ಬಣ್ಣದ ಲೋಕದ ಸೆಲೆಬ್ರೆಟಿಗಳು ಪಾರ್ಟಿಗಾಗಿ ಸೇರುವುದು ಹೊಸದೇನೂ ಅಲ್ಲ. ಐಷಾರಾಮಿ ಜೀವನ ನಡೆಸುವ ಅನೇಕ ನಟ, ನಟಿಯರು ಪ್ರತಿನಿತ್ಯ ಒಂದಲ್ಲಾ ಒಂದು ಪಾರ್ಟಿಯಲ್ಲಿ ಪಾಲ್ಗೊಳ್ಳುತ್ತಲೇ ಇರುತ್ತಾರೆ. ಅದರಲ್ಲಿಯೂ ಅನೇಕ ನಟ, ನಟಿಯರು ಪಾರ್ಟಿ ವೇಳೆ ಮಾದಕ ವಸ್ತುಗಳನ್ನು ಸೇವಿಸಿ ಸಿಕ್ಕಿಬಿದ್ದಿರುವ ಘಟನೆಗಳು ಸಾಕಷ್ಟಿವೆ. ಮೊದ ಮೊದಲು ಬಾಲಿವುಡ್‍ನಲ್ಲಿ ನಟ, ನಟಿಯರು ರೇವ್ ಪಾರ್ಟಿಗಳಲ್ಲಿ ಡ್ರಗ್ಸ್ ಸೇವಿಸಿ ಸಿಕ್ಕಿಬಿದ್ದಿರುವುದೇ ಹೆಚ್ಚು. ಸದ್ಯ ಇಂತಹದೇ ಪ್ರಕರಣದಲ್ಲಿ ಟಾಲಿವುಡ್ ಮೆಗಾ ಕುಟುಂಬದ ಕುಡಿಯೊಂದು ಪೊಲೀಸರ ಕೈಗೆ ಸಿಕ್ಕಿಬಿದ್ದು, ಕುಟುಂಬವನ್ನು ಹೈರಾಣಾಗಿಸಿದೆ.
ಹೌದು, ಡಗ್ರ್ಸ್ ಪಾರ್ಟಿಯಲ್ಲಿ ಟಾಲಿವುಡ್ ನಟ ನಾಗಬಾಬು ಅವರ ಪುತ್ರಿ ನಿಹಾರಿಕಾ ಕೊನಿಡೆಲಾ ಇದ್ದರು ಎನ್ನುವ ಕಾರಣಕ್ಕಾಗಿ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಯುಗಾದಿ ಹಬ್ಬದಂದು ಹೈದರಾಬಾದ್‍ನ ಫೈವ್ ಸ್ಟಾರ್ ಹೋಟೆಲ್ ಒಂದರಲ್ಲಿ ರೇವ್ ಪಾರ್ಟಿ ನಡೆದಿದ್ದು, ಈ ಪಾರ್ಟಿಯಲ್ಲಿ ಸೆಲೆಬ್ರೆಟಿಗಳ ಮಕ್ಕಳು ಮತ್ತು ಪ್ರಭಾವಿ ಮಕ್ಕಳು ಸೇರಿದಂತೆ ಸುಮಾರು 150ಕ್ಕೂ ಹೆಚ್ಚು ಮಂದಿ ರೇವ್ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಇದೇ ವೇಳೆ ಹೊಟೇಲ್‍ನಲ್ಲಿಯೇ ಇದ್ದ ನಿಹಾರಿಕಾ ಕೊನಿಡೆಲಾ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಇನ್ನೂ ಈ ಸುದ್ದಿ ಟಿ-ಟೌನ್‍ನಲ್ಲಿ ಭಾರೀ ಸದ್ದು ಮಾಡಿತ್ತು. ಇದನ್ನೂ ಓದಿ : ಸ್ಟಾರ್ ತಾರಾಗಣದ ಬಹು ನಿರೀಕ್ಷಿತ ‘ತ್ರಿಕೋನ’ ಬಿಡುಗಡೆಗೆ ರೆಡಿ
ಸದ್ಯ ತಮ್ಮ ಪುತ್ರಿಯ ವಿಚಾರವಾಗಿ ನಟ ನಾಗಬಾಬು ಅವರು ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೆ ವೀಡಿಯೋವನ್ನು ಹಂಚಿಕೊಂಡಿದ್ದು, ತಮ್ಮ ಪುತ್ರಿ ನಿಹಾರಿಕಾ ಪಬ್‍ನಲ್ಲಿದ್ದದ್ದು ನಿಜ. ಆದರೆ ನಿಹಾರಿಕಾ ರೇವ್ ಪಾರ್ಟಿಯಲ್ಲಿ ಭಾಗಿಯಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಏಪ್ರಿಲ್ 2ರಂದು ರಾತ್ರಿ ನನ್ನ ಮಗಳು ನಿಹಾರಿಕಾ ಕೊನಿಡೆಲಾ ಪಬ್‍ಗೆ ಹೋಗಿದ್ದರು. ಪಬ್ ಬಂದ್ ಮಾಡುವ ಸಮಯ ಮೀರಿದ್ದರೂ, ಮುಂದುವರೆಸಿದ್ದರಿಂದ ಪಬ್ ನಡೆಸುತ್ತಿದ್ದವರನ್ನು ಹಾಗೂ ಇಲ್ಲಿದ್ದವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನನ್ನ ಮಗಳು ಡ್ರಗ್ಸ್ ಪ್ರಕರಣದಲ್ಲಿ ಭಾಗಿಯಾಗಿಲ್ಲ. ಈ ವೇಳೆ ಪೊಲೀಸರು ವಶಪಡಿಸಿಕೊಂಡ ಮಾದಕ ವಸ್ತುಗಳಿಗೂ ಆಕೆಗೂ ಯಾವುದೇ ಸಂಬಂಧವಿಲ್ಲವೆಂದು ಪೊಲೀಸರು ಹೇಳಿದ್ದಾರೆ. ಇಂತಹ ಸುಳ್ಳು ಸುದ್ದಿಗಳನ್ನು ನಂಬಬೇಡಿ ಮತ್ತು ಇಂತಹ ಸುದ್ದಿಗಳನ್ನು ಹಬ್ಬಿಸಬೇಡಿ ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ : ಸ್ಟಾರ್ ತಾರಾಗಣದ ಬಹು ನಿರೀಕ್ಷಿತ ‘ತ್ರಿಕೋನ’ ಬಿಡುಗಡೆಗೆ ರೆಡಿ
ಬಂಜಾರಾ ಹಿಲ್ಸ್ ಠಾಣೆಯ ಪೊಲೀಸರು ನಿಹಾರಿಕ ಅವರನ್ನು ವಶಕ್ಕೆ ಪಡೆದು ಕೆಲ ಸಮಯ ವಿಚಾರಣೆ ನಡೆಸಿ, ಮನೆಗೆ ಕಳುಹಿಸಿದ್ದಾರೆ ಎನ್ನಲಾಗಿದ್ದು, ವಿಚಾರಣೆ ಬಳಿಕ ನಿಹಾರಿಕಾ ಕೊನಿಡೆಲಾ ಪೊಲೀಸ್ ಠಾಣೆಯಿಂದ ಹೊರಬರುತ್ತಿದ್ದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.