ಹೈದರಾಬಾದ್: ಕೊಡಗಿನ ಬೆಡಗಿ ನಟಿ ರಶ್ಮಿಕಾ ಮಂದಣ್ಣ ಅವರು ನಟಿ ಖುಷ್ಬೂಗಾಗಿ ದೇವಾಲಯ ಕಟ್ಟಿದ್ದನ್ನು ಸ್ಮರಿಸಿ ಅಭಿಮಾನಿಗಳನ್ನು ಹೊಗಳಿದ್ದಾರೆ.
ಇತ್ತೀಚೆಗೆ ರಶ್ಮಿಕಾ ಮಂದಣ್ಣ ಅವರು ತೆಲುಗು ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದರು. ಈ ವೇಳೆ ರಶ್ಮಿಕಾ, “90ರ ದಶಕದಲ್ಲಿ ನಟಿ ಖುಷ್ಬೂ ಅವರಿಗೆ ಅಭಿಮಾನಿಗಳು ದೇವಾಲಯ ಕಟ್ಟಿಸಿದ್ದರು ಎಂದು ನನ್ನ ತಂದೆ ನನಗೆ ಹೇಳಿದ್ದರು. ಹಾಗೆಯೇ ನಾನು ಕೂಡ ಒಳ್ಳೆಯ ಸಿನಿಮಾ ಮಾಡುವ ಮೂಲಕ ನಾನು ಶಾಶ್ವತವಾಗಿ ಜನರ ಮನಸ್ಸಿನಲ್ಲಿ ಇರಬೇಕು” ಎಂಬ ಆಸೆಯನ್ನು ಹೊರಹಾಕಿದ್ದರು.
ಅಭಿಮಾನಿಗಳು ದೇವಾಲಯ ಕಟ್ಟಿಸಲಿ ಎಂದು ರಶ್ಮಿಕಾ ನೇರವಾಗಿ ಹೇಳಲಿಲ್ಲ. ಆದರೆ ಅವರ ಮಾತಿನ ಅರ್ಥ ಅಭಿಮಾನಿಗಳು ದೇವಾಲಯ ಕಟ್ಟಿಸಲಿ ಎಂದು ಹೇಳಲಾಗುತ್ತಿದೆ. 90ರ ದಶಕದಲ್ಲಿ ಕಟ್ಟಿಸಿದ ಖುಷ್ಬೂ ದೇವಾಲಯವನ್ನು ಅವರ ಅಭಿಮಾನಿಗಳೇ ಒಡೆದು ಹಾಕಿದ್ದಾರೆ. ಆದರೆ ಈ ವಿಷಯವನ್ನು ರಶ್ಮಿಕಾ ಅವರ ತಂದೆ ತಮ್ಮ ಮಗಳ ಬಳಿ ರಿವೀಲ್ ಮಾಡಲಿಲ್ಲ ಎಂದು ವರದಿಯಾಗಿದೆ.
ರಶ್ಮಿಕಾ ಮಂದಣ್ಣ ಕೊನೆಯದಾಗಿ ನಟ ವಿಜಯ್ ದೇವರಕೊಂಡ ಜೊತೆ ‘ಡಿಯರ್ ಕಾಮ್ರೆಡ್’ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರ ಜುಲೈ 26ರಂದು ನಾಲ್ಕು ಭಾಷೆಯಲ್ಲಿ ಬಿಡುಗಡೆಯಾಗಿದ್ದು, ಭರತ್ ಕಮ್ಮಾ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಚಿತ್ರ ವಿದ್ಯಾರ್ಥಿ ಸಂಘದ ನಾಯಕ ಓರ್ವ ಕ್ರಿಕೆಟ್ ಆಟಗಾರ್ತಿಗೆ ಮನಸೋತು, ಅವರಿಬ್ಬರ ನಡುವಿನ ಪ್ರೀತಿ, ಸಿಟ್ಟು, ಗಲಾಟೆಗಳ ರೋಮ್ಯಾಂಟಿಕ್ ಪ್ರೇಮ ಕಥನವಾಗಿದೆ.