ನವದೆಹಲಿ: 2019ರ ವಿಶ್ವಕಪ್ ಟೂರ್ನಿಯ ವೇಳೆಗೆ ಟೀಂ ಇಂಡಿಯಾ ತಂಡಕ್ಕೆ ಕಮ್‍ಬ್ಯಾಕ್ ಮಾಡುವ ಉದ್ದೇಶ ಹೊಂದಿರುವ ಯುವರಾಜ್ ಸಿಂಗ್ ಬರೋಬ್ಬರಿ 408 ದಿನಗಳ ಬಳಿಕ ಬ್ಯಾಟಿಂಗ್ ಗೆ ಇಳಿದಿದ್ದು, ಈ ವೇಳೆ ತಮ್ಮ ಮೊದಲ ರನ್ ಗಳಿಸಲು 28 ಎಸೆತಗಳನ್ನು ಎದುರಿಸಿದ್ದಾರೆ.
ನವದೆಹಲಿಯ ಫಿರೋಜ್ ಕೊಟ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಪಂದ್ಯದಲ್ಲಿ ಪಂಜಾಬ್ ತಂಡದ ಪರ 5ನೇ ಕ್ರಮಾಂಕದಲ್ಲಿ ಆಡುತ್ತಿರುವ ಯುವರಾಜ್, ಫಾರ್ಮ್ ಕಂಡುಕೊಳ್ಳಲು ಪರದಾಟ ನಡೆಸಿದರು. ಈ ಹಂತದಲ್ಲಿ 29ನೇ ಎಸೆತದಲ್ಲಿ ಯುವಿ ಮೊದಲ ರನ್ ಗಳಿಸಿ ಖಾತೆ ತೆರೆದರು. ಬುಧವಾರ ದಿನದಾಟದ ಅಂತ್ಯದ ವೇಳೆಗೆ ಯುವಿ 47 ಎಸೆತಗಳಲ್ಲಿ 16 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡರು.
ಇತ್ತ ಡೆಲ್ಲಿ ತಂಡದ ಪರ ಆಡುತ್ತಿರುವ ಟೀಂ ಇಂಡಿಯಾ ಮತ್ತೋರ್ವ ಅನುಭವಿ ಆಟಗಾರ ಗೌತಮ್ ಗಂಭೀರ್ 1 ರನ್ ಗಳಿಸಿ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಡೆಲ್ಲಿ ತಂಡ, 107 ರನ್ ಗಳಿಗೆ ಆಲೌಟಾಯಿತು. ಇತ್ತ 2019 ರ ಐಪಿಎಲ್ ಆವೃತ್ತಿಯಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ 37 ವರ್ಷದ ಯುವಿರನ್ನು ಕೈಬಿಟ್ಟಿತ್ತು. ಇದಾದ ಬಳಿಕ ಪಂಜಾಬ್ ತಂಡದ ಯುವ ಆಟಗಾರ ಶುಬ್‍ಮನ್ ಗಿಲ್, ನ್ಯೂಜಿಲೆಂಡ್ ವಿರುದ್ಧದ ಟೀಂ ಇಂಡಿಯಾ ಎ ತಂಡಕ್ಕೆ ಆಯ್ಕೆಯಾದ ಕಾರಣ ಪಂಜಾಬ್ ತಂಡದಲ್ಲಿ ಸ್ಥಾನ ಪಡೆದಿದ್ದರು.
2017ರ ಅಕ್ಟೋಬರಿನಲ್ಲಿ ಯುವರಾಜ್ ಸಿಂಗ್, ವಿದರ್ಭ ತಂಡದ ವಿರುದ್ಧ ನಡೆದ ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಪಂಜಾಬ್ ತಂಡದ ಪರ ಆಡಿದ್ದರು. ಅಂದು ತಂಡದ ನಾಯಕತ್ವ ವಹಿಸಿದ್ದ ಯುವರಾಜ್ ಸಿಂಗ್ ಎರಡು ಇನ್ನಿಂಗ್ಸ್ ಗಳಲ್ಲಿ ಕ್ರಮವಾಗಿ 20, 42 ರನ್ ಗಳಿಸಿದ್ದರು. ಇದೀಗ ಬಹುದಿನಗಳ ಬಳಿಕ ಯುವಿ ಮೈದಾನಕ್ಕೆ ಎಂಟ್ರಿ ಕೊಡುತ್ತಿದಂತೆ ಕ್ರೀಡಾಂಗಣದಲ್ಲಿ ನೆರೆದಿದ್ದ ಅಭಿಮಾನಿಗಳಿಂದ ಭರ್ಜರಿ ಸ್ವಾಗತ ಪಡೆದರು. ಯುವಿ ಪಂದ್ಯದಲ್ಲಿ ಆಡುತ್ತಾರೆಂಬ ಕಾರಣದಿಂದಲೇ ಶಾಲಾ ಕಾಲೇಜು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಕ್ರೀಡಾಂಗಣದಲ್ಲಿ ನೆರೆದಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv