ನಿನ್ನೆಯಷ್ಟೇ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಅವರ ಡೀಪ್ ಫೇಕ್ ವಿಡಿಯೋ ವೈರಲ್ ಆಗಿತ್ತು. ಈ ವಿಡಿಯೋಗೆ ಸಂಬಂಧಿಸಿದಂತೆ ಅನೇಕರು ಆತಂಕ ವ್ಯಕ್ತ ಪಡಿಸಿದ್ದರು. ತಪ್ಪಿತಸ್ಥರ ವಿರುದ್ಧದ ಕ್ರಮಕ್ಕಾಗಿ ಬಾಲಿವುಡ್ ಖ್ಯಾತನಟ ಅಮಿತಾಭ್ ಬಚ್ಚನ್ ಒತ್ತಾಯಿಸಿದ್ದರು. ಇದರ ಬೆನ್ನಲ್ಲೇ ತೆಲುಗು ನಟ ನಾಗಚೈತನ್ಯ (Naga Chaitanya) ಕೂಡ ಆತಂಕ ವ್ಯಕ್ತ ಪಡಿಸಿದ್ದಾರೆ. ಮುಂದಿನ ಭವಿಷ್ಯದಲ್ಲಿ ಏನೆಲ್ಲ ಆಗಲಿದೆಯೋ ಎಂದು ಪ್ರಶ್ನೆ ಮಾಡಿದ್ದಾರೆ.
ಡೀಪ್ ಫೇಕ್ ವಿಡಿಯೋಗೆ ಸಂಬಂಧಿಸಿದಂತೆ ಸ್ವತಃ ರಶ್ಮಿಕಾ ಮಂದಣ್ಣ ಅವರೇ ಪ್ರತಿಕ್ರಿಯೆ ನೀಡಿದ್ದರು. ಈ ಘಟನೆಯಿಂದಾಗಿ ನನಗೆ ತುಂಬಾ ನೋವಾಗಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಅಲ್ಲದೇ, ತಾವು ಈ ವಿಷಯದಲ್ಲಿ ಎಷ್ಟು ಸ್ಟ್ರಾಂಗ್ ಆಗಿದ್ದೇನೆ ಎನ್ನುವ ಕುರಿತು ಹೇಳಿದ್ದರು.
ಇಂಥದ್ದೊಂದು ಸಂಗತಿಯನ್ನು ಹಂಚಿಕೊಳ್ಳಲು ತುಂಬಾ ನೋವಾಗುತ್ತೆ. ಆದರೂ, ಇಂತಹ ಡೀಪ್ ಫೇಕ್ (DeepFake) ವಿಡಿಯೋ ಬಗ್ಗೆ ಮಾತನಾಡಲೇಬೇಕಿದೆ. ಪ್ರಮಾಣಿಕವಾಗಿ ಹೇಳೋದಾದರೆ, ತಂತ್ರಜ್ಞಾನವನ್ನು ದುರುಪಯೋಗವು ಅತ್ಯಂತ ಭಯಾನಕವಾಗಿದೆ. ನಾನು ಮಹಿಳೆಯಾಗಿ ಮತ್ತು ನಟಿಯಾಗಿ ನನ್ನನ್ನು ಹೇಗೆ ರಕ್ಷಣೆ ಮಾಡಿಕೊಳ್ಳಬೇಕು ಎನ್ನುವುದರ ಅರಿವಿದೆ. ನನ್ನ ಕುಟುಂಬ ಮತ್ತು ಸ್ನೇಹಿತರು ಹಾಗೂ ಹಿತೈಷಿಗಳು ನನ್ನ ಬೆಂಬಲಕ್ಕೆ ನಿಂತಿದ್ದಾರೆ. ಆದರೆ, ನಾನು ಶಾಲೆ ಅಥವಾ ಕಾಲೇಜಿನಲ್ಲಿ ಇದ್ದಾಗ ಈ ರೀತಿ ಆಗಿದ್ದರೆ ಅದನ್ನು ಹೇಗೆ ನಿಭಾಯಿಸುತ್ತಿದ್ದೆ ಎಂದು ಊಹಿಸಲೂ ಅಸಾಧ್ಯ. ಡೀಪ್ ಫೇಕ್ ಮಾಡುವವರು ಇತರರ ಮೇಲೆ ಪ್ರಭಾವ ಬೀರುವುದಕ್ಕಿಂತ ಮುಂಚೆ ಅಂಥದ್ದನ್ನು ತಡೆಗಟ್ಟಬೇಕಿದೆ ಎಂದು ಹೇಳಿದ್ದಾರೆ ರಶ್ಮಿಕಾ.
