ಬೆಂಗಳೂರು: ಮಹಾಮಳೆಯ ರುದ್ರನರ್ತನಕ್ಕೆ ತತ್ತರಿಸಿ ಹೋಗಿರುವ ಕೊಡಗು ಸಂತ್ರಸ್ತರಿಗೆ ಜನರು ಸೇರಿದಂತೆ ಸ್ಯಾಂಡಲ್ ವುಡ್ ತಾರೆಯರು ಸಹಾಯ ಹಸ್ತವನ್ನು ನೀಡಿದ್ದಾರೆ. ಸದ್ಯ ಸಹಾಯ ಮಾಡಿದವರಿಗೆ ಕೊಡಗಿನ ಬೆಡಗಿ ಮನಸ್ಪೂರ್ವಕವಾಗಿ ಕೊಡಗಿನ ಪರವಾಗಿ ಒದ್ದೆಕಣ್ಣಿನಿಂದ ವಂದಿಸುತ್ತಿದ್ದೇನೆ ಎಂದು ಭಾವನಾತ್ಮಕ ಪತ್ರದ ಮೂಲಕ ಧನ್ಯವಾದ ಹೇಳಿದ್ದಾರೆ.
ಪತ್ರದಲ್ಲಿ ಏನಿದೆ?
ನಮಗೆ ನೋವಾದಾಗ ಅಮ್ಮ ಎಂದು ಕೂಗುತ್ತೇವೆ, ಅಮ್ಮನೇ ಮುನಿಸಿಕೊಂಡಾಗ ಯಾರನ್ನು ಕೂಗುವುದು ಏನೆಂದು ಕೂಗುವುದು. ನಾ ಹುಟ್ಟಿದ, ಬೆಳೆದ, ಆಡಿದ್ದ, ಓದಿದ್ದ, ಉಸಿರಾಡುತ್ತಿದ್ದ ಕೊಡಗು ಇಂದು ಮುಳುಗಿದ ಹಡಗಾಗಿದೆ. ಜಲಪ್ರಳಯಕ್ಕೆ ಲಕ್ಷಾಂತರ ಜನರು ಅಕ್ಷರಶಃ ನೀರುಪಾಲಾಗಿದ್ದಾರೆ. ಇದಕ್ಕೆ ಮೂಕಜೀವಿಗಳು ಹೊರತಾಗಿಲ್ಲ, ಯಾರಿಗೂ ನೋವು ಮಾಡದ ನಮ್ಮವರು ಇಂದು ನೋವಿನಲ್ಲಿದ್ದಾರೆ. ಪ್ರಪಂಚದಲ್ಲಿ ಮೂರರಷ್ಟು ನೀರು ಒಂದರಷ್ಟು ಭೂಮಿ ಎಂಬುದನ್ನು ನೀರೇ ಮುಂದೆ ನಿಂತು ಹೇಳಿದಂತಿದೆ. ಇದನ್ನೂ ಓದಿ: ಕೊಡಗು ಸಂತ್ರಸ್ತರ ನೆರವಿಗೆ ನಿಂತ ಬಿಗ್ ಬಾಸ್ ಖ್ಯಾತಿಯ ದಿವಾಕರ್
We will always stand tall!! #kodavas pic.twitter.com/bqUsWVn8Bg
— Rashmika Mandanna (@iamRashmika) August 22, 2018
ನಾನು, ನೀನು, ನಂದು, ನಿಂದು, ಮೇಲು, ಕೀಳು ಶ್ರೀಮಂತಿಕೆ ಎಲ್ಲಾ ನೀರಿನಲ್ಲಿ ಕೊಚ್ಚಿ ಹೋಗಿದೆ. ಮನುಷ್ಯತ್ವವೇ ಕಣ್ತುಂಬಿಕೊಂಡಿದೆ. ಮಳೆಯ ಶಬ್ಧ ನೀರಿನ ಆರ್ಭ ಕೇಳಿದರೆ ಜೀವ ನಡುಗುವಂತಾಗಿದೆ. ಮಕ್ಕಳು ಮಾಡಿದ ಪಾಪವಾದರೂ ಏನು? ಪ್ರಾಣಿಗಳು ಮಾಡಿದ ಪಾಪವಾದರು ಏನು? ದೇವರೆ ಉತ್ತರಿಸು. ಬೆಟ್ಟಗಳು ನೆಂದು ನೆಲವಾಗಿ, ಬಯಲು ಕೆರೆಗಳಾಗಿ, ದಾರಿಗಳು ನದಿಗಳಾಗಿ, ಕೊಡಗು ಸಮುದ್ರವಾಗಿದೆ. ನೀರು ನೀರು ನೀರು ಬಿಟ್ಟರೆ ಕಣ್ಣೀರು. ಧೈರ್ಯವಾಗಿರಿ ನಾವಿದ್ದೇವೆ ಎಂಬ ನಿಮ್ಮ ಮಾತುಗಳು ನಮ್ಮನ್ನು ಜೀವಂತವಾಗಿರಿಸಿದೆ. ಇದನ್ನೂ ಓದಿ: ಅರ್ಥಪೂರ್ಣ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಡಾಲಿ ಧನಂಜಯ್!
