ಹೈದರಾಬಾದ್: ಹಾಲಿ ಚಾಂಪಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಸನ್‌ರೈಸರ್ಸ್ ಹೈದರಾಬಾದ್(SRH) ತಂಡಗಳು ಇಂದು ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಕಾದಾಟ ನಡೆಸಲಿವೆ. ಈ ಪಂದ್ಯದಲ್ಲಿ ಎಸ್‌ಆರ್‌ಹೆಚ್ ಗೆದ್ದು ಅಗ್ರ ಸ್ಥಾನಕ್ಕೆ ಲಗ್ಗೆಯಿಡಲು ಎದುರು ನೋಡುತ್ತಿದೆ. ಹೈದರಾಬಾದ್ ತಂಡಕ್ಕೆ ಅಗ್ರ ಎರಡರ ಸ್ಥಾನಕ್ಕೆ ಲಗ್ಗೆಯಿಡಲು ಗೆಲುವಿನ ಜೊತೆಗೆ ಉತ್ತಮ ರನ್‌ರೇಟ್ ಕಾಯ್ದುಕೊಳ್ಳವ ಒತ್ತಡವಿದೆ.
ಪಾಯಿಂಟ್ಸ್ ಟೇಬಲ್‌ನಲ್ಲಿ ಪ್ರಸ್ತುತ ಆರ್‌ಸಿಬಿ 13 ಪಂದ್ಯಗಳನ್ನಾಡಿದ್ದು, 9 ಪಂದ್ಯಗಳಲ್ಲಿ ಗೆಲುವು ಸಾಧಿಸಿ 18 ಅಂಕ ಹಾಗೂ +1.065 ರನ್ ರೇಟ್‌ನೊಂದಿಗೆ ಅಗ್ರ ಸ್ಥಾನದಲ್ಲಿದೆ. ಇತ್ತ ಹೈದರಾಬಾದ್ ತಂಡ ಕೂಡ 13 ಪಂದ್ಯಗಳಲ್ಲಿ 8ರಲ್ಲಿ ಗೆಲುವು ಸಾಧಿಸಿ 16 ಅಂಕ ಹಾಗೂ +0.695 ರನ್ ರೇಟ್‌ನೊಂದಿಗೆ 3ನೇ ಸ್ಥಾನದಲ್ಲಿದೆ.
ಆದಾಗ್ಯೂ, ಹೈದರಾಬಾದ್ ತಂಡಕ್ಕೆ ಈ ಪಂದ್ಯದಲ್ಲಿ ತಂಡ ಗೆದ್ದು ಮೊದಲೆರಡು ಸ್ಥಾನಕ್ಕೆ ಎಂಟ್ರಿ ಕೊಡಲು ಅವಕಾಶ ಇದೆ.
ಎಸ್‌ಆರ್‌ಹೆಚ್ ಟಾಪ್-2ಗೆ ಲಗ್ಗೆ ಇಡಲು ಇರುವ ಸಾಧ್ಯತೆಗಳು:
84-106 ರನ್ ಕಲೆಹಾಕಿದರೆ 83 ರನ್‌ಗಳಿಂದ ಗೆಲ್ಲಬೇಕು.
107-130 ರನ್ ಕಲೆಹಾಕಿದರೆ 84 ರನ್‌ಗಳಿಂದ ಗೆಲ್ಲಬೇಕು.
131-155 ರನ್ ಕಲೆಹಾಕಿದರೆ 85 ರನ್‌ಗಳಿಂದ ಗೆಲ್ಲಬೇಕು.
156-179 ರನ್ ಕಲೆಹಾಕಿದರೆ 86 ರನ್‌ಗಳಿಂದ ಗೆಲ್ಲಬೇಕು.
180-204 ರನ್ ಕಲೆಹಾಕಿದರೆ 87 ರನ್‌ಗಳಿಂದ ಗೆಲ್ಲಬೇಕು.
205-228 ರನ್ ಕಲೆಹಾಕಿದರೆ 88 ರನ್‌ಗಳಿಂದ ಗೆಲ್ಲಬೇಕು.
229-253 ರನ್ ಕಲೆಹಾಕಿದರೆ 89 ರನ್‌ಗಳಿಂದ ಗೆಲ್ಲಬೇಕು.
