ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (RBI) ಸತತ 10ನೇ ಬಾರಿಗೆ ರೆಪೋ ದರವನ್ನು (Repo Rate) ಯಥಾಸ್ಥಿತಿಯಲ್ಲೇ ಮುಂದುವರಿಸಿದೆ.
ಗವರ್ನರ್ ಶಕ್ತಿಕಾಂತ ದಾಸ್ (Shaktikanta Das) ನೇತೃತ್ವದಲ್ಲಿ ಬುಧವಾರ (ಅ.9) 6 ಸದಸ್ಯರ ಹಣಕಾಸು ನೀತಿ ಸಮಿತಿ (MPC) ಸಭೆ ನಡೆಸಿತು. ಈ ಪೈಕಿ ಮೂವರು ಹೊಸ ಸದಸ್ಯರನ್ನು ಎಂಪಿಸಿಗೆ ಸೇರ್ಪಡೆಗೊಳಿಸಲಾಯಿತು. ದೆಹಲಿ ವಿವಿಯ (Dehli University) ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್ ನಿರ್ದೇಶಕ ಪ್ರೊಫೆಸರ್ ರಾಮ್ ಸಿಂಗ್, ಅರ್ಥಶಾಸ್ತ್ರಜ್ಷ ಸೌಗತ ಭಟ್ಟಾಚಾರ್ಯ, ಕೈಗಾರಿಕಾ ಅಭಿವೃದ್ಧಿಯ ಅಧ್ಯಯನಗಳ ಸಂಸ್ಥೆಯ ಸಿಇಒ ಡಾ.ನಾಗೇಶ್ ಕುಮಾರ್ ನೂತನ ಸದಸ್ಯರು. ಇದನ್ನೂ ಓದಿ: Haryana Assembly Elections: ಭಾರತದ ಶ್ರೀಮಂತ ಮಹಿಳೆ ಸಾವಿತ್ರಿ ಜಿಂದಾಲ್‌ಗೆ ಗೆಲುವು
ಸಭೆಯ ಬಳಿಕ ನಿರ್ಧಾರಗಳ ಬಗ್ಗೆ ಮಾಹಿತಿ ನೀಡಿದ ಶಕ್ತಿಕಾಂತ ದಾಸ್, 2024-25ನೇ ಸಾಲಿನ ಹಣಕಾಸು ವರ್ಷದಲ್ಲಿ ದೇಶದ ಜಿಡಿಪಿ ಬೆಳವಣಿಗೆಯು 7.2% ರಷ್ಟಾಗುವ ಮುನ್ಸೂಚನೆ ಇದೆ. ರೆಪೋ ದರದಲ್ಲಿ ಯಾವುದೇ ಬದಲಾವಣೆ ತರದೇ 6.5% ನಲ್ಲೇ ಮುಂದುವರಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಸಭೆಯಲ್ಲಿ ಭಾಗವಹಿಸಿದ್ದ ಸದಸ್ಯರಲ್ಲಿ ಪೈಕಿ 5:1 ರಷ್ಟು ಸದಸ್ಯರು ಈ ನಿರ್ಧಾರಕ್ಕೆ ಸಮ್ಮತಿ ಸೂಚಿಸಿದರು ಎಂದು ತಿಳಿಸಿದರು.
ಕಳೆದ ಆಗಸ್ಟ್‌ನಲ್ಲಿ ನಡೆದ ಸಭೆಯಲ್ಲೂ ಆರ್‌ಬಿಐ ಇದೇ ದರವನ್ನು ಕಾಯ್ದುಕೊಂಡಿತ್ತು. ಕೊನೆಯದ್ದಾಗಿ 2023ರ ಫೆಬ್ರವರಿ 8ರಂದು ನಡೆದ ಸಭೆಯಲ್ಲಿ ಆರ್‌ಬಿಐ ರೆಪೋ ದರ ಏರಿಕೆ ಮಾಡಿತ್ತು. ಇದನ್ನೂ ಓದಿ: 5 ಸ್ಟಾರ್ ಹೋಟೆಲ್‌ಗಳಲ್ಲೇ ಇರುವವರು ಜಾತಿ ಆಧಾರದಲ್ಲಿ ಬಡವರನ್ನ ಒಡೆಯುತ್ತಿದ್ದಾರೆ: ರಾಗಾಗೆ ಮೋದಿ ಚಾಟಿ
ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿದರವನ್ನು ಇಳಿಕೆ ಮಾಡಿದ ಬೆನ್ನಲ್ಲೇ ಭಾರತದಲ್ಲೂ ಆರ್‌ಬಿಐ ಬಡ್ಡಿ ದರವನ್ನು ಇಳಿಕೆ ಮಾಡಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಇಸ್ರೇಲ್-ಇರಾನ್ ನಡುವೆ ಯುದ್ಧ ಭೀತಿಯಿಂದಾಗಿ ಬಡ್ಡಿದರವನ್ನು ಇಳಿಸದ ಆರ್‌ಬಿಐ ಯಥಾಸ್ಥಿತಿಯನ್ನೇ ಕಾಯ್ದುಕೊಂಡಿದೆ. ಇದನ್ನೂ ಓದಿ: ಭೂಪಿಂದರ್ ಹೂಡಾಗೆ ಮಣೆ ಹಾಕಿ ಕೈ ಸುಟ್ಟುಕೊಂಡ ಕಾಂಗ್ರೆಸ್!
ರೆಪೋ ರೇಟ್ ಎಂದರೇನು?
ವಾಣಿಜ್ಯ ಬ್ಯಾಂಕ್‌ಗಳ ರಿಸರ್ವ್ ಬ್ಯಾಂಕ್‍ನಿಂದ ಪಡೆಯುವ ಅಲ್ಪಾವಧಿ ಸಾಲದ ಮೇಲಿನ ಬಡ್ಡಿ ದರಕ್ಕೆ ರೆಪೋ ದರ ಎನ್ನುತ್ತಾರೆ. ರೆಪೋ ದರ ಕಡಿಮೆಯಾದರೆ ಬ್ಯಾಂಕ್‌ಗಳು ಕಡಿಮೆ ಬಡ್ಡಿ ದರದಲ್ಲಿ ಹೆಚ್ಚಿನ ಹಣವನ್ನು ಪಡೆಯಬಹುದು. ಬ್ಯಾಂಕ್‍ಗಳು ತಮ್ಮಲ್ಲಿ ಹಣದ ಕೊರತೆಯಾದಾಗ ಆರ್‌ಬಿಐನಿಂದ ಹಣ ಪಡೆಯುತ್ತಿರುತ್ತವೆ. ರೆಪೋ ರೇಟ್ ಜಾಸ್ತಿ ಇದ್ದರೆ ಬ್ಯಾಂಕ್‌ಗಳು ಸಾಲದ ಮೇಲಿನ ಬಡ್ಡಿ ದರವನ್ನು ಏರಿಕೆ ಮಾಡುತ್ತದೆ. ಇದರಿಂದ ವಾಹನ ಸಾಲ, ಗೃಹ ಸಾಲ್ಯ ಇತ್ಯಾದಿ ಸಾಲಗಳ ಬಡ್ಡಿ ದರ ಏರುತ್ತದೆ.