ಸರ್ಕಾರಗಳು, ಸ್ವಯಂ ಸಂಘಗಳು, ಸಂಸ್ಥೆಗಳು, ಚಿತ್ರರಂಗದವರು, ಪತ್ರಕರ್ತರು, ಮಾಧ್ಯಮದವರು, ವಿದ್ಯಾರ್ಥಿಗಳು, ಕೋಟ್ಯಾನುಕೋಟಿ ಕನ್ನಡಿಗರು, ಎಲ್ಲಾ ಭಾಷಿಕರು, ಪ್ರಪಂಚದ ಮೂಲೆಮೂಲೆಯಲ್ಲಿರುವ ಕೊಡವ ಸಮಾಜದವರು, ನೀವುಗಳು ಕೈ ಮೀರಿ ಸಹಾಯ ಮಾಡಿದ್ದೀರಿ, ಮಾಡುತ್ತಿದ್ದೀರಿ. ಬಳ್ಳಾರಿಯ ಜೈಲಿನ ಖೈದಿಗಳು ನಾಲ್ಕುವಾರದ ಮಾಂಸದೂಟ ಬೇಡವೆಂದು ಮೂರು ಲಕ್ಷ ರೂ.ಗಳನ್ನು ಕೊಡಗಿನ ಸಂತ್ರಸ್ತತಿಗೆ ಕಳಿಸಿದ್ದಾರೆಂದರೆ ಮನುಷ್ಯತ್ವ ನಮಗಿಂತ ಮುಂದಿದೆಯೆನಿಸುತ್ತದೆ. ಇದನ್ನೂ ಓದಿ: ಕೊಡಗು ಮರು ನಿರ್ಮಾಣಕ್ಕೆ ನಾವೇ ಸರ್ಕಾರದ ರೀತಿ ಕೆಲಸ ಮಾಡೋಣ – ಪರಿಹಾರ ನಿಧಿಗೆ ಶಿವಣ್ಣ 10 ಲಕ್ಷ ರೂ. ನೆರವು
ನಿಮ್ಮ ಸ್ಪಂದನೆಗೆ ಸಹಾಯಕ್ಕೆ ನಾನು ಋಣಿ. ಮನಸ್ಪೂರ್ವಕವಾಗಿ ಕೊಡಗಿನ ಪರವಾಗಿ ಒದ್ದೆಕಣ್ಣಿನಿಂದ ವಂದಿಸುತ್ತಿದ್ದೇನೆ. ಕೊಡಗನ್ನು ಕೊಡಗಿನವರ ನೆಂದ ನೊಂದ ಬದುಕನ್ನು ಪುನನಿರ್ಮಿಸಬೇಕಾಗಿದೆ. ಕೈ ಜೋಡಿಸಿ ನಾನು ನಿಮ್ಮೊಂದಿಗೆ ಇರುತ್ತೇನೆ ಎಂದು ರಶ್ಮಿಕಾ ಮಂದಣ್ಣ ಟ್ವೀಟ್ ಮಾಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv