ಬೆಂಗಳೂರು: ಟೀಂ ಇಂಡಿಯಾದ ಮಾಜಿ ನಾಯಕ, ಆರ್‌ಸಿಬಿ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ (Virat Kohli) ಇಂಪೋಸ್ಟರ್ ಸಿಂಡ್ರೋಮ್‌ನಿಂದ (Impostor Syndrome) ಬಳಲಿದ್ದ ವಿಚಾರವನ್ನು ಉಲ್ಲೇಖಿಸಿದ್ದಾರೆ.
ಕೊಹ್ಲಿ ಅವರು ತಾವು ಎದುರಿಸಿದ ಮಾನಸಿಕ ಒತ್ತಡದ ಬಗ್ಗೆ ಮಾತನಾಡುವಾಗ ‘ಇಂಪೋಸ್ಟರ್ ಸಿಂಡ್ರೋಮ್’ ಬಗ್ಗೆ ಉಲ್ಲೇಖಿಸಿದ್ದಾರೆ. ಇದು ಯಾವುದೇ ದೈಹಿಕ ಕಾಯಿಲೆಯಲ್ಲ, ಬದಲಿಗೆ ಇದೊಂದು ಮಾನಸಿಕ ಸ್ಥಿತಿ ಅಥವಾ ವಿದ್ಯಮಾನವಾಗಿದೆ.
ಬೆಂಗಳೂರಿನಲ್ಲಿ ನಡೆದ ಕ್ರೀಡಾ ಸಂವಾದವೊಂದರಲ್ಲಿ ಮಾತನಾಡಿದ ಅವರು, ಕಪ್ತಾನ ಸ್ಥಾನದಿಂದ ಕೆಳಗಿಳಿದ ನಂತರದ ಕಠಿಣ ದಿನಗಳಲ್ಲಿ ತಾವು ಈ ಸಿಂಡ್ರೋಮ್‌ನಿಂದ ಬಳಲಿದ್ದಾಗಿ ಬಹಿರಂಗಪಡಿಸಿದ್ದಾರೆ. ಆ ಸಮಯದಲ್ಲಿ ಮಾಜಿ ತರಬೇತುದಾರ ರಾಹುಲ್ ದ್ರಾವಿಡ್ (Rahul Dravid) ಮತ್ತು ವಿಕ್ರಮ್ ರಾಥೋಡ್ ತಮ್ಮ ಬೆಂಬಲಕ್ಕೆ ನಿಂತರು ಎಂದು ಅವರು ನೆನೆದಿದ್ದಾರೆ.
ಕೊಹ್ಲಿ ತಮ್ಮ 20 ವರ್ಷಗಳ ಸುದೀರ್ಘ ಕ್ರಿಕೆಟ್ ಜೀವನದ ನಂತರವೂ ಈ ರೀತಿಯ ಅಭದ್ರತೆ ಕಾಡುತ್ತದೆ ಎಂದಿದ್ದಾರೆ. ತಾವು ನೆಟ್ಸ್‌ನಲ್ಲಿ ಬ್ಯಾಟಿಂಗ್ ಮಾಡುವಾಗ ಕಿರಿಯ ಆಟಗಾರರು ನೋಡುತ್ತಿದ್ದರೆ, “ಒಂದು ವೇಳೆ ನಾನು ಸರಿಯಾಗಿ ಆಡದಿದ್ದರೆ, ಇವನೇನಾ 20 ವರ್ಷ ಆಡಿರೋದು ಎಂದು ಅವರು ಯೋಚಿಸಬಹುದು” ಎಂಬ ಆತಂಕ ಇಂದಿಗೂ ಸಣ್ಣದಾಗಿ ಮೂಡುತ್ತದೆ ಎಂದು ಮುಕ್ತವಾಗಿ ಒಪ್ಪಿಕೊಂಡಿದ್ದಾರೆ.
