ಕೆಜಿಎಫ್ ಸಿನಿಮಾದ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಅವರ ಕೆ.ಆರ್.ಜಿ ಸ್ಟುಡಿಯೋಗೆ ಇಂದು ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಭೇಟಿ ಮಾಡುವ ಮೂಲಕ ಕುತೂಹಲ ಮೂಡಿಸಿದ್ದಾರೆ. ಈ ಹಿಂದೆಯೂ ಕೂಡ ಇದೇ ಕೆ.ಆರ್.ಜಿ ಸ್ಟುಡಿಯೋ ನಿರ್ಮಿಸುತ್ತಿರುವ ಹೊಯ್ಸಳ ಸಿನಿಮಾದ ಶೂಟಿಂಗ್ ಸ್ಪಾಟ್ ಗೂ ರಮ್ಯಾ ಭೇಟಿ ಮಾಡಿದ್ದರು. ಹಾಗಾಗಿ ಕೆ.ಆರ್.ಜಿ ಸ್ಟುಡಿಯೋ ಅಥವಾ ಹೊಂಬಾಳೆ ಫಿಲ್ಮ್ಸ್ ಮೂಲಕ ರಮ್ಯಾ ಸಿನಿಮಾ ರಂಗಕ್ಕೆ ಕಮ್ ಬ್ಯಾಕ್ ಆಗುತ್ತಿದ್ದಾರೆ ಎನ್ನಲಾಗುತ್ತಿದೆ.
ಪದೇ ಪದೇ ಕೆ.ಆರ್.ಜಿ ಸ್ಟುಡಿಯೋ ಮಾಲೀಕರನ್ನು ರಮ್ಯಾ ಭೇಟಿ ಆಗುತ್ತಿರುವುದರಿಂದ ಈ ಟೀಮ್ ಮೂಲಕವೇ ರಮ್ಯಾ ಸಿನಿಮಾ ಮಾಡಬಹುದು ಎನ್ನುವ ಸುದ್ದಿ ದಟ್ಟವಾಗಿದ್ದು, ಇದು ಪುನೀತ್ ಅವರ ಆಸೆಯೂ ಆಗಿತ್ತು ಎನ್ನಲಾಗಿದೆ. ಪುನೀತ್ ನಟಿಸಬೇಕಿದ್ದ, ಮತ್ತು ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡಬೇಕಿದ್ದ ಚಿತ್ರವೊಂದಕ್ಕೆ ರಮ್ಯಾ ಅವರನ್ನು ನಾಯಕಿಯನ್ನಾಗಿ ಆಯ್ಕೆ ಮಾಡಬೇಕು ಎನ್ನುವುದು ಸ್ವತಃ ಪುನೀತ್ ರಾಜ್ ಕುಮಾರ್ ಅವರ ಆಸೆಯಾಗಿತ್ತಂತೆ. ಅದನ್ನು ಹೊಂಬಾಳೆ ಈಡೇರಿಸಲಿದೆ ಎನ್ನುವುದು ಸದ್ಯದ ವರ್ತಮಾನ. ಇದನ್ನೂ ಓದಿ:ಮತ್ತೆ ಟಾಪ್‌ಲೆಸ್ ಅವತಾರದಲ್ಲಿ ಬಂದ ಉರ್ಫಿ ಜಾವೇದ್: ನೆಟ್ಟಿಗರಿಂದ ನಟಿಗೆ ಕ್ಲಾಸ್
ಇಂದು ಕೂಡ ರಮ್ಯಾ ಅವರು ಕೆ.ಆರ್.ಜಿ ಸ್ಟುಡಿಯೋ ಕಚೇರಿಗೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಖ್ಯಾತ ನಿರ್ಮಾಪಕ ಜಯಣ್ಣ, ನಿರ್ದೇಶಕ ಯೋಗಿ ಜಿ ರಾಜ್, ಪುನೀತ್ ಅವರ ಕುಟುಂಬದ ಸದಸ್ಯರೇ ಆಗಿರುವ ಚೆನ್ನ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಹಾಜರಿದ್ದಾರೆ. ಈಗಾಗಲೇ ರಮ್ಯಾ ಅವರಿಗಾಗಿಯೇ ಕಥೆಯನ್ನು ಸಿದ್ಧ ಪಡಿಸುತ್ತಿದ್ದು, ಅತೀ ಶೀಘ್ರದಲ್ಲೇ ಘೋಷಣೆ ಮಾಡುವ ಸಾಧ್ಯತೆ ಇದೆ. ಆದರೆ, ಈ ಕುರಿತು ಕೆ.ಆರ್.ಜಿ ಸ್ಟುಡಿಯೋ ಯಾವುದೇ ಅಧಿಕೃತ ಮಾಹಿತಿಯನ್ನಂತೂ ನೀಡಿಲ್ಲ.