ರಶ್ಮಿಕಾ ವಿಡಿಯೋ
ರಶ್ಮಿಕಾ ಮಂದಣ್ಣ ಅವರದ್ದು ಎನ್ನಲಾದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಯಿತು. ಎದೆಭಾಗ ಕಾಣಿಸುವಂತೆ ಬಟ್ಟೆ ಹಾಕಿರುವ ವಿಡಿಯೋವನ್ನು ಹಲವರು ಹಂಚಿಕೊಂಡಿದ್ದರು. ರಶ್ಮಿಕಾ ಮಂದಣ್ಣ ಯಾಕೆ ಹೀಗೆ ಎಂದು ಹಲವರು ಪ್ರಶ್ನಿಸಿದ್ದರು. ಆದರೆ, ಅದು ರಶ್ಮಿಕಾ ಅವರ ವಿಡಿಯೋ ಅಲ್ಲವೆಂದು ಗೊತ್ತಾಗಿದೆ. ಅಭಿಷೇಕ್ ಅನ್ನುವವರು ಮೂಲ ವಿಡಿಯೋವನ್ನು ಪತ್ತೆ ಮಾಡಿ ಎರಡೂ ವಿಡಿಯೋವನ್ನು ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ.
ಹೌದು, ರಶ್ಮಿಕಾ ಮಂದಣ್ಣ ಎಂದು ಹೇಳಲಾದ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಅದು ಅಸಲಿಯಾ ಅಥವಾ ನಕಲಿಯಾ ಎಂದು ಪತ್ತೆ ಹಚ್ಚುವಲ್ಲಿ ಹಲವರು ನಿರತರಾಗಿದ್ದರು. ಆ ವಿಡಿಯೋ ಖಂಡಿತಾ ರಶ್ಮಿಕಾ ಅವರದ್ದು ಅಲ್ಲ ಎಂದು ಕೆಲವರು ಹೇಳಿದ್ದರು. ಕೊನೆಗೂ ಅಭಿಷೇಕ್ ಅಸಲಿ ಮತ್ತು ನಕಲಿ ಎರಡೂ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ವೈರಲ್ ಆಗಿರುವ ವಿಡಿಯೋ ಝರಾ ಪಟೀಲ್ (Zara Patel) ಎನ್ನುವವರದ್ದು ಎಂದು ಅಭಿಷೇಕ್ ಬರೆದುಕೊಂಡಿದ್ದಾರೆ. ಝರಾ ಪಟೇಲ್ ಅವರು ಆ ವಿಡಿಯೋವನ್ನು ಇನ್ಸ್ಟಾದಲ್ಲಿ ಶೇರ್ ಮಾಡಿದ್ದರು. ಆ ವಿಡಿಯೋಗೆ ರಶ್ಮಿಕಾ ತಲೆಯನ್ನು ಮಾಸ್ಕ್ ಮಾಡಿ ಹರಿಬಿಟ್ಟಿದ್ದರು ಕಿಡಿಕೇಡಿಗಳು. ಈ ವಿಡಿಯೋ ಕೂಡ ಸಾಕಷ್ಟು ವೈರಲ್ ಆಗಿತ್ತು.