ಬೆಂಗಳೂರು: ರಾಕ್ಷಸ ರವಿಬೆಳಗೆರೆ ನನ್ನ ವಿರುದ್ಧ ಸುಪಾರಿ ನೀಡಿರುವುದು ಅತ್ಯಂತ ಕೆಟ್ಟ ಕೆಲಸ, ಈ ಕುರಿತು ತನಿಖೆ ನಡೆಸಿ ಶಿಕ್ಷೆ ನೀಡಬೇಕು ಎಂದು ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಹೇಳಿದ್ದಾರೆ.
ತನ್ನ ಹತ್ಯೆಗೆ ಸುಪಾರಿ ನೀಡಿ ಬಂಧನವಾಗಿರುವ ರವಿ ಬೆಳಗೆರೆ ಅವರ ಕುರಿತು ಅವರು ಪಬ್ಲಿಕ್ ಟಿವಿ ಗೆ ಪ್ರತಿಕ್ರಿಯೆ ನೀಡಿ, ರವಿ ಬೆಳಗೆರೆ ಅವರ ವಿರುದ್ಧ ನಾನು ಯಾವುದೇ ದೂರು ನೀಡಿಲ್ಲ. ಸಿಸಿಬಿ ಮತ್ತು ಎಸ್‍ಐಟಿ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದು, ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.
Advertisement
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ತನಿಖೆ ವೇಳೆ ಕೆಲವರನ್ನು ಬಂಧಿಸಿ ವಿಚಾರಣೆ ನಡೆಸಿದ ವೇಳೆ ನನ್ನನ್ನು ಕೊಲೆ ಮಾಡಲು ರವಿಬೆಳಗೆರೆಯಿಂದ ಸುಪಾರಿ ಪಡೆದಿರುವ ಮಾಹಿತಿಯನ್ನು ಪೊಲೀಸರಿಗೆ ನೀಡಿದ್ದಾರೆ. ಈ ವಿಚಾರ ನನಗೂ ತಿಳಿದಿರಲಿಲ್ಲ. ಇಂದು ಬೆಳಗ್ಗೆ ಪೊಲೀಸರು ಬಂಧನ ನಡೆಸಿದ ಸಂದರ್ಭದಲ್ಲಿ ತಿಳಿಯಿತು ಎಂದರು.
Advertisement
ಸುಪಾರಿ ನೀಡಿರುವ ಬಗ್ಗೆ ಕೇಳಿ ನನಗೂ ಶಾಕ್ ಆಗಿದ್ದು, ನನ್ನ ಹಾಗೂ ರವಿಬೆಳಗೆರೆ ಅವರ ಸಂಬಂಧ ಸುಮಾರು 14 ವರ್ಷಗಳದ್ದು, ನಿರಂತರವಾಗಿ 14 ವರ್ಷ ಅವರ ಬಳಿ ಕೆಲಸ ಮಾಡಿದ್ದೇನೆ. ಅಲ್ಲದೇ ಅವರಿಗೆ ಎಂದು ಅಸಮಾಧಾನ ಬಾರದ ಹಾಗೇ ಕೆಲಸ ಮಾಡಿದ್ದೇನೆ. ಈಗಿದ್ದು ನನ್ನ ವಿರುದ್ಧ ಸುಪಾರಿ ನೀಡುವ ಸುದ್ದಿ ಕೇಳಿ ಅಶ್ಚರ್ಯ ಹಾಗೂ ಅತಂಕವಾಗುತ್ತಿದೆ ಎಂದು ಹೇಳಿದರು.
Advertisement
Advertisement
ಹಾಯ್ ಬೆಂಗಳೂರು ಬಿಟ್ಟಿದ್ದು ಯಾಕೆ?
