RCB, ಗುಜರಾತ್‌, ಪಂಜಾಬ್‌ ಪ್ಲೇ-ಆಫ್‌ಗೆ ಎಂಟ್ರಿ – ಡೆಲ್ಲಿ ವಿರುದ್ಧ ನೋ ಲಾಸ್‌ನಲ್ಲಿ ಟೈಟಾನ್ಸ್‌ ಪಾಸ್‌

Public TV
2 Min Read
RCB

ನವದೆಹಲಿ: 18ನೇ ಆವೃತ್ತಿಯ ಐಪಿಎಲ್‌ನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು, ಗುಜರಾತ್‌ ಟೈಟಾನ್ಸ್‌ ಹಾಗೂ ಪಂಜಾಬ್‌ ಕಿಂಗ್ಸ್‌ ತಂಡಗಳು ಪ್ಲೇ ಆಫ್‌ಗೆ ಲಗ್ಗೆಯಿಟ್ಟಿವೆ. ಇಂದು ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ನಡೆದ ಪಂದ್ಯದಲ್ಲಿ ಗುಜರಾತ್‌ 10 ವಿಕೆಟ್‌ಗಳ ಜಯ ಸಾಧಿಸಿದ ಬಳಿಕ ಮೂರು ತಂಡಗಳು ಪ್ಲೇ ಆಫ್‌ಗೆ ಅರ್ಹತೆ ಪಡೆದುಕೊಂಡಿವೆ. ಗುಜರಾತ್‌ 12ರಲ್ಲಿ 9 ಪಂದ್ಯ ಗೆದ್ದು 18 ಅಂಕ, ಆರ್‌ಸಿಬಿ ಹಾಗೂ ಪಂಜಾಬ್‌ 12ರಲ್ಲಿ ತಲಾ 8 ಪಂದ್ಯ ಗೆದ್ದು 17 ಅಂಕಗಳೊಂದಿಗೆ ಪ್ಲೇ ಆಫ್‌ಗೆ ಎಂಟ್ರಿ ಕೊಟ್ಟಿವೆ.

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ 10ನೇ ಬಾರಿಗೆ ಪ್ಲೇ ಆಫ್‌ ಪ್ರವೇಶಿಸಿದ್ರೆ, ಗುಜರಾತ್‌ ಟೈಟಾನ್ಸ್‌ 3ನೇ ಬಾರಿಗೆ ಹಾಗೂ ಪಂಜಾಬ್‌ ಕಿಂಗ್ಸ್‌ 11 ವರ್ಷಗಳ ಬಳಿಕ ಪ್ಲೇ ಆಫ್‌ಗೆ ಅರ್ಹತೆ ಪಡೆದುಕೊಂಡಿದೆ.

4e4364bd 59ee 44f2 bf00 dbbd77b49fb5

2022ರಲ್ಲಿ ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದ ಗುಜರಾತ್‌ ಟೈಟಾನ್ಸ್‌ ಆರಂಭಿಕ 2 ಆವೃತ್ತಿಗಳಲ್ಲಿ ಆವೃತ್ತಿಗಳಲ್ಲೂ ಹಾರ್ದಿಕ್‌ ಪಾಂಡ್ಯ ನಾಯಕತ್ವದಲ್ಲಿ ಪ್ಲೇ ಆಫ್‌ ಪ್ರವೇಶಿಸಿತ್ತು. ಆದ್ರೆ 2024ರ ಆವೃತ್ತಿಯಲ್ಲಿ ಶುಭಮನ್‌ ಗಿಲ್‌ ನಾಯಕತ್ವದಲ್ಲಿ ಟೈಟಾನ್ಸ್‌ ಪಡೆ ಲೀಗ್‌ ಸುತ್ತಿನಲ್ಲೇ ಹೊರಬಿದ್ದಿತ್ತು. ಇನ್ನೂ 2014ರಲ್ಲಿ ಕೊನೆಯ ಬಾರಿಗೆ ಪ್ಲೇ ಆಫ್‌ ಪ್ರವೇಶಿಸಿದ್ದ ಪಂಜಾಬ್‌ ಕಿಂಗ್ಸ್‌ ಇದೀಗ 11 ವರ್ಷಗಳ ಬಳಿಕ ಶ್ರೇಯಸ್‌ ಅಯ್ಯರ್‌ ನಾಯಕತ್ವದಲ್ಲಿ ಪ್ಲೇ ಆಫ್‌ಗೆ ಎಂಟ್ರಿ ಕೊಟ್ಟಿದೆ.

