ಬೆಂಗಳೂರು: ಹಿಟ್ ಸಿನಿಮಾ ಗೀತಾ ಗೋವಿಂದಂ ನಂತರ ನಿರ್ದೇಶಕ ಪರಶುರಾಮ್ ಇದೀಗ ನಾಗಚೈತನ್ಯ ಜೊತೆ ಸಿನಿಮಾ ಮಾಡುತ್ತಿದ್ದು, ಇದು ಕಾಮಿಡಿ ಹಾಗೂ ಮನರಂಜನೆಯಾಧರಿತ ಚಿತ್ರವಾಗಿದೆ. ಚಿತ್ರಕ್ಕೆ ನಾಯಕಿಯ ಆಯ್ಕೆ ಕುರಿತು ತೀವ್ರ ಕುತೂಹಲ ಮೂಡಿದ್ದು, ನಟಿ ರಶ್ಮಿಕಾ ಮಂದಣ್ಣ ಹಾಗೂ ಪೂಜಾ ಹೆಗಡೆ ಮಧ್ಯೆ ಭಾರೀ ಪೈಪೋಟಿ ಏರ್ಪಟ್ಟಿದೆ.
ಇನ್ನೂ ಹೆಸರಿಡದ ಈ ಚಿತ್ರಕ್ಕೆ ನಾಯಕ ನಟಿಯರ ಆಯ್ಕೆ ಕುರಿತು ನಿರ್ದೇಶಕ ಪರಶುರಾಮ್ ಹಲವು ದಿನಗಳಿಂದ ತಲೆ ಕೆಡಿಸಿಕೊಂಡಿದ್ದು, ಇಬ್ಬರಲ್ಲಿ ಯಾರನ್ನು ಆಯ್ಕೆ ಮಾಡುವುದು ಎಂಬ ಗೊಂದಲದಲ್ಲಿದ್ದಾರೆ. ಈ ಹಿಂದೆ ಗೀತಾ ಗೋವಿಂದಂ ಸಿನಿಮಾದಲ್ಲಿ ರಶ್ಮಿಕಾ ಅವರ ಪರ್ಫಾರ್ಮೆನ್ಸ್ ನೋಡಿ, ಇವರನ್ನೇ ಆಯ್ಕೆ ಮಾಡಬೇಕೆಂದು ನಿರ್ದೇಶಕರು ಅಂದುಕೊಂಡಿದ್ದರು. ಅಲ್ಲದೆ ರಶ್ಮಿಕಾ ಅಭಿನಯದ ಹಲವು ಚಿತ್ರಗಳು ಯಶಸ್ಸು ಕಂಡಿದ್ದರಿಂದ ಕಿರಿಕ್ ಬೆಡಗಿಯನ್ನೇ ನಾಗಚೈತನ್ಯ ಜೋಡಿಯಾಗಿಸಲು ಮುಂದಾಗಿದ್ದರು. ಆದರೆ ಇದಕ್ಕೆ ವಿಘ್ನ ಎದುರಾಗಿದೆ.
ಒಂದೆಡೆ ನಿರ್ದೇಶಕರು ರಶ್ಮಿಕಾ ಕಡೆ ಮನಸ್ಸು ಮಾಡಿದರೆ, ನಿರ್ಮಾಪಕರು ಪೂಜಾ ಹೆಗಡೆ ಕುರಿತು ಒಲವು ತೋರಸಿದ್ದಾರಂತೆ. ಹೀಗಾಗಿ ನಾಯಕಿಯರ ಆಯ್ಕೆ ಕಗ್ಗಂಟಾಗಿದೆ. ಅಲ್ಲದೆ ನಿರ್ಮಾಪಕರ ಈ ಹಿಂದಿನ ಚಿತ್ರದ ಸಂದರ್ಭದಲ್ಲಿ ಪೂಜಾ ಫ್ಯಾನ್ಸಿ ಅಡ್ವಾನ್ಸ್ ಪಡೆದಿದ್ದಾರೆಂತೆ. ಹೀಗಾಗಿ ಪೂಜಾ ಹೆಗಡೆ ಕುರಿತು ನಿರ್ಮಾಪಕರು ಮನಸ್ಸು ಮಾಡಿದ್ದಾರೆ ಎನ್ನಲಾಗಿದೆ. ಅಂದಹಾಗೆ ಈ ಚಿತ್ರವನ್ನು 14 ರೀಲ್ಸ್ ಪ್ರೊಡಕ್ಷನ್ಸ್ ಸಂಸ್ಥೆ ಚಿತ್ರ ನಿರ್ಮಿಸುತ್ತಿದೆ.
ಈ ಹಿಂದೆ ‘ಒಕ ಲೈಲಾ ಕೋಸಂ’ ಚಿತ್ರದಲ್ಲಿ ಸಹ ನಾಗಚೈತನ್ಯ ಹಾಗೂ ಪೂಜಾ ಹೆಗಡೆ ಜೋಡಿ ಒಂದಾಗಿತ್ತು. ಆದರೆ ಬಾಕ್ಸ್ ಆಫೀಸಿನಲ್ಲಿ ಅಷ್ಟೇನು ಸದ್ದು ಮಾಡಿರಲಿಲ್ಲ. ಪ್ರಸ್ತುತ ನಾಗಚೈತನ್ಯರ ತಮ್ಮ ಅಖಿಲ್ ಅವರ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಸಿನಿಮಾದಲ್ಲಿ ಪೂಜಾ ನಟಿಸುತ್ತಿದ್ದಾರೆ.
ನಾಗಚೈತನ್ಯ ಅವರ ಸಿನಿಮಾಗೂ ಪೂಜಾ ಹೆಗಡೆಯವರೇ ನಾಯಕಿಯಾಗಿ ಆಯ್ಕೆಯಾಗುವುದು ಬಹುತೇಕ ಖಚಿತ ಎನ್ನಲಾಗಿದೆ. ಹೀಗಾಗಿ ನಾಗಚೈತನ್ಯ ಜೊತೆ ರಶ್ಮಿಕಾ ರೊಮ್ಯಾನ್ಸ್ ಮಾಡುವ ಅವಕಾಶವನ್ನು ಕಳೆದುಕೊಳ್ಳಲಿದ್ದಾರೆ. ಈಗಾಗಲೇ ರಶ್ಮಿಕಾ ಅವರಿಗೆ ಹೆಚ್ಚು ಆಫರ್‍ಗಳು ಬರುತ್ತಿದ್ದು, ಭೀಷ್ಮ ಸಕ್ಸಸ್ ನಂತರ ಹಲವು ನಿರ್ಮಾಪಕರು ಅವರನ್ನು ಸಂಪರ್ಕಿಸಿದ್ದಾರೆ.
ಪ್ರಸ್ತುತ ರಶ್ಮಿಕಾ ಮಂದಣ್ಣ ತಮಿಳು ನಟ ಕಾರ್ತಿಯವರ ‘ಸುಲ್ತಾನ್’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದು ತೆಲುಗಿಗೂ ಡಬ್ ಆಗುತ್ತಿದೆ. ಅಲ್ಲದೆ ಬಹುದಿನಗಳ ಗ್ಯಾಪ್ ನಂತರ ಇದೀಗ ಸ್ಯಾಂಡಲ್‍ವುಡ್‍ಗೆ ಎಂಟ್ರಿಯಾಗಿದ್ದು, ಪೊಗರು ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.