ಮುಂಬೈ: ಇಂಟರ್‌ನೆಟ್ ಸ್ಟಾರ್ ರಾನು ಮೊಂಡಲ್ ಸೆಲ್ಫಿ ಕೇಳಲು ಬಂದ ಅಭಿಮಾನಿಗೆ ‘ಡೋಂಟ್ ಟಚ್ ಮಿ’ ಎಂದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಇತ್ತೀಚೆಗೆ ರಾನು ಮೊಂಡಲ್ ಅವರು ಮಾರ್ಕೆಟ್‌ಗೆ ಹೋಗಿದ್ದರು. ಈ ವೇಳೆ ಮಹಿಳಾ ಅಭಿಮಾನಿಯೊಬ್ಬರು ರಾನು ಅವರನ್ನು ನೋಡಿ ಖುಷಿಯಾಗುತ್ತಾರೆ. ಅಲ್ಲದೆ ಅವರ ಕೈ ಹಿಡಿದು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದಾಗುತ್ತಾರೆ. ಅಭಿಮಾನಿಯ ವರ್ತನೆ ನೋಡಿ ರಾನು ಅವರ ಮೇಲೆ ರೇಗಾಡುತ್ತಾರೆ.
ಅಭಿಮಾನಿ ಕೈ ಹಿಡಿದು ಎಳೆಯುತ್ತಿದ್ದಂತೆ ರೊಚ್ಚಿಗೆದ್ದ ರಾನು, ನನ್ನ ಕೈಯನ್ನು ಏಕೆ ಹೀಗೆ ಹಿಡಿದು ಎಳೆದಿದ್ದೀರಿ. ಈ ರೀತಿ ಕೈ ಹಾಕುವುದು ಸರಿನಾ? ಏನಿದೆಲ್ಲಾ? ಎಂದು ಮಹಿಳೆ ಮೇಲೆ ರೇಗಾಡುತ್ತಾರೆ. ರಾನು ಅವರ ವರ್ತನೆ ನೋಡಿ ಮಹಿಳೆ ನಗುವ ಮೂಲಕ ಸುಮ್ಮನಾಗುತ್ತಾರೆ.
ಈ ವಿಡಿಯೋ ಈಗ ವೈರಲ್ ಆಗುತ್ತಿದ್ದು, ಕಮೆಂಟ್ ಮಾಡುವ ಮೂಲಕ ನೆಟ್ಟಿಗರು ತಮ್ಮ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ. ಕೆಲವರು, ‘ರಾನುಗೆ ಈಗ ಅಹಂಕಾರ ಬಂದಿದೆ’ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ‘ರಾನು ಮೊಂಡಲ್ ಅವರ ಆ್ಯಟಿಟ್ಯೂಡ್ ನೋಡಿ’ ಎಂದು ಕಮಂಟ್ ಮಾಡಿದ್ದಾರೆ.
ಪಶ್ಚಿಮ ಬಂಗಾಳದ ರಣಘಾಟ್ ನಿಲ್ದಾಣದಲ್ಲಿ ರಾನು 1972ರಲ್ಲಿ ಬಿಡುಗಡೆಯಾದ `ಶೋರ್’ ಚಿತ್ರದ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರು ಹಾಡಿದ “ಏಕ್ ಪ್ಯಾರ್ ಕಾ ನಗ್ಮಾ ಹೇ” ಚಿತ್ರದ ಹಾಡನ್ನು ಹಾಡುತ್ತಿದ್ದ ವಿಡಿಯೋ ವೈರಲ್ ಆಗಿತ್ತು. ಈ ವಿಡಿಯೋವನ್ನು ಯುವಕನೊಬ್ಬ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ವೈರಲ್ ಆದ ಬೆನ್ನಲೇ ರಾನು ಅವರಿಗೆ ರಿಯಾಲಿಟಿ ಶೋನಲ್ಲಿ ಹಾಡುವ ಅವಕಾಶ ಸಿಕ್ಕಿತ್ತು. ಬಳಿಕ ಗಾಯಕ ಹಿಮೇಶ್ ರೇಶ್ಮಿಯಾ ಅವರು ತಮ್ಮ ಚಿತ್ರದಲ್ಲಿ ಹಾಡಲು ರಾನು ಅವರಿಗೆ ಅವಕಾಶ ಕೊಟ್ಟಿದ್ದರು.
Dont touch me Im Famous. #RanuMondal ???????? pic.twitter.com/G7d7FDvnVB
— Anil.M.Jacob???????? (@AnilMJacob) November 4, 2019
ಚಿತ್ರದಲ್ಲಿ ರಾನು ಹಾಡಿದ ಹಾಡನ್ನು ಹಿಮೇಶ್ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ರಾನು ಅವರ ಹಾಡಿಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿತ್ತು. ಅಲ್ಲದೆ ಅವರ ಅಭಿಮಾನಿಗಳ ಸಂಖ್ಯೆ ಕೂಡ ಹೆಚ್ಚಾಗುತ್ತಿತ್ತು. ರಾನು ಹಾಡಿದ ಮೊದಲ ಹಾಡಿಗೆ ಹಿಮೇಶ್ ಅವರು 6ರಿಂದ 7 ಲಕ್ಷ ರೂ. ಸಂಭಾವನೆ ಸಹ ನೀಡಿದ್ದರು ಎಂಬ ಮಾತುಗಳು ಕೇಳಿ ಬಂದಿತ್ತು. ಇದಾದ ಬಳಿಕ ಹಿಮೇಶ್ ಮತ್ತೆ ತಮ್ಮ ಚಿತ್ರದಲ್ಲಿ ಹಾಡು ಹಾಡಲು ರಾನು ಅವರಿಗೆ ಅವಕಾಶ ಕೊಟ್ಟಿದ್ದರು.