ಬಾಗಲಕೋಟೆ: ಅಮಿತ್ ಶಾ (Amit shah) ಮಾತು ಕೇಳಿದ್ದೇ ತಪ್ಪಾಯ್ತಾ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ (KS Eshwarappa) ಬೇಸರ ವ್ಯಕ್ತಪಡಿಸಿದ್ದಾರೆ.
ಬಾಗಲಕೋಟೆಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಕಳೆದ ಬಾರಿ ರಾಯಣ್ಣ ಬ್ರಿಗೇಡ್‌ಗೆ(Rayanna Brigade) ಹಿಂದುಳಿದವರು, ದಲಿತರು ಹಾಗೂ ಸಮಸ್ತ ಹಿಂದೂ ಸಮಾಜ ಬೆಂಬಲ ಕೊಟ್ಟಿತ್ತು. ಅಲ್ಲದೇ ಎಲ್ಲಾ ಪಕ್ಷದವರು ಆ ಕಾರ್ಯಕ್ರಮಕ್ಕೆ ಬಂದಿದ್ದರು. ಆದರೆ ಇದನ್ನು ಸಹಿಸದ ಕೆಲವರು ಅಮಿತ್ ಶಾ ಅವರನ್ನು ಭೇಟಿಯಾಗಿ ನನ್ನ ಬಗ್ಗೆ ಹಾಗೂ ಈ ಕಾರ್ಯಕ್ರಮದ ಬಗ್ಗೆ ದೂರು ನೀಡಿದ್ದರು ಎಂದು ತಿಳಿಸಿದರು.
Advertisement
ಆಗ ಕೇಂದ್ರ ನಾಯಕರಾದ ಅಮಿತ್ ಶಾ ನನ್ನನ್ನು ಕರೆದು ರಾಯಣ್ಣ ಬ್ರಿಗೇಡ್ ಯಾಕೆ ಬೇಕು? ಇದೆಲ್ಲ ಬೇಡ ಅಂತ ನನಗೆ ಹೇಳಿದ್ರ. ಆದ್ರೆ ನಾನು ಯಾಕೆ ಬೇಡ ಅಂತ ಅವರ ಜೊತೆ ವಾದ ಮಾಡಿದೆ. ಆದರೆ ಅವರ ಬಳಿ ಇದಕ್ಕೆ ಉತ್ತರ ಸಿಗಲಿಲ್ಲ ಎಂದು ಪರೋಕ್ಷವಾಗಿ ಬೇಸರ ವ್ಯಕ್ತಪಡಿಸಿದರು.
Advertisement
ಹಿರಿಯರ ಮಾತನ್ನು ಕೇಳಬೇಕು ಎಂಬುದು ನನಗೆ ಮುಂಚೆಯಿಂದ ಬಂದ ಸ್ವಭಾವ. ಆದರೆ ಈಗ ಅವರ ಮಾತನ್ನು ನಾನು ಕೇಳಿದ್ದೇ ತಪ್ಪಾಯ್ತಾ ಅಂತ ಅನಿಸುತ್ತಿದೆ ಎಂದರು.
Advertisement
Advertisement
ಈ ಸಂಘಟನೆ ಹೀಗೆ ಮುಂದುವರೆದಿದ್ದರೆ ದಲಿತರಿಗೆ ಹಿಂದುಳಿದವರಿಗೆ ನ್ಯಾಯ ಸಿಗುತ್ತಿತ್ತು ಎನ್ನುವ ಭಾವನೆ ನನ್ನದು. ಅಷ್ಟೇ ಅಲ್ಲದೆ ಈ ಸಂಘಟನೆಗೆ ಹಿಂದುಳಿದವರಿಗೆ ನ್ಯಾಯ ಕೊಡಿಸುವ ಶಕ್ತಿ ಇರುತ್ತಿತ್ತು. ಆದರೆ ಕಾರಣಾಂತರಗಳಿಂದ ಈ ಸಂಘಟನೆ ನಿಂತುಹೋಯಿತು. ಆದರೆ ಈಗ ಆರಂಭವಾಗಿರುವ ಬ್ರಿಗೇಡ್ ಅನ್ನು ನಾವು ಯಾವುದೇ ಕಾರಣಕ್ಕೂ ನಿಲ್ಲಿಸಲ್ಲ ಎಂಬ ಭರವಸೆಯನ್ನು ನೀಡಿದರು.
