ರಾಯಚೂರು: ಬಡವರಿಗೆ ಆಹಾರ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಸ್ಥಾಪಿಸಲಾಗಿರುವ ನ್ಯಾಯಬೆಲೆ ಅಂಗಡಿಯಲ್ಲೇ ಲಂಚ ಪಡೆಯುತ್ತಿರುವ ಆರೋಪ ಕೇಳಿಬಂದಿದ್ದು, ರಾಯಚೂರು (Raichuru) ಜಿಲ್ಲೆಯಲ್ಲಿ ನ್ಯಾಯಬೆಲೆ ಅಂಗಡಿಯೊಂದನ್ನು ಅಮಾನತುಗೊಳಿಸಲಾಗಿದೆ.
ಜಿಲ್ಲೆಯ ಮಾನ್ವಿ ತಾಲೂಕಿನ ಕರಾಬದಿನ್ನಿ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ (Ration) ವಿತರಣೆಗೆ ಲಂಚ ಪಡೆಯುತ್ತಿದ್ದ ಅಂಗಡಿ ಮಾಲೀಕನ ವಿರುದ್ದ ಆಹಾರ, ನಾಗರಿಕ ಸರಬರಾಜು ಇಲಾಖೆ ಕ್ರಮ ಕೈಗೊಂಡಿದೆ. ನ್ಯಾಯಬೆಲೆ ಅಂಗಡಿಯನ್ನ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ. ಇದನ್ನೂ ಓದಿ: ಇಂದು ಬಿಜೆಪಿ ಮುಖಂಡನಿಂದಲೇ ತೆರವು ಕಾರ್ಯಕ್ಕೆ ಅಡ್ಡಿ- ಪಾಲಿಕೆ ಅಧಿಕಾರಿಗಳ ಜೊತೆ ಕಿರಿಕ್
ಪಡಿತರ ವಿತರಣೆಗೆ ನ್ಯಾಯಬೆಲೆ ಅಂಗಡಿ ಪ್ರಾಧಿಕಾರ ಪಡೆದಿದ್ದ ಮಲ್ಲಪ್ಪ ಲಂಚ ಪಡೆಯುತ್ತಿರುವ ಬಗ್ಗೆ ʻಪಬ್ಲಿಕ್ ಟಿವಿʼ ವರದಿ ಪ್ರಸಾರ ಮಾಡಿತ್ತು. ಪ್ರತಿಯೊಬ್ಬ ಪಡಿತರದಾರರಿಂದ 10-20 ರೂ. ಲಂಚ ಪಡೆಯುತ್ತಿದ್ದ ಮಲ್ಲಪ್ಪ, ಹಣ ಕೊಡದಿದ್ದರೆ ಪಡಿತರ ಹಾಕುವುದಿಲ್ಲ ಅಂತ ಖಡಾಖಂಡಿತವಾಗಿ ಹೇಳುತ್ತಿದ್ದ. ಸರ್ಕಾರ ಹೊಸ ರೂಲ್ಸ್ ಮಾಡಿದೆ. ಎಲ್ಲರೂ ದುಡ್ಡು ಕೊಡಬೇಕು ಅಂತ ಲಂಚ ಪಡೆಯುತ್ತಿದ್ದ. ತೂಕದಲ್ಲೂ ಮೋಸ ಮಾಡುತ್ತಿರುವ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರು.
ಮಲ್ಲಪ್ಪನ ವಸೂಲಿಗೆ ಬೇಸತ್ತ ಗ್ರಾಮಸ್ಥರು ವೀಡಿಯೋ ಸಹಿತ ದೂರನ್ನು ನೀಡಿದ್ದಾರೆ. ಆಹಾರ ಇಲಾಖೆ ನಿರೀಕ್ಷಕರು ಹಾಗೂ ಶಿರಸ್ತೆದಾರ ಗ್ರಾಮದಲ್ಲಿ ಪರಿಶೀಲನೆ ನಡೆಸಿದಾಗ ಮಲ್ಲಪ್ಪ ತಪ್ಪಿತಸ್ಥ ಅನ್ನೋದು ಸಾಬೀತಾದ ಹಿನ್ನೆಲೆ ಕ್ರಮ ಕೈಗೊಳ್ಳಲಾಗಿದೆ. ಮಲ್ಲಪ್ಪನ ಪ್ರಾಧಿಕಾರದಲ್ಲಿದ್ದ ನ್ಯಾಯಬೆಲೆ ಅಂಗಡಿ ಅಮಾನತುಗೊಳಿಸಿ ಆಹಾರ, ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಕೃಷ್ಣಾ ಆದೇಶ ಹೊರಡಿಸಿದ್ದಾರೆ. ಪಡಿತರ ವಿತರಣೆಗೆ ಪರ್ಯಾಯ ವ್ಯವಸ್ಥೆ ಮಾಡಲು ಮಾನ್ವಿ ತಹಶೀಲ್ದಾರ್‌ಗೆ ಸೂಚನೆ ನೀಡಿಲಾಗಿದೆ. ಇದನ್ನೂ ಓದಿ: ಆಪರೇಷನ್ ಬುಲ್ಡೋಜರ್‌ಗೆ 3ನೇ ದಿನ- ಇಂದೂ ನಡೆಯಲಿದೆ ನಲಪಾಡ್ ಅಕಾಡೆಮಿ ಒತ್ತುವರಿ ತೆರವು!