ನನ್ನ ಅವರ ಮಧ್ಯೆ ಯಾವುದೇ ವೈಯಕ್ತಿಕ ಜಗಳವಿಲ್ಲ. 2014 ಡಿಸೆಂಬರ್ ನಲ್ಲಿ ನಾನು ಅವರ ಬಳಿ ಕೆಲಸ ಬಿಟ್ಟೆ. 14 ವರ್ಷದ ಅವಧಿಯಲ್ಲಿ ನನ್ನ ಹಾಗೂ ನನ್ನ ವರದಿಗಳ ಬಗ್ಗೆ ಯಾವುದೇ ಅನುಮಾನ ವ್ಯಕ್ತವಾಗಿರಲಿಲ್ಲ. ಯಾವುದೇ ವ್ಯಕ್ತಿಯನ್ನು ಬ್ಲಾಕ್ ಮೇಲ್ ಮಾಡದೆ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಆದರೆ 2014ರಲ್ಲಿ ಅವರು ನನ್ನ ಬಗ್ಗೆ ಸಂಶಯ ವ್ಯಕ್ತಪಡಿಸಲು ಆರಂಭಮಾಡಿದರು. ಹೀಗಾಗಿ ನಂಬಿಕೆ ಇಲ್ಲದ ಜಾಗದಲ್ಲಿ ಕಾರ್ಯನಿರ್ವಹಿಸಬಾರದು ಎಂಬ ಕಾರಣಕ್ಕೆ ಕೆಲಸ ಬಿಟ್ಟೆ ಎಂದು ತಿಳಿಸಿದರು. ಇದನ್ನೂ ಓದಿ: ಗಂಡ ರಣಭೂಮಿಯಲ್ಲಿ ಇರುವಾಗ ಶತ್ರುವಿನ ತೊಡೆ ಮೇಲೆ ಕುಳಿತರೆ ಅದು ಪಾತಿವ್ರತ್ಯೆಯೇ: ಬೆಳಗೆರೆ ಪೋಸ್ಟ್ ಸುತ್ತ ಅನುಮಾನದ ಹುತ್ತ
ಈ ಹಿಂದೆ ಪ್ಲಾನ್ ಮಾಡಲಾಗಿತ್ತಾ?
ಈ ಹಿಂದೆ ತಮ್ಮ ಮೇಲೆ ನಡೆದ ದಾಳಿ ಕುರಿತು ಪ್ಲಾನ್ ಮಾಡಲಾಗಿತ್ತು ಎಂದು ಸಿಸಿಬಿ ಪೊಲೀಸರ ಮಾಹಿತಿ ಕುರಿತು ಪ್ರತಿಕ್ರಿಯಿಸಿದ ಅವರು, ಈ ಕುರಿತು ನನಗೆ ಎಂದು ಸಂಶಯ ಉಂಟಾಗಿರಲಿಲ್ಲ, ಆದರೆ ಪೊಲೀಸ್ ಮಾಹಿತಿ ಪಡೆದ ನಂತರ ನನ್ನ ಜೀವನದಲ್ಲಿ ನಡೆದ ಘಟನೆಗಳನ್ನು ನೆನಪಿಸಿ ಕೊಂಡರೆ ಹೌದು ಎನ್ನುವ ಭಾವನೆ ಬರುತ್ತಿದೆ. 2014 ಡಿಸೆಂಬರ್ 20, ಶನಿವಾರ ರವಿಬೆಳಗೆರೆ ಅವರು ನನಗೆ ಪದೆ ಪದೆ ಕರೆಮಾಡಿ ಚಾನಲ್‍ಗೆ ಬಂಡವಾಳ ಹೂಡಲು ಕೆಲವರು ಬರುತ್ತಿದ್ದಾರೆ. ನಿನ್ನ ಬಳಿ ಮಾತನಾಡಬೇಕು ಬಾ ಎಂದು ಕರೆದರು. ಆದರೆ ನಾನು ಅಂದು ತಡವಾಗಿ ಕಚೇರಿ ಬಳಿ ತೆರಳಿದೆ, ಆ ವೇಳೆಗೆ ಕ್ರಿಮಿನಲ್ ಹಿನ್ನೆಲೆಯುಳ್ಳ ಹಲವರು ಅಲ್ಲಿಗೆ ಬಂದಿದ್ದರು. ಆದರೆ ಕಚೇರಿಯಲ್ಲಿ ನೋಡಿದರೆ ಯಾರು ಇರಲಿಲ್ಲ. ಆಗ ನಾನು ಅವರ ಬಳಿ ಬಂಡವಾಳ ಹೂಡುವ ವ್ಯಕ್ತಿಗಳ ಬಗ್ಗೆ ಕೇಳಿದೆ, ಆದರೆ ಈ ಬಗ್ಗೆ ಮಾತನಾಡದೆ ಬೇರೆ ವಿಷಯ ಕುರಿತು ಮಾತನಾಡಿದರು. ಅಂದು ಅನುಮಾನಗೊಂಡು ಕೆಲವು ಹಿರಿಯ ಪೊಲೀಸ್ ಅಧಿಕಾರಿಗಳ ಬಳಿ ಮಾಹಿತಿ ಪಡೆದೆ. ಅವರು ಸಹ ಅನುಮಾನ ವ್ಯಕ್ತಪಡಿಸಿ ನನ್ನನ್ನು ಅಲ್ಲಿಂದ ಹೊರಡುವಂತೆ ಸೂಚಿಸಿದರು. ತಕ್ಷಣ ನಾನು ಅಲ್ಲಿಂದ ನಾನು ಬೇರೆ ಕಡೆ ತೆರಳಿ ಕೆಲಸ ಬಿಡುವ ನಿರ್ಧಾರ ಮಾಡಿದೆ ಎಂದು ವಿವರಿಸಿದರು.
ವಿಳಾಸ ತಿಳಿಯಲು ಕೊರಿಯರ್ ನೆಪ:
ಕಳೆದ ಆಗಸ್ಟ್ 28 ರಂದು ನನ್ನ ಮನೆ ಬಳಿ ಆರೋಪಿ ಶಶಿ ಓಡಾಡುವುದನ್ನು ಗಮನಿಸಿದ್ದೇನೆ, ಆತನು ಅಲ್ಲಿಯೇ ಒಂದು ವರ್ಷ ಕೆಲಸ ಮಾಡಿದ್ದ. ಈ ವೇಳೆ ಆತನ ಹಿನ್ನೆಲೆ ತಿಳಿದಿತ್ತು. ನಾನು ಉತ್ತರ ಹಳ್ಳಿ ಬಳಿ ವಾಸಿಸುತ್ತಿದ್ದೆ, ನಂತರ ಕಳೆದ ವರ್ಷ ನನ್ನ ಮಗನ ಶಾಲೆಯ ವಿಚಾರವಾಗಿ ಮಲ್ಲೇಶ್ವರಂ ಬಳಿ ಮನೆ ಬದಲಾಯಿಸಿದೆ. ನಂತರ ವಸಂತಪುರಕ್ಕೆ ಬಂದೆ ಈ ವೇಳೆ ನನಗೆ ಕೊರಿಯರ್ ಅಫೀಸ್ ನಿಂದ ಕರೆ ಬಂತು. ಆಗ ಕೆಲವು ಪುಸ್ತಕ ನೀಡಬೇಕಿದೆ ಎಂದು ನನ್ನ ವಿಳಾಸ ಪಡೆದರು. ಅಂದು ಬಂದ ಪುಸ್ತಕದಲ್ಲಿ ಬಿ.