ಬೆಂಗಳೂರು: ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿದ ಆರೋಪವನ್ನು ಎದುರಿಸುತ್ತಿರುವ ಪತ್ರಕರ್ತ ರವಿ ಬೆಳಗೆರೆ ಸಿಸಿಬಿ ಕಚೇರಿಯಲ್ಲೇ ಮೂರನೇ ದಿನ ಕಳೆದಿದ್ದಾರೆ. ಇಂದು ಮಧ್ಯಾಹ್ನ ಸುಮಾರು 12 ಗಂಟೆಗೆ ಎಸಿಎಂಎಂ ಕೋರ್ಟ್‍ಗೆ ಪೊಲೀಸರು ಹಾಜರುಪಡಿಸಲಿದ್ದಾರೆ.
ಮೂರು ದಿನಗಳ ಸತತ ವಿಚಾರಣೆಯಿಂದ ಬೇಸತ್ತಿರುವ ಬೆಳಗೆರೆ, ಇಂದು ಏನಾಗಬಹುದು ಅನ್ನೋ ಆಲೋಚನೆಯಲ್ಲೇ ರಾತ್ರಿ ಕಳೆದಿದ್ದಾರೆ. ರಾತ್ರಿ 9 ಗಂಟೆಗೆ ವಿಚಾರಣೆ ಮುಕ್ತಾಯವಾದ ಬಳಿಕ ಮನೆಯಿಂದ ತರಿಸಲಾಗಿದ್ದ ಊಟ ಮಾಡಿ, ಬಳಿಕ ಪೊಲೀಸರಿಂದ ಪೆನ್ನು ಪೇಪರ್ ಪಡೆದು ದಿನಚರಿ ಬರೆದಿದ್ದಾರೆ. ಆದರೆ ರಾತ್ರಿ ಕೂಡ ಬಿಪಿ ಲೋ ಮತ್ತು ಕಾಲು ನೋವಿನಿಂದಾಗಿ ನಿದ್ದೆ ಬಾರದೆ ಪರದಾಡಿದ್ದಾರೆ.
Advertisement
Advertisement
ರವಿ ಬೆಳಗೆರೆ ಪರ ವಕೀಲ ದಿವಾಕರ್ ಜಾಮೀನಿಗೆ ಅರ್ಜಿ ಸಲ್ಲಿಸಲಿಸಿದ್ದಾರೆ. ಆದರೆ ಸಿಸಿಬಿ ಅಕ್ರಮ ಶಸ್ತ್ರಾಸ್ತ್ರ, ಕೊಲೆ ಸಂಚು ಸೇರಿ ಇನ್ನಿತರ ಜಾಮೀನು ರಹಿತ ಸೆಕ್ಷನ್ ಹಾಕಿದ್ದಾರೆ. ಆದ್ದರಿಂದ ಅನಾರೋಗ್ಯದ ನೆಪವೊಡ್ಡಿ ಜಾಮೀನು ನೀಡುವಂತೆ ವಕೀಲರು ವಾದ ಮಂಡಿಸಲಿದ್ದಾರೆ. ಇದಕ್ಕಾಗಿ ಬಿಪಿ, ಶುಗರ್, ನರ ದೌರ್ಬಲ್ಯ ಸೇರಿದಂತೆ ಹಲವು ಕಾಯಿಲೆಗಳಿಂದ ಬೆಳಗೆರೆ ಬಳಲುತ್ತಿರುವ ಕುರಿತು ಮೆಡಿಕಲ್ ಸರ್ಟಿಫಿಕೇಟ್‍ಗಳನ್ನು ಕೂಡ ರೆಡಿ ಮಾಡಿಕೊಂಡಿದ್ದಾರೆ. ಒಂದು ವೇಳೆ ಜಾಮೀನು ನೀಡದಿದ್ದರೆ ಕನಿಷ್ಠ ಪಕ್ಷ ಆಸ್ಪತ್ರೆಗೆ ಸೇರಿಸಲು ಮನವಿ ಮಾಡುವ ಸಾಧ್ಯತೆ ಇದೆ. ಜೊತೆಗೆ ಜಾಮೀನು ಅರ್ಜಿ ಇತ್ಯರ್ಥವಾಗುವವರೆಗೆ ಮಧ್ಯಂತರ ಜಾಮೀನಿಗೂ ಮನವಿ ಮಾಡಿದ್ದಾರೆ.