ನೀವು ಬಿಜೆಪಿಗೆ ಮತ್ತೆ ಹೋಗುವಿರಾ ಎಂದು ಪ್ರಶ್ನೆಗೆ ಉತ್ತರಿಸಿದ ಈಶ್ವರಪ್ಪ, ನಾನು ಈಗ ಬಿಜೆಪಿಯಲ್ಲಿಲ್ಲ. ಬನ್ನಿ ಎಂದು ಅನೇಕ ನಾಯಕರು ನನ್ನನ್ನು ಬಿಜೆಪಿಗೆ ಕರೆಯುತ್ತಿದ್ದಾರೆ. ಸದ್ಯ ಬಿಜೆಪಿಗೆ ಹೋಗುವ ಚಿಂತನೆಯಲ್ಲಿ ನಾನಿಲ್ಲ ಎಂದರು. ಅಲ್ಲದೇ ನನಗೆ ಅಲ್ಲಿ ನನಗೆ ಸಾಕಷ್ಟು ಅನ್ಯಾಯವಾಗಿದೆ. ಬಿಜೆಪಿಯಲ್ಲಿರುವ ಕುಟುಂಬ ರಾಜಕಾರಣದ ವಿರುದ್ಧ ನನ್ನ ಹೋರಾಟ ಎಂದು ಗುಡುಗಿದರು. ಇದನ್ನೂ ಓದಿ: ಚುನಾವಣೆ ನೀತಿ ಸಂಹಿತೆ ಕಾರಣದಿಂದ ಪಂಚಮಸಾಲಿ ಮೀಸಲಾತಿ ನಿರ್ಧಾರ ಸಾಧ್ಯವಿಲ್ಲ: ಸಿದ್ದರಾಮಯ್ಯ
ಜಾತಿ ಗಣತಿಯ ವಿಚಾರವಾಗಿ ಮಾತನಾಡಿದ ಈಶ್ವರಪ್ಪ, ನಾನು ಪರಿಷತ್ತಿನಲ್ಲಿ ಇದ್ದಾಗಲೇ ಕಾಂತರಾಜ್ ವರದಿಯನ್ನ ಬಿಡುಗಡೆ ಮಾಡಬೇಕು ಅಂತ ಹೇಳಿದ್ದೆ. ಆಗ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಇದ್ದರು. ಈ ಸರ್ಕಾರದಲ್ಲಿ ಬಿಡುಗಡೆ ಮಾಡಿಯೇ ಮಾಡುತ್ತೇವೆ ಎಂದು ಹೇಳಿದರು. ಈಗಿನಂತೆ ಆಗಲು ಸಿದ್ದರಾಮಯ್ಯ ಉತ್ತರ ಕುಮಾರನ ಪೌರುಷ ತೋರಿದ್ದರು ಎಂದರು.
ಸಂಪುಟ ಸಭೆಯಲ್ಲಿ ಜಾತಿ ಗಣತಿ ಜಾರಿಗೆ ತಂದೆ ತರುತ್ತೇವೆ ಅಂತ ಹೇಳಿದ್ದಾರೆ. ಈಗ ಮತ್ತೆ ಅನಿವಾರ್ಯ ಕಾರಣಗಳಿಂದ 25ನೇ ತಾರೀಕು ಅಂತ ಮುಂದೆ ಹಾಕುತ್ತಿದ್ದಾರೆ. ಇವರಿಗೆ ಹಿಂದುಳಿದವರು ಬಗ್ಗೆ ಯಾವುದೇ ಕಳಕಳಿ ಇಲ್ಲ. ಅಹಿಂದ ಪದ ಬಳಸಿಕೊಂಡು ರಾಜಕಾರಣ ಮಾಡುತ್ತಿದ್ದಾರೆ. ಕಾಂಗ್ರೆಸ್‌ನವರು ಯಾವುದನ್ನು ಮಾಡಲ್ಲ. ಇದು ನನಗೆ ಗೊತ್ತು ಆದರೂ ಜಾತಿ ವಿಚಾರದಲ್ಲಿ ಸ್ವಲ್ಪ ಆಸೆ ಇದೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದಲ್ಲೇ ಕೆಲವರು ಮುಖ್ಯಮಂತ್ರಿ ಸ್ಥಾನ ಹೋದರೂ ಪರವಾಗಿಲ್ಲ ಜಾತಿಗಣತಿಯನ್ನ ಜಾರಿಗೆ ತನ್ನಿ ಎಂದು ಹೇಳುತ್ತಿದ್ದಾರೆ. ಆದರೆ ನಾನು ಸಿದ್ದರಾಮಯ್ಯನವರ (Siddaramaiah) ಸಿಎಂ ಸ್ಥಾನ ಹೋಗಲಿ ಎನ್ನುವ ಅಪೇಕ್ಷೆ ಪಡಲ್ಲ. ಮುಡಾ ಪ್ರಕರಣದಲ್ಲಿ ಅವರು ರಾಜೀನಾಮೆ ಕೊಟ್ಟು ಮತ್ತೆ ಕ್ಲೀನ್ ಚಿಟ್ ತೆಗೆದುಕೊಂಡು ಬರಲಿ ಅಂತ ಆ ಭಗವಂತನಲ್ಲಿ ಪ್ರಾರ್ಥನೆ ಮಾಡುತ್ತೇನೆ. ಆದರೆ ಅವರು ಅಹಿಂದ ಜನರನ್ನು ರಾಜಕಾರಣಕ್ಕೆ ಬಳಕೆ ಮಾಡುತ್ತಿರುವುದು ನನಗೆ ಇಷ್ಟವಿಲ್ಲ ಎಂದು ತಿಳಿಸಿದರು.
