– ಎರಡು ಲಾರಿ, ಬೈಕ್, ಕಾರು ನಡುವೆ ಸರಣಿ ಅಪಘಾತ
ಬೆಂಗಳೂರು: ಪೈಪೋಟಿಗೆ ಬಿದ್ದು ರ‍್ಯಾಶ್ ಡ್ರೈವಿಂಗ್ ಮಾಡಿದ ಇಬ್ಬರು ಲಾರಿ ಚಾಲಕರ ಬೇಜಾವಾಬ್ದಾರಿಯಿಂದ ಎರಡು ಲಾರಿ, ಬೈಕ್, ಕಾರು ನಡುವೆ ಸರಣಿ ಅಪಘಾತ ನಡೆದ ಘಟನೆ ಬೆಂಗಳೂರು ಹೊರವಲಯ ನೆಲಮಂಗಲದ ಬಳಿ ನಡೆದಿದೆ.
ಇಲ್ಲಿನ ಅಡಕಮಾರನಹಳ್ಳಿ ಗ್ರಾಮದ ಸಮೀಪದ ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿಗಳ ಚಾಲಕರಿಬ್ಬರು ಏಕಾಏಕಿ ಪೈಪೋಟಿಗೆ ಬಿದ್ದವರಂತೆ ಅತೀ ವೇಗವಾಗಿ ಚಾಲನೆ ಮಾಡಿದ್ದಾರೆ. ಈ ವೇಳೆ ನಿಯಂತ್ರಣ ತಪ್ಪಿದ ಒಂದು ಲಾರಿ ರಸ್ತೆ ತಡೆಗೋಡೆಗೆ ಡಿಕ್ಕಿಯಾಗಿದೆ. ಮತ್ತೊಂದು ಲಾರಿ ರಸ್ತೆಯಲ್ಲೇ ಪಲ್ಟಿಯಾಗಿ ಬಿದ್ದಿದೆ.
ಇದರಿಂದಾಗಿ ಬೈಕ್ ಹಾಗೂ ಕಾರುಗಳಿಗೆ ಡಿಕ್ಕಿಯಾಗಿ ಹಾನಿಯಾಗಿದೆ. ಅದೃಷ್ಟವಶಾತ್ ಭೀಕರ ಸರಣಿ ಅಪಘಾತದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಐದಾರು ಮಂದಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಅಪಘಾತದಿಂದಾಗಿ ಸುಮಾರು ನಾಲ್ಕೈದು ಕಿ.ಮೀ ಟ್ರಾಫಿಕ್ ಜಾಮ್ ಉಂಟಾಗಿದೆ. ಈ ಟ್ರಾಫಿಕ್ ನಲ್ಲಿ ಒಂದು ಅಂಬ್ಯುಲೈನ್ಸ್ ಸಿಲುಕಿ ಕೆಲಕಾಲ ಪರದಾಡುವಂತಾಗಿತ್ತು. ನೆಲಮಂಗಲ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಹೆದ್ದಾರಿಯಲ್ಲಿ ಪಲ್ಟಿಯಾಗಿರುವ ವಾಹನ ಹಾಗೂ ಟ್ರಾಫಿಕ್ ಜಾಮ್ ನಿಯಂತ್ರಣಕ್ಕೆ ಮುಂದಾಗಿದ್ದಾರೆ.