ಚೇಸ್ ಮಾಡಿದರೆ ಹೇಗೆ?
163 ರಿಂದ 300 ರನ್‌ಗಳ ಗುರಿಯನ್ನು 11 ಓವರ್‌ಗಳಲ್ಲಿ ತಲುಪಬೇಕು.
100 ರಿಂದ 162 ರನ್‌ಗಳ ಗುರಿಯನ್ನು 11.1 ಓವರ್‌ಗಳಲ್ಲಿ ಚೇಸ್ ಮಾಡಬೇಕು.

ಸಾಲ್ಟ್ ಕಣಕ್ಕೆ?
ಕಳೆದ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದ ಆರ್‌ಸಿಬಿ ತಂಡ ಗೆಲುವಿನ ವಿಶ್ವಾಸದಲ್ಲಿದೆ. ವಿರಾಟ್ ಕೊಹ್ಲಿಯವರು ಭರ್ಜರಿ ಫಾರ್ಮ್ನಲ್ಲಿದ್ದಾರೆ. ಇತ್ತ ದೇವದತ್ ಪಡಿಕಲ್ ಕೂಡ ಅತ್ಯುತ್ತಮ ಬ್ಯಾಟಿಂಗ್ ಲಯ ಕಂಡುಕೊಂಡಿದ್ದಾರೆ. ನಾಯಕ ರಜತ್ ಪಟಿದಾರ್ ಗಾಯದಿಂದ ಚೇತರಿಸಿಕೊಂಡಿದ್ದು ಇಂದು ಕಣಕ್ಕಿಳಿಯಲಿದ್ದಾರೆ. ಇದು ಆರ್‌ಸಿಬಿ ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ಗೆ ಮತ್ತಷ್ಟು ಬಲ ನೀಡಿದೆ. ಈ ನಡುವೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಗಾಯಕ್ಕೆ ತುತ್ತಾಗಿ ತವರಿಗೆ ಮರಳಿದ್ದ ಆರಂಭಿಕ ಆಟಗಾರ ಫಿಲ್ ಸಾಲ್ಟ್ ಭಾರತಕ್ಕೆ ವಾಪಸ್ಸಾಗಿದ್ದಾರೆ. ಅವರು ಅಭ್ಯಾಸ ನಡೆಸುತ್ತಿರುವ ಫೋಟೊಗಳನ್ನು ಆರ್‌ಸಿಬಿಯ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ಒಂದು ವೇಳೆ ಸಾಲ್ಟ್ ಕಣಕ್ಕಿಳಿದರೆ ಆರ್‌ಸಿಬಿಯ ಬ್ಯಾಟಿಂಗ್ ಪಡೆಗೆ ಆನೆ ಬಲ ಬಂದಂತಾಗುತ್ತದೆ.
ಆರ್‌ಸಿಬಿ ಬೌಲಿಂಗ್ ವಿಭಾಗದಲ್ಲೂ ಕೂಡ ಬಲಿಷ್ಠವಾಗಿದೆ. ಭುವನೇಶ್ವರ್ ಕುಮಾರ್ ಅತ್ಯುತ್ತಮವಾಗಿ ಬೌಲ್ ಮಾಡುತ್ತಿದ್ದಾರೆ. ಇನ್ನಿಂಗ್ಸ್ನ ಆರಂಭದಲ್ಲೇ ವಿಕೆಟ್ ಕಿತ್ತು ತಂಡಕ್ಕೆ ನೆರವಾಗುತ್ತಿದ್ದಾರೆ. ಅವರು ಆಡಿರುವ 13 ಪಂದ್ಯಗಳಲ್ಲಿ 14 ವಿಕೆಟ್ ಕಬಳಿಸಿ ಆರ್‌ಸಿಬಿ ಪ್ಲೇಆಫ್ ತಲುಪಲು ಪ್ರಮುಖ ಪಾತ್ರ ವಹಿಸಿದ್ದಾರೆ. ಇನ್ನೊಂದೆಡೆ ಜೋಶ್ ಹೇಜಲ್‌ವುಡ್ ಹಾಗೂ ಆಲ್‌ರೌಂಡರ್ ಕೃನಾಲ್ ಪಾಂಡ್ಯ ನಿಯಮಿತವಾಗಿ ವಿಕೆಟ್ ಪಡೆದು ತಂಡಕ್ಕೆ ನೆರವಾಗುತ್ತಿದ್ದಾರೆ. ಸುಯಶ್ ಶರ್ಮಾ ಹಾಗೂ ರಾಸಿಕ್ ಸಲಾಂ ಹಿರಿಯ ಬೌಲರ್‌ಗಳಿಗೆ ಸಾಥ್ ನೀಡುತ್ತಿದ್ದಾರೆ.