View this post on Instagram
ಆ ಕಠಿಣ ಸಮಯದಲ್ಲಿ ಅಂದಿನ ಮುಖ್ಯ ತರಬೇತುದಾರ ರಾಹುಲ್ ದ್ರಾವಿಡ್ ಮತ್ತು ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ನನ್ನನ್ನು ತುಂಬಾ ಚೆನ್ನಾಗಿ ಅರ್ಥಮಾಡಿಕೊಂಡರು. ರಾಹುಲ್ ಭಾಯ್ ತಮ್ಮ ವೃತ್ತಿಜೀವನದಲ್ಲೂ ಇಂತಹ ಹಂತವನ್ನು ನೋಡಿದ್ದರಿಂದ ಅವರಿಗೆ ನನ್ನ ಮನಸ್ಥಿತಿ ಚೆನ್ನಾಗಿ ಅರ್ಥವಾಯಿತು. ಅವರಿಬ್ಬರೂ ನನ್ನನ್ನು ಮಾನಸಿಕವಾಗಿ ತುಂಬಾ ಚೆನ್ನಾಗಿ ನೋಡಿಕೊಂಡಿದ್ದರಿಂದಲೇ ನಾನು ಮತ್ತೆ ಕ್ರಿಕೆಟ್ ಅನ್ನು ಮುಕ್ತವಾಗಿ ಆನಂದಿಸಲು ಸಾಧ್ಯವಾಯಿತು ಎಂದಿದ್ದಾರೆ.
ನಾನು ಮಾನಸಿಕವಾಗಿ ಕುಗ್ಗಿದ್ದೇನೆ ಎಂದು ಒಪ್ಪಿಕೊಳ್ಳಲು ನನಗೇನೂ ಸಂಕೋಚವಿಲ್ಲ. ನಾವು ಮಾನಸಿಕವಾಗಿ ದುರ್ಬಲರು ಎಂದು ಇತರರು ಭಾವಿಸಬಾರದು ಎಂಬ ಕಾರಣಕ್ಕೆ ನಮ್ಮ ಭಾವನೆಗಳನ್ನು ಮುಚ್ಚಿಡುತ್ತೇವೆ. ಆದರೆ ನೆನಪಿಡಿ, ನಾವೇನೋ ಗಟ್ಟಿಯಾಗಿದ್ದೇವೆ ಎಂದು ಸುಳ್ಳು ಪ್ರದರ್ಶನ ನೀಡುವುದು ನಾವು ದುರ್ಬಲರಾಗಿದ್ದೇವೆ ಎಂದು ಒಪ್ಪಿಕೊಳ್ಳುವುದಕ್ಕಿಂತಲೂ ತುಂಬಾ ಅಪಾಯಕಾರಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಇಂಪೋಸ್ಟರ್ ಸಿಂಡ್ರೋಮ್ ಎಂದರೇನು?
ವ್ಯಕ್ತಿಯು ತಾನು ಎಷ್ಟೇ ಯಶಸ್ಸು ಸಾಧಿಸಿದ್ದರೂ, ತನ್ನ ಸಾಮರ್ಥ್ಯದ ಮೇಲೆ ತನಗೇ ನಂಬಿಕೆ ಇರುವುದಿಲ್ಲ. ತಮ್ಮ ಯಶಸ್ಸು ಕೇವಲ ಅದೃಷ್ಟ ಅಥವಾ ಆಕಸ್ಮಿಕದಿಂದ ಬಂದಿದ್ದು, ತಾವು ಅದಕ್ಕೆ ನಿಜವಾಗಿಯೂ ಅರ್ಹರಲ್ಲ ಎಂದು ಭಾವಿಸುತ್ತಾರೆ.
ಇತರರು ತನ್ನನ್ನು ಜಾಣ ಅಥವಾ ಸಮರ್ಥ ಎಂದು ಅಂದುಕೊಂಡಿರುತ್ತಾರೆ, ಆದರೆ ನಾನು ಅಷ್ಟು ಸಮರ್ಥನಲ್ಲ ಎನ್ನುವುದು ಎಲ್ಲರಿಗೂ ಎಲ್ಲೋ ಒಂದು ದಿನ ಗೊತ್ತಾಗಿಬಿಡುತ್ತದೆ ಎಂಬ ಆತಂಕ ಸದಾ ಕಾಡುತ್ತಿರುತ್ತದೆ.
ಜಗತ್ತಿನ ಪ್ರಸಿದ್ಧ ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೈನ್, ನಟ ಟಾಮ್ ಹ್ಯಾಂಕ್ಸ್ ಮುಂತಾದ ಮಹಾನ್ ಸಾಧಕರೂ ಕೂಡ ತಮ್ಮ ಜೀವನದ ಯಾವುದೋ ಒಂದು ಹಂತದಲ್ಲಿ ಈ ಮಾನಸಿಕ ಸ್ಥಿತಿಯನ್ನು ಅನುಭವಿಸಿದ್ದರು.