ಇದೆ ವೇಳೆ ಒಳ ಮೀಸಲಾತಿ ವಿಚಾರಕ್ಕೆ ಪ್ರತಿಕ್ರಿಸಿ, ಸುಪ್ರೀಂ ಕೋರ್ಟ್ ಆದೇಶಕ್ಕೆ ಯಾರು ಅಡ್ಡಿ ಬರಲು ಸಾಧ್ಯವಿಲ್ಲ. ನ್ಯಾಯಾಲಯದ ಆದೇಶದ ಪ್ರಕಾರ ಒಳ ಮೀಸಲಾತಿ ಜಾರಿಗೆ ತಂದೇ ತರಬೇಕು. ತಮಗೆ ಅನುಕೂಲ ಆದಾಗ ಸತ್ಯಮೇವ ಜಯತೆ ಅಂದ್ರೆ ಅದು ನಡೆಯಲ್ಲ ಎಂದು ಸಿಟ್ಟು ಹೊರಹಾಕಿದರು. ಇದನ್ನೂ ಓದಿ: Russia – Ukraine War | ರಷ್ಯಾ ಪರ 12,000 ಸೈನಿಕರನ್ನು ಕಳುಹಿಸಿದ ಉತ್ತರ ಕೊರಿಯಾ
ಮುಡಾ ಕೇಸ್ ವಿಚಾರದಲ್ಲಿ ಕೋರ್ಟ್ ತಮ್ಮ ಪರ್ವಾಗಿಲ್ಲ ಅಂದಾಗ, ಬಿಜೆಪಿಯ ಕೆಲ ನಾಯಕರು ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕೊಡಲ್ಲ ಅಂತಾರೆ. ಆದ್ರೆ ಸಿಎಂ ರೇಸ್ ನಲ್ಲಿರುವ ಸಂಪುಟದ ಸದಸ್ಯರೇ ಅವರಿಗೆ ಹಿಂದಿನಿಂದ ಬೆನ್ನಿಗೆ ಚೂರಿ ಹಾಕುತ್ತಿದ್ದಾರೆ ಎಂದು ಪರೋಕ್ಷವಾಗಿ ಸಿಎಂ ರೇಸ್‌ಲ್ಲಿರುವ ಸಚಿವರ ವಿರುದ್ಧ ಕುಟುಕಿದರು.
ಬಾಗಲಕೋಟೆಯಲ್ಲಿ 20 ರಂದು ನಡೆಯುವ ಬ್ರಿಗೆಡ್ ಸಭೆಯ ಬಗ್ಗೆ ಮಾತನಾಡಿ, ಈ ಸಭೆಯಲ್ಲಿ ಅನೇಕ ಧಾರ್ಮಿಕ ಮುಖಂಡರು, ಸ್ವಾಮೀಜಿಗಳು, ಮಠಾಧೀಶರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಯ ಗಣ್ಯರು ಹಾಗೂ ಹಿಂದುಳಿದ ದಲಿತ ಮುಖಂಡರು ಈ ಸಭೆಯಲ್ಲಿ ಪಾಲ್ಗೊಳ್ಳುತ್ತಾರೆ. ಅಲ್ಲಿಯೇ ಇದರ ಬಗ್ಗೆ ಚರ್ಚೆ ಮಾಡಿ ಸಂಘಟನೆಗೆ ಒಂದು ಹೆಸರಿಡುತ್ತೇವೆ ಎಂದು ತಿಳಿಸಿದರು.