ಗೆಲುವಿನ ವಿಶ್ವಾಸದಲ್ಲಿ ಎಸ್‌ಆರ್‌ಹೆಚ್:
ಈ ಆವೃತ್ತಿಯಲ್ಲಿ ಹೈದರಾಬಾದ್ ಕೂಡ ಉತ್ತಮ ಪ್ರದರ್ಶನ ನೀಡಿದೆ. ಅಭಿಷೇಕ್ ಶರ್ಮಾ ಹಾಗೂ ಇಶಾನ್ ಕಿಶನ್ ತಂಡಕ್ಕೆ ಉತ್ತಮ ಆರಂಭ ಒದಗಿಸುತ್ತಿದ್ದಾರೆ. ಈ ಮೂಲಕ ಎಸ್‌ಆರ್‌ಹೆಚ್ ಪವರ್ ಪ್ಲೇನಲ್ಲಿ ಮೇಲುಗೈ ಸಾಧಿಸಲು ನೆರವಾಗುತ್ತಿದ್ದಾರೆ. ಆದರೆ, ಟ್ರಾವಿಸ್ ಹೆಡ್ ಬ್ಯಾಟ್‌ನಿಂದ ನಿರೀಕ್ಷಿತ ಪ್ರದರ್ಶನ ಬರುತ್ತಿಲ್ಲ. ಇದು ಎಸ್‌ಆರ್‌ಹೆಚ್‌ಗೆ ಸ್ವಲ್ಪ ಹಿನ್ನಡೆಯನ್ನುಂಟು ಮಾಡಬಹುದು.
ಹೆನ್ರಿಚ್ ಕ್ಲಾಸೆನ್ ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ನೆರವಾಗುತ್ತಿದ್ದಾರೆ. ಸ್ಪಿನ್ ಹಾಗೂ ವೇಗದ ಬೌಲರ್ಸ್ ಇಬ್ಬರ ವಿರುದ್ಧವೂ ಕೂಡ ಅವರು ಉತ್ತಮವಾಗಿ ಬ್ಯಾಟ್ ಮಾಡುತ್ತಾರೆ. ಆದರೆ ಕೆಲವೊಂದು ಪಂದ್ಯಗಳಲ್ಲಿ ಸ್ಪೋಟಕವಾಗಿ ಬ್ಯಾಟ್ ಬೀಸಲು ಮುಂದಾಗಿ ವಿಕೆಟ್ ಒಪ್ಪಿಸಿದ್ದಾರೆ. ನಾಯಕ ಪ್ಯಾಟ್ ಕಮ್ಮಿನ್ಸ್ ಕೂಡ ಬ್ಯಾಟಿಂಗ್ ಕ್ಷಮತೆ ಹೊಂದಿದ್ದಾರೆ.
ಬೌಲಿಂಗ್‌ನಲ್ಲಿ ಶ್ರೀಲಂಕಾದ ಯುವ ವೇಗಿ ಈಶಾನ್ ಮಾಲಿಂಗ ಈ ಆವೃತ್ತಿಯಲ್ಲಿ ಹೈದರಾಬಾದ್ ಪರ 17 ವಿಕೆಟ್ ಕಿತ್ತು ಉತ್ತಮ ಪ್ರದರ್ಶನ ನೀಡಿದ್ದಾರೆ. ಇವರಿಗೆ ಸಕೀಬ್ ಹುಸೇನ್ ಸಾಥ್ ನೀಡುತ್ತಿದ್ದಾರೆ.
