ಮಂಡ್ಯ: ಕನಗನಮರಡಿ ಬಸ್ ದುರಂತದಲ್ಲಿ ಮೃತಪಟ್ಟ ಕುಟುಂಬಸ್ಥರಿಗೆ ಕೇಂದ್ರ ಸರ್ಕಾರದಿಂದ ತಲಾ ಎರಡು ಲಕ್ಷ ರೂ. ಪರಿಹಾರ ಬಿಡುಗಡೆಯಾದ ವಿಚಾರಕ್ಕೆ ಸಂಸದೆ ಸುಮಲತಾ ನಡೆ ವಿರುದ್ಧ ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ಅಭಿಮಾನಿಗಳು ಕಿಡಿಕಾಡಿದ್ದಾರೆ.
ರವೀಂದ್ರ ಶ್ರೀಕಂಠಯ್ಯ ಸುದ್ದಿಗಳು ಹೆಸರಿನ ಫೇಸ್‍ಬುಕ್ ಪೇಜ್‍ನಿಂದ ಸುಮಲತಾರ ವಿರುದ್ಧ ಪೋಸ್ಟ್ ಮಾಡಲಾಗಿದೆ. ಕನಗನಮರಡಿ ದುರಂತ ನಡೆದಾಗ ಸುಮಲತಾ ಅವರು ಅಧಿಕಾರದಲ್ಲೇ ಇರಲಿಲ್ಲ. ಸಿಎಂ ಕುಮಾರಸ್ವಾಮಿ ಅವರು ಅಂದು ಬಸ್ ದುರಂತ ನಡೆದ ಸ್ಥಳಕ್ಕೆ ಬಂದು ಸಾವಿಗೀಡಾದವರ ಕುಟುಂಬಸ್ಥರ ಸಮಸ್ಯೆ ಆಲಿಸಿದ್ದರು. ಅಂದು ಕುಮಾರಸ್ವಾಮಿ ಅವರು ಪರಿಹಾರ ವಿತರಣೆ, ಕೇಂದ್ರ ಸರ್ಕಾರಕ್ಕೆ ಹೆಚ್ಚಿನ ಪರಿಹಾರಕ್ಕೆ ಒತ್ತಾಯ ಮಾಡಿದ್ದರು. ಈ ಕೀರ್ತಿ ಸಿಎಂ ಜೊತೆಗೆ ಜಿಲ್ಲೆಯ ಶಾಸಕರು, ಅಂದಿನ ಸಂಸದ ಎಲ್.ಆರ್.ಶಿವರಾಮೇಗೌಡ, ಮಂಡ್ಯ ಡಿಸಿ ಮಂಜುಶ್ರೀ ಅವರಿಗೆ ಸಲ್ಲಬೇಕು. ಆದರೆ ಸುಮಲತಾ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಪರಿಹಾರ ಹಣ ಬಿಡುಗಡೆ ಮಾಡಿಸಿದ್ದೇನೆಂದು ಜನರನ್ನು ಮೂಢರನ್ನಾಗಿ ಮಾಡುತ್ತಿದ್ದಾರೆ ಎಂದು ಹರಿಹಾಯ್ದಿದ್ದಾರೆ.
Advertisement
Advertisement
ಪೋಸ್ಟ್ ನಲ್ಲಿ ಏನಿದೆ?
ಶ್ರೀಮತಿ ಸುಮಲತಾ ಅಂಬರೀಶ್ ರವರೇ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಕನಗನಮರಡಿ ಗ್ರಾಮದಲ್ಲಿ 2018ರ ನವೆಂಬರ್ 24 ರಂದು ನಡೆದ ಬಸ್ ದುರಂತದಲ್ಲಿ 30 ಜನ ಮೃತರಾಗಿದ್ದರು. ಅಂದು ಮಂಡ್ಯ ಜಿಲ್ಲೆಯ ಎಲ್ಲಾ ಶಾಸಕರುಗಳು ಸೇರಿದಂತೆ ಸಂಸದರು ಸೇರಿ ರಾಜ್ಯದ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ರವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ರಾಜ್ಯ ಸರ್ಕಾರದಿಂದ ನೆರವು ನೀಡಲಾಯಿತು. ಭಾರತ ಸರ್ಕಾರದಿಂದ ನೆರವು ಪಡೆಯಲು ಜಿಲ್ಲಾಧಿಕಾರಿಗಳ ಕಛೇರಿಯಿಂದ 2019ರ ಫೆ.7 ರಂದು ಪ್ರಸ್ತಾವನೆಯನ್ನು ಸಲ್ಲಿಸಲಾಗಿರುತ್ತದೆ. ಭಾರತ ಸರ್ಕಾರವು ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ.ಗಳ ಪರಿಹಾರವನ್ನು ಫೆ.12 ರಂದು ಮಂಜೂರು ಮಾಡಿರುತ್ತದೆ.
