-ಕಾಂಗ್ರೆಸ್ ವಿರುದ್ಧ ರಾಜ್ಯಪಾಲರಿಗೆ ಬಿಜೆಪಿ ದೂರು
-ಹೆಚ್ಡಿಕೆ ತೀಕ್ಷ್ಣ ವಾಗ್ದಾಳಿ
ಬೆಂಗಳೂರು: ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಭೆಯಲ್ಲಿ ಕಾಂಗ್ರೆಸ್ (Congress) ಉಸ್ತುವಾರಿ ರಣದೀಪ್ ಸುರ್ಜೇವಾಲ (Randeep Surjewala) ಪಾಲ್ಗೊಂಡ ವಿಚಾರವಾಗಿ ಬಿಜೆಪಿ (BJP) ರಾಜಭವನದ ಕದ ತಟ್ಟಿದೆ.
Advertisement
ಈ ವಿವಾದ ಸೃಷ್ಟಿಯಾಗುತ್ತಿದ್ದಂತೆ ಕೈ ನಾಯಕರು ಒಬ್ಬೊಬ್ಬರು ಒಂದೊಂದು ಸ್ಪಷ್ಟನೆ ಕೊಡುತ್ತಿದ್ದಾರೆ. ವಿಪಕ್ಷಗಳು ಈ ವಿಚಾರವಾಗಿ ಕಾಂಗ್ರೆಸ್ ವಿರುದ್ಧ ಸಿಡಿದೆದ್ದಿದ್ದಾರೆ. ಅಲ್ಲದೇ ಸಾರ್ವಜನಿಕವಾಗಿಯೂ ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಇದನ್ನೂ ಓದಿ: ಬಿಟ್ ಕಾಯಿನ್ ಹಗರಣ ತನಿಖೆ ಪುನಾರಂಭ ಮಾಡ್ತೀವಿ: ಜಿ.ಪರಮೇಶ್ವರ್
Advertisement
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದೇ ತಿಂಗಳಲ್ಲಿ ಗಂಭೀರ ವಿವಾದವೊಂದನ್ನು ಈ ಮೂಲಕ ಮೈಮೇಲೆ ಎಳೆದುಕೊಂಡಿದೆ. ಮಂಗಳವಾರ ಸುರ್ಜೇವಾಲಾ ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡಿದ್ದರು. ಈ ವಿಚಾರ ಬಿಜೆಪಿ, ಜೆಡಿಎಸ್‍ಗೆ ಈಗ ಭರ್ಜರಿ ಆಹಾರವಾಗಿದೆ. ಸರ್ಕಾರದ ಸಭೆಯಲ್ಲಿ ಸುರ್ಜೇವಾಲ ಭಾಗವಹಿಸಿರುವುದೇಕೆ? ಇದು ಹೈಕಮಾಂಡ್ ಹಂಗಿನ ಸರ್ಕಾರವೇ ಎಂದು ಕಾಂಗ್ರೆಸ್‍ನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ರಾಜ್ಯ ಸರ್ಕಾರಕ್ಕಾಗಲಿ, ಬಿಬಿಎಂಪಿಗಾಗಲಿ ಯಾವುದೇ ರೀತಿಯ ಅಧಿಕೃತ ಸಂಬಂಧವಿರದ ಸುರ್ಜೇವಾಲ ಅವರಿಗೆ ಬಿಬಿಎಂಪಿ (BBMP) ಉನ್ನತ ಅಧಿಕಾರಿಗಳೊಂದಿಗೆ ಏನು ಕೆಲಸ ಎಂದು ವಿಪಕ್ಷಗಳು ಹರಿಹಾಯ್ದಿವೆ.
Advertisement
Advertisement
ಈ ಬಗ್ಗೆ ಮಾತನಾಡಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ (H.D.Kumaraswamy), ರಾಜ್ಯ ಸರ್ಕಾರ ಹೈಕಮಾಂಡ್ ಹಂಗಿನ ಸರ್ಕಾರವಾಗಿದೆ. ರಾಜ್ಯ ಸರ್ಕಾರಕ್ಕೆ ಸಂಬಂಧವಿಲ್ಲದ ದೆಹಲಿಯ ಪ್ರತಿನಿಧಿ ಅಧಿಕಾರಗಳ ಜೊತೆ ಸಭೆ ಮಾಡಿದ್ದಾರೆ. ಇದನ್ನ ನೋಡಿದರೆ ಉಪಮುಖ್ಯಮಂತ್ರಿಗಳು ಎಷ್ಟು ಸುಳ್ಳು ಹೇಳಿದ್ದಾರೆ ಎಂದು ಗೊತ್ತಾಗುತ್ತದೆ. ನಾಡಿನ ಜನತೆಯ ಮುಂದೆ ಅವರ ನಾಟಕೀಯವಾದ ಮಾತುಗಳಿಗೆ ಇದು ಒಂದು ಸಾಕ್ಷಿಯಾಗಿದೆ. ಎಷ್ಟು ದಿನ ಈ ರೀತಿಯ ಸುಳ್ಳುಗಳನ್ನು ಹೇಳಿಕೊಂಡು ಬದುಕುತ್ತೀರಾ ಎಂದು ಆಕ್ರೋಶ ಹೊರಹಾಕಿದ್ದಾರೆ.