ಆರ್‌ಸಿಬಿ ಹಾಗೂ ಎಸ್‌ಆರ್‌ಹೆಚ್ ಮುಖಾಮುಖಿ
ಆರ್‌ಸಿಬಿ ಮತ್ತು ಎಸ್‌ಆರ್‌ಹೆಚ್ ಒಟ್ಟು 26 ಪಂದ್ಯಗಳನ್ನಾಡಿದ್ದು, ಹೈದರಾಬಾದ್ 14 ಪಂದ್ಯಗಳಲ್ಲಿ ಗೆದ್ದು ಮುನ್ನಡೆ ಸಾಧಿಸಿದೆ. ಆರ್‌ಸಿಬಿ ಹೈದರಾಬಾದ್ ಪಿಚ್‌ನಲ್ಲಿ ಆಡಿರುವ 9 ಪಂದ್ಯಗಳಲ್ಲಿ 6 ರಲ್ಲಿ ಜಯ ಸಾಧಿಸಿದೆ.
ಪಿಚ್ ರಿಪೋರ್ಟ್ ಹೇಗಿದೆ?
ಇದು ಬ್ಯಾಟಿಂಗ್ ಸ್ನೇಹಿ ಪಿಚ್ ಆಗಿರುವ ಕಾರಣ ರನ್ ಹೊಳೆ ಹರಿಯುವ ಸಾಧ್ಯತೆ ಇದೆ. ಇದೇ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಎಸ್‌ಆರ್‌ಹೆಚ್ 2 ವಿಕೆಟ್ ನಷ್ಟಕ್ಕೆ 242 ರನ್ ಕಲೆಹಾಕಿತ್ತು. ಪಂಜಾಬ್ ವಿರುದ್ಧವೂ ಕೂಡ ಎಸ್‌ಆರ್‌ಹೆಚ್ 4 ವಿಕೆಟ್ ನಷ್ಟಕ್ಕೆ 234 ರನ್ ಕಲೆಹಾಕಿತ್ತು. ಇವೆರಡೂ ಪಂದ್ಯಗಳನ್ನು ಹೈದರಾಬಾದ್ ಸುಲಭವಾಗಿ ಗೆದ್ದುಕೊಂಡಿತ್ತು. ಹಾಗಾಗಿ ಇವತ್ತಿನ ಪಂದ್ಯದಲ್ಲೂ ಕೂಡ ಬೃಹತ್ ಮೊತ್ತ ಕಲೆಹಾಕುವ ಸಾಧ್ಯತೆಯಿದೆ. ಇಲ್ಲಿ ಟಾಸ್ ಗೆದ್ದ ತಂಡ ಸಾಮಾನ್ಯವಾಗಿ ಬೌಲಿಂಗ್ ಆಯ್ದುಕೊಳ್ಳುತ್ತದೆ.

ಆರ್‌ಸಿಬಿ ಸಂಭಾವ್ಯ ಪ್ಲೇಯಿಂಗ್-11:
ವಿರಾಟ್ ಕೊಹ್ಲಿ, ಜಾಕೋಬ್ ಬೆಥೆಲ್, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಟಿಮ್ ಡೇವಿಡ್, ಜಿತೇಶ್ ಶರ್ಮಾ (ವಿ.ಕೀ), ರೊಮಾರಿಯೋ ಶೆಫರ್ಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ರಾಸಿಖ್ ಸಲಾಂ, ಜೋಶ್ ಹೇಜಲ್‌ವುಡ್
ಎಸ್‌ಆರ್‌ಹೆಚ್ ಸಂಭಾವ್ಯ ಪ್ಲೇಯಿಂಗ್-11
ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್, ಇಶಾನ್ ಕಿಶನ್ (ವಿ.ಕೀ), ಹೆನ್ರಿಚ್ ಕ್ಲಾಸೆನ್, ಸಲೀಲ್ ಅರೋರಾ, ಆರ್. ಸ್ಮರನ್, ನಿತೀಶ್ ಕುಮಾರ್ ರೆಡ್ಡಿ, ಪ್ಯಾಟ್ ಕಮಿನ್ಸ್ (ನಾಯಕ), ಶಿವಂಗ್ ಕುಮಾರ್, ಈಶಾನ್ ಮಾಲಿಂಗ, ಸಾಕಿಬ್ ಹುಸೇನ್.