ಎಚ್ ರಾಘವೇಂದ್ರ ಬರೆದ ಪುಸ್ತಕವು ಇತ್ತು, ರಾಘವೇಂದ್ರ ಅವರು ರವಿಬೆಳಗೆರೆ ಅವರ ಆಪ್ತ ಗೆಳೆಯರು. ಇದರಿಂದ ಅನುಮಾನಗೊಂಡು ರವಿಬೆಳಗೆರೆ ಅವರಿಗೆ ಕರೆ ಮಾಡಿ ಈ ಕುರಿತು ವಿಚಾರಿಸಿದೆ. ಆದರೆ ಅವರು ಪುಸ್ತಕ ಕಳುಹಿಸಿಲ್ಲ ಎಂದು ಹೇಳಿದರು. ನಂತರ ಕೊರಿಯರ್ ನಿಂದ ಬಂದ ಕರೆ ಆಧಾರಿಸಿ ನಾನು ಪರಿಶೀಲಿಸಲು ಮುಂದಾದಾಗ ಅದು ಹಾಯ್ ಬೆಂಗಳೂರು ಪತ್ರಿಕೆಯಲ್ಲಿ 10 ವರ್ಷಗಳ ಕಾಲ ಕೊರಿಯರ್ ಸೇವೆ ಮಾಡುತ್ತಿದ್ದ ಮಂಜುವಿನ ನಂಬರ್ ಎಂದು ತಿಳಿಯಿತು. ಆಗ ನಾನು ಆತನನ್ನು ವಿಚಾರಿಸಿದಾಗ ಮಹಿಳೆಯೊಬ್ಬರು ಬಂದು ಕೊಟ್ಟರು ಎಂದು ತಿಳಿಸಿದ. ಆಗ ನನಗೆ ಆತ ಸುಳ್ಳು ಹೇಳುತ್ತಿರುವ ಕುರಿತು ಮನವರಿಕೆ ಆಯ್ತು, ನನ್ನ ಮನೆ ವಿಳಾಸ ತಿಳಿಯಲು ಮಾಡಿದ ತಂತ್ರ ಎಂದು ಅರಿವಾಯಿತು ಎಂದರು.
ಆದರೂ ನಾನು ಏನು ತಪ್ಪು ಮಾಡಿಲ್ಲ ಎಂಬ ಧೈರ್ಯದ ಮೇಲೆ ಸುಮ್ಮನಾದೆ, ಸುಪಾರಿ ಕೊಟ್ಟಿರುವ ಕುರಿತು ಎಲ್ಲೂ ಸುಳಿವು ನನಗೆ ಸಿಗಲಿಲ್ಲ. ಇಲ್ಲವಾದರೆ ಅಂದೇ ರವಿಬೆಳಗೆರೆ ಅವರು ಜೈಲು ಸೇರುತ್ತಿದ್ದರು, ಎಸ್‍ಐಟಿ ಅಧಿಕಾರಿಗಳ ಕಾರ್ಯ ಮೆಚ್ಚುವಂತದ್ದು, ಪೊಲೀಸರು ಯಾವುದೇ ಒತ್ತಡಕ್ಕೆ ಮಣಿಯಾದೇ ಕಾರ್ಯನಿರ್ವಹಿಸಿದ್ದಾರೆ. ಆದರೆ ಒಬ್ಬ ರಾಕ್ಷಸ ರವಿಬೆಳಗೆರೆ ಬಳಿ 14 ವರ್ಷದ ಕೆಲಸ ಮಾಡಿದ ನಂತರವು ನನ್ನ ವಿರುದ್ಧ ಸುಪಾರಿ ನೀಡಿರುವುದು ಅತ್ಯಂತ ಕೆಟ್ಟ ಕೆಲಸ, ಈ ಕುರಿತು ತನಿಖೆ ನಡೆಸಿ ಶಿಕ್ಷೆ ನೀಡಬೇಕಿದೆ ಎಂದರು.
ಇದನ್ನೂ ಓದಿ: ಯಾಕ್ ನೀವ್ ರಿಸ್ಕ್ ತೆಗೆದುಕೊಳ್ತೀರಿ: ಪೊಲೀಸರಿಗೆ ರವಿ ಬೆಳಗೆರೆ ಬುದ್ಧಿವಾದ
https://www.youtube.com/watch?v=tvAkOpM6ZZo