ಗಾಂಧಿನಗರ: ಟೀಂ ಇಂಡಿಯಾದ ಆಲ್ ರೌಂಡರ್ ರವೀಂದ್ರ ಜಡೇಜಾ ಅವರ ಪತ್ನಿ ಕೆಲವು ದಿನಗಳ ಹಿಂದೆ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಈಗ ಜಡೇಜಾ ಅವರ ತಂದೆ ಹಾಗೂ ಸಹೋದರಿ ಕಾಂಗ್ರೆಸ್‍ಗೆ ಸೇರ್ಪಡೆಯಾಗಿದ್ದಾರೆ.
ಜಡೆಜಾ ಅವರ ತಂದೆ ಅನಿರುದ್ಧ ಸಿನ್ಹಾ, ಹಾಗೂ ಸಹೋದರಿ ನೈನಬಾ ಗುಜರಾತ್‍ನ ಜಾಮ್‍ನಗರ ಜಿಲ್ಲೆಯ ಕಲವಾಡ್ ನಗರದಲ್ಲಿ ನಡೆದ ಒಂದು ರ‍್ಯಾಲಿ ವೇಳೆ ಹಾರ್ದಿಕ್ ಪಟೇಲ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗಿದ್ದಾರೆ.
ಕೆಲವು ದಿನಗಳ ಹಿಂದೆ ರವೀಂದ್ರ ಜಡೇಜಾ ಅವರ ಪತ್ನಿ ಹಾಗೂ ಕರ್ಣಿ ಸೇನೆಯ ಮಹಿಳಾ ಘಟಕದ ಅಧ್ಯಕ್ಷೆಯಾಗಿರುವ ರಿವಾಬಾ ಜಡೇಜಾ ಅವರು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ರಿವಾಬಾ ಜಡೇಜಾ, ಬಿಜೆಪಿ ಸೇರಲು ಪ್ರಧಾನಿ ನರೇಂದ್ರ ಮೋದಿ ಅವರು ನನಗೆ ಸ್ಫೂರ್ತಿ. ಕೇವಲ ನಮ್ಮ ಸಮುದಾಯಕ್ಕೆ ಮಾತ್ರವಲ್ಲದೆ ಇಡೀ ದೇಶಕ್ಕೆ ನನ್ನ ಸೇವೆ ಸಲ್ಲಿಸಲು ಬಿಜೆಪಿ ಸೇರಿದ್ದರಿಂದ ನನಗೆ ಅವಕಾಶ ದೊರಕಿದೆ ಅಂತ ನಾನು ನಂಬಿದ್ದೇನೆ ಎಂದಿದ್ದರು.
ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಜಡೇಜಾ ಹಾಗೂ ಅವರ ಪತ್ನಿ ರಿವಾಬಾ ಪ್ರಧಾನಿ ಮೋದಿ ಅವರನ್ನು ಭೇಟಿ ಆಗಿದ್ದರು. ಈ ವೇಳೆ ನರೇಂದ್ರ ಮೋದಿ ಜಡೇಜಾ ಅವರ ಫೋಟೋ ಹಾಕಿ ಟ್ವೀಟ್ ಮಾಡಿದ್ದರು.