಂದಾಯಿತು. 2.4 ಓವರ್‌ಗಳಲ್ಲಿ 25 ರನ್‌ಗಳಿದ್ದಾಗಲೇ ಮೊದಲ ವಿಕೆಟ್ ಕಳೆದುಕೊಂಡು ನಿರಾಸೆ ಅನುಭವಿಸಿತು. 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಪಂತ್ ಮತ್ತೊಬ್ಬ ಆರಂಭಿಕ ಮಿಚೆಲ್ ಮಾರ್ಷ್ ಜೊತೆಗೂಡಿ ಅಬ್ಬರಿಸಲು ಪ್ರಾರಂಭಿಸಿದರು. 2ನೇ ವಿಕೆಟಿಗೆ ಈ ಜೋಡಿ 78 ಎಸೆತಗಳಲ್ಲಿ ಬರೋಬ್ಬರಿ 152 ರನ್ ಜೊತೆಯಾಟ ನೀಡಿತ್ತು. ಇದರಿಂದ ಲಕ್ನೋ 200 ರನ್‌ಗಳ ಗಡಿ ದಾಟುವಲ್ಲಿ ಯಶಸ್ವಿಯಾಯಿತು.

Rishabh Pant 2

ಲಕ್ನೋ ಪರ 193.44 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ಪಂತ್ ಅಜೇಯ 118 ರನ್ (61 ಎಸೆತ, 8 ಸಿಕ್ಸರ್, 11 ಬೌಂಡರಿ), ಮಿಚೆಲ್ ಮಾರ್ಷ್ 67 ರನ್ ?(37 ಎಸೆತ, 5 ಸಿಕ್ಸರ್, 4 ಬೌಂಡರಿ), ಮ್ಯಾಥ್ಯೂ ಬ್ರೀಟ್ಜ್ಕೆ 14 ರನ್, ನಿಕೋಲಸ್ ಪೂರನ್ 13 ರನ್, ಅಬ್ದುಲ್ ಸಮದ್ 1 ರನ್ ಗಳಿಸಿದ್ರೆ, ಲೆಗ್‌ಬೈಸ್, ನೋಬಾಲ್, ವೈಡ್‌ನಿಂದ 14 ಹೆಚ್ಚುವರಿ ರನ್ ತಂಡಕ್ಕೆ ಸೇರ್ಪಡೆಯಾಯಿತು.

ಆರ್‌ಸಿಬಿ ಪರ ನುವಾನ್ ತುಷಾರ, ಭುವನೇಶ್ಚರ್ ಕುಮಾರ್, ರೊಮಾರಿಯೊ ಶೆಫರ್ಡ್ ತಲಾ ಒಂದೊಂದು ವಿಕೆಟ್ ಪಡೆದರು.

Share This Article