Advertisement
Advertisement
ಮಂಜೂರಾತಿ ಪ್ರತಿಯು ಫೆ.19 ರಂದು ಜಿಲ್ಲಾಧಿಕಾರಿಗಳ ಕಛೇರಿಗೆ ತಲುಪಿರುತ್ತದೆ. ಜಿಲ್ಲಾಧಿಕಾರಿಗಳ ಖಾತೆಯಿಂದ ಮೃತರ ಕುಟುಂಬಕ್ಕೆ ಪರಿಹಾರದ ಚೆಕ್ ನೀಡಲು ಎಲ್ಲಾ ರೀತಿಯ ತಯಾರಿಗಳನ್ನು ಮಾಡಿಕೊಂಡ ಸಂದರ್ಭದಲ್ಲಿ ಇಡೀ ದೇಶದಲ್ಲಿ ಲೋಕಸಭಾ ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿಯಾಗಿದ್ದರಿಂದ ಪ್ರಕ್ರಿಯೆಯು ಸ್ಥಗಿತಗೊಂಡಿತ್ತು. ಈ ಕಾರ್ಯಕ್ಕೆ ಸಲ್ಲಬೇಕಾದ ಕೀರ್ತಿಯು ಹಿಂದಿನ ಜಿಲ್ಲಾಧಿಕಾರಿಗಳಿಗೆ ಮತ್ತು ರಾಜ್ಯದ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ರವರಿಗೆ, ಸಂಸದರು, ಮಂಡ್ಯ ಜಿಲ್ಲೆಯ ಎಲ್ಲಾ ಶಾಸಕರಿಗೆ ಹೊರತು ಕಳೆದ ತಿಂಗಳಿನಲ್ಲಿ ಲೋಕಸಭಾ ಸದಸ್ಯರಾಗಿ ನಾನು ಮೋದಿ ಅವರನ್ನು ಭೇಟಿ ಮಾಡಿ ಪರಿಹಾರದ ಹಣವನ್ನು ಬಿಡುಗಡೆ ಮಾಡಿಸಿದ್ದೇನೆ ಎಂದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಿರುವ ಸುಮಲತಾರಿಗಲ್ಲ. ಸುಮಲತಾ ಅವರೇ ಸ್ವಂತವಾಗಿ ಕೆಲಸಮಾಡಿ ಹೆಸರು ಸಂಪಾದಿಸಿ.
ಸುಮ್ಮನೆ ಮಂಡ್ಯ ಜನರನ್ನು ಮೂಢರನ್ನಾಗಿಸಲು ಹೋಗದೇ ಜಾಗೃತರಾಗಿ ನಿಮ್ಮ ಕರ್ತವ್ಯವನ್ನು ಜವಾಬ್ದಾರಿಯಿಂದ ನಿರ್ವಹಿಸಿ. ಪರಿಹಾರವನ್ನು ಹಿಂದಿನ ಸಂಸದರು ಮತ್ತು ಜಿಲ್ಲಾಧಿಕಾರಿಗಳು ಮಂಜೂರು ಮಾಡಿಸಿರುವುದಕ್ಕೆ ನಾವು ದಾಖಲೆ ನೀಡುತ್ತೇವೆ. ನೀವೇ ಪರಿಹಾರ ಮಂಜೂರು ಮಾಡಿಸಿರುವುದಕ್ಕೆ ದಾಖಲೆ ನೀಡಿ ಎಂದು ಬರೆದು ಸುಮಲತಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗಿದೆ.
https://www.facebook.com/permalink.php?story_fbid=2502437746650334&id=100006523990844