ಬೆಂಗಳೂರು: ಶನಿವಾರ ರಾತ್ರಿ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ಮತ್ತು ಸನ್‌ರೈಸರ್ಸ್ ಹೈದರಾಬಾದ್ (SRH) ನಡುವಿನ ಪಂದ್ಯಕ್ಕೆ ಶಾಸಕರಿಗೆ 1+1 ಟಿಕೆಟ್ ನೀಡಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(KSCA) ಒಪ್ಪಿಕೊಂಡಿದೆ.
ನಾಳಿನ ಪಂದ್ಯಕ್ಕೆ ಆಹ್ವಾನ ನೀಡಲು ಇಂದು ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ (Venkatesh Prasad) ಮತ್ತು ಪದಾಧಿಕಾರಿಗಳು ಸಿಎಂ ಸಿದ್ದರಾಮಯ್ಯ (CM Siddaramaiah) ಅವರನ್ನು ಕಾವೇರಿ ನಿವಾಸದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರನ್ನು ವಿಧಾನಸೌಧದಲ್ಲಿ ಭೇಟಿಯಾದರು. ಇದನ್ನೂ ಓದಿ: ಮೇ 31 ರಂದು ಬೆಂಗಳೂರಲ್ಲೇ ಐಪಿಎಲ್ ಫೈನಲ್ – 2ನೇ ಹಂತದ ವೇಳಾಪಟ್ಟಿ ರಿಲೀಸ್
ಭೇಟಿ ವೇಳೆ ಸಿಎಂ ಶಾಸಕರು ಐಪಿಎಲ್ (IPL) ಟಿಕೆಟ್ ವಿಚಾರವಾಗಿ ಬೇಡಿಕೆ ಇಟ್ಟಿದ್ದಾರೆ. ನಾಲ್ಕು ಟಿಕೆಟ್ ಕೊಡಿ ಎಂದು ಹೇಳಿದ್ದಾರೆ. ಇದಕ್ಕೆ ವೆಂಕಟೇಶ್ ಪ್ರಸಾದ್ ಆಯ್ತು ಎಂದಿದ್ದಾರೆ. ಕೆಎಸ್‌ಸಿಎ ಸದಸ್ಯರು ಆಗಿರುವ ಡಿಕೆಶಿ ಅವರು ಶಾಸಕರಿಗೆ ಟಿಕೆಟ್ ನೀಡುವಂತೆ ಸೂಚಿಸಿದ್ದಾರೆ.
ಈಗಾಗಲೇ ಟಿಕೆಟ್ ಮಾರಾಟವಾಗಿರುವ ಕಾರಣ ನಾಳಿನ ಪಂದ್ಯಕ್ಕೆ 1+1 ಟಿಕೆಟ್, ಮುಂದೆ ನಡೆಯಲಿರುವ ಪಂದ್ಯಕ್ಕೆ 4 ಟಿಕೆಟ್ ನೀಡುವ ಬಗ್ಗೆ ಕೆಎಸ್‌ಸಿಎ ಭರವಸೆ ನೀಡಿದೆ.
ಡಿಕೆಶಿ ಪ್ರತಿಕ್ರಿಯಿಸಿ, ಶಾಸಕರಿಗೆ ಟಿಕೆಟ್ ಕೇಳಲು ಹಕ್ಕಿದೆ. ಏಕೆಂದರೆ ಅವರು ಸರ್ಕಾರ ಹಾಗೂ ವ್ಯವಸ್ಥೆಯ ಭಾಗ. ಈಗ ನಾವು ಒತ್ತಡಗಳ ಮಧ್ಯೆ ಪಂದ್ಯ ಆಯೋಜನೆಗೆ ಅನುಮತಿ ನೀಡಿದ್ದೇವೆ. ನಾನು ಕೆಎಸ್‌ಸಿಎ ಸದಸ್ಯನಾಗಿರಬಹುದು. ಅದು ಬೇರೆ ಪ್ರಶ್ನೆ. ನಮ್ಮ ಶಾಸಕರಿಗೆ ಪಂದ್ಯ ವೀಕ್ಷಣೆಗೆ ಅವಕಾಶ ಕಲ್ಪಿಸುವ ಬಗ್ಗೆ ಕೆಎಸ್‌ಸಿಎ ಜೊತೆ ಚರ್ಚೆ ನಡೆಸುತ್ತೇನೆ ಎಂದರು.
ತೇಜಸ್ವಿಸೂರ್ಯ ಅವರು ಇದು ಅವಶ್ಯಕತೆ ಇರಲಿಲ್ಲ ಎಂದು ಹೇಳಿರುವ ಬಗ್ಗೆ ಕೇಳಿದಾಗ, ತೇಜಸ್ವಿ ಸೂರ್ಯ ಅವರ ಪಕ್ಷದ ನಾಯಕರಿಗೆ ಜ್ಞಾನ ನೀಡಲಿ. ನಮಗಲ್ಲ ಎಂದು ತಿರುಗೇಟು ನೀಡಿದರು.