59547cb3 81f9 4bea 8f6f 32383829454f

ಡೆಲ್ಲಿ ನೀಡಿದ 200 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಗುಜರಾತ್‌ ಒಂದೂ ವಿಕೆಟ್‌ ಕಳೆದುಕೊಳ್ಳದೇ 19 ಓವರ್‌ಗಳಲ್ಲಿ ಗುರಿ ತಲುಪುವಲ್ಲಿ ಯಶಸ್ವಿಯಾಯಿತು. ತಂಡದ ಪರ ಸಾಯಿ ಸುದರ್ಶನ್‌ 4 ಸಿಕ್ಸರ್‌ , 12 ಬೌಂಡರಿ ಸಿಡಿಸಿ 108 ರನ್‌, ಶುಭಮನ್‌ಗಿಲ್‌ 7 ಸಿಕ್ಸರ್‌ 3 ಬೌಂಡರಿ ನೆರವಿಂದ 93 ರನ್‌ ಗಳಿಸಿ ತಂಡಕ್ಕೆ ಜಯ ತಂದುಕೊಟ್ಟರು.

ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್, ಕೆ.ಎಲ್. ರಾಹುಲ್ ಆಕರ್ಷಕ ಶತಕದ ನೆರವಿನಿಂದ 20 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 199 ರನ್ ಕಲೆ ಹಾಕಿತು. ಆರಂಭದಿಂದಲೂ ಅಬ್ಬರದ ಆಟ ಆಡಿದ ಕೆ.ಎಲ್. ರಾಹುಲ್ 65 ಎಸೆತಗಳಲ್ಲಿ 4 ಸಿಕ್ಸರ್‌ 14 ಬೌಂಡರಿ ನೆರವಿನಿಂದ 112 ಚಚ್ಚಿ ಮಿಂಚಿದರು.

ಟಾಸ್ ಗೆದ್ದ ಗುಜರಾತ್ ಟೈಟನ್ಸ್ ತಂಡದ ನಿರೀಕ್ಷೆ ತಲೆಕೆಳಗಾಗುವಂತೆ ಮಾಡಿದ್ದ ಕೆ.ಎಲ್ ರಾಹುಲ್. ಕೊನೆವರೆಗೂ ಅವರನ್ನು ಔಟ್ ಮಾಡಲು ಗುಜರಾತ್ ತಂಡದ ಶ್ರಮ ವ್ಯರ್ಥವಾಯಿತು. ತಂಡದ ಪರ ಅಭಿಷೇಕ್ ಪೋರೆಲ್ 30, ಅಕ್ಷರ್ ಪಟೇಲ್ 25 ರನ್ ಬಾರಿಸಿ ನಿರ್ಗಮಿಸಿದರು. ಟ್ರಿಸ್ಟನ್‌ ಸ್ಟಬ್ಸ್‌ 25 ರನ್‌ಗಳ ಕೊಡುಗೆ ನೀಡಿದರು. ಡುಪ್ಲೆಸಿಸ್ 5 ರನ್‌ಗಳಿಸಿ ಬೇಗ ನಿರ್ಗಮಿಸಿದರು.

ಗುಜರಾತ್‌ ಪರ ಅರ್ಷದ್ ಖಾನ್, ಪ್ರಸಿದ್ಧ್ ಕೃಷ್ಣ, ರಶೀದ್ ಖಾನ್ ತಲಾ ಒಂದೊಂದು ವಿಕೆಟ್‌ ಕಬಳಿಸಿದರು.

Share This Article