ನಮ್ಮ ರಾಜ್ಯದ ಜನರ ಮತವನ್ನು ನಿಮ್ಮ ದೆಹಲಿ ಹೈಕಮಾಂಡ್‍ಗೆ ಗುಲಾಮರಾಗಿ ಇಟ್ಟುಕೊಂಡಿದ್ದೀರಾ? ಅಧಿಕಾರಿಗಳಿಗೆ, ಮಂತ್ರಿಗಳಿಗೆ ಸುರ್ಜೇವಾಲ ಏನು ಸೂಚನೆ ಕೊಟ್ಟಿದ್ದಾರೆ ಎಂಬುದು ಗೊತ್ತಿದೆ. ಜನ ಮತ ಹಾಕಿರುವುದು ನಿಮಗೋ ಅಥವಾ ಕಾಂಗ್ರೆಸ್ ಹೈಕಮಾಂಡ್‍ಗೋ? ಸರ್ಕಾರದ ತಿರ್ಮಾನಗಳನ್ನ ಯಾರೋ ಬೀದಿಯಲ್ಲಿ ಹೋಗುವವರ ಜೊತೆ ಮೀಟಿಂಗ್ ಮಾಡುವುದನ್ನ ನೋಡಿದರೆ ರಾಜ್ಯ ಎಂತಹ ದುರ್ಗತಿಗೆ ಬಂದಿದೆ ಎನ್ನುವುದನ್ನು ಜನ ಅರ್ಥ ಮಾಡಿಕೊಳ್ಳಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ.
ಈ ಬಗ್ಗೆ ಬಿಜೆಪಿ ನಾಯಕರು ವಾಗ್ದಾಳಿ ನಡೆಸಿ, ಕಾಂಗ್ರೆಸ್ ಪಕ್ಷದಿಂದ ಅಧಿಕಾರ ದುರ್ಬಳಕೆ ಆಗಿದೆ. ನಾವು ಈ ಸಂಬಂಧ ರಾಜ್ಯಪಾಲರಿಗೆ ದೂರು ನೀಡಿದ್ದೇವೆ. ರಾಜ್ಯಪಾಲರು ಕಾಂಗ್ರೆಸ್ ಕಿವಿ ಹಿಂಡುವ ಕೆಲಸ ಮಾಡಬೇಕು. ಖಾಸಗಿ ಹೋಟೆಲ್‍ನಲ್ಲಿ ಬಿಬಿಎಂಪಿ ಅಧಿಕಾರಿಗಳ ಜೊತೆ ಸುರ್ಜೇವಾಲ ಅವರ ಸಭೆ ಉದ್ದೇಶ ಏನೆಂಬುದು ಗೊತ್ತಿಲ್ಲ. ಸರ್ಕಾರದ ಸಭೆಯಲ್ಲಿ ಪಕ್ಷದ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಬಾರದು. ಇದರಲ್ಲಿ ಕಾನೂನು ಉಲ್ಲಂಘನೆಯಾಗಿದೆ. ಕಾಂಗ್ರೆಸ್‍ಗೆ ಕಾನೂನು ಉಲ್ಲಂಘನೆ ಮಾಡುವುದೇ ಕೆಲಸ. ಈ ಬಗ್ಗೆ ಕ್ರಮ ಆಗಬೇಕು ಅಂತ ಒತ್ತಾಯಿಸಿದ್ದಾರೆ.
ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ನಡೆದಿರುವುದು ಅಧಿಕೃತ ಸಭೆಯಲ್ಲ. ಬೆಂಗಳೂರು ನಗರಕ್ಕೆ ಸಂಬಂಧಿಸಿದಂತೆ ಕರೆದಿದ್ದ ಸಭೆಯಲ್ಲಿ ಬಿಬಿಎಂಪಿ ಚುನಾವಣೆ ಬಗ್ಗೆಯೂ ಮಾತನಾಡಿದ್ದಾರೆ. ಹೆಬ್ಬಾಳ ಫ್ಲೈಓವರ್ ನೋಡಲು ಹೊರಟಿದ್ದ ವೇಳೆ ಅಲ್ಲಿಗೆ ಬಂದಿದ್ದರು. ಈ ವೇಳೆ ಉಪಮುಖ್ಯಮಂತ್ರಿಗಳು ಶಾಸಕರನ್ನು ಭೇಟಿ ಮಾಡಿದ್ದು, ಕಾನೂನು ಅಭಿಪ್ರಾಯ ಪಡೆಯಲು ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದರು. ಕುಮಾರಸ್ವಾಮಿಯವರು ಸುಮ್ಮನೆ ಆರೋಪ ಮಾಡುತ್ತಾರೆ ಎಂದು ಕುಟುಕಿದ್ದಾರೆ.
ಡಿಸಿಎಂ ಡಿ.ಕೆ ಶಿವಕುಮಾರ್ ಅವರು ನಡೆಸಿದ ಸಭೆಗೆ ರಣದೀಪ್ ಸಿಂಗ್ ಸುರ್ಜೇವಾಲ ಬಂದಿದ್ದಾರೆ ಎಂದು ಗೃಹ ಸಚಿವ ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಪ್ರತಾಪ್ ಸಿಂಹ ಎಳಸು, ರಾಜಕೀಯ ಪ್ರಬುದ್ಧತೆಯಿಲ್ಲ : ಸಿದ್ದರಾಮಯ್ಯ ವಾಗ್ದಾಳಿ