– ನಮ್ಮ ಪರಿಸ್ಥಿತಿ ತೋಳ ಬಂತು ತೋಳ ಎನ್ನುವಂತಾಗಿದ್ದು ನಿಜ
– ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಮಾತನಾಡಲು ಬಾಕಿ ಇದೆ
ಬೆಳಗಾವಿ: ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಗೋಮುಖ ವ್ಯಾಘ್ರ ಎಂದು ಸಹೋದರ, ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಸತೀಶ್ ಜಾರಕಿಹೊಳಿಯವರು ಅಂಬಿರಾಯ ಪಾಟೀಲ್ ವಿಷಯ ಪ್ರಸ್ತಾಪಿಸಿದ್ದಾರೆ. ಅಂಬಿರಾಯ ಅವರು ನಮ್ಮ ಮನೆಯಲ್ಲಿ ಬೆಳೆದಿದ್ದಾರೆ. ಆದರೆ ಸಚಿವರು ಹತಾಶ ಮನೋಭಾವದಿಂದ ಈ ರೀತಿಯಾಗಿ ವರ್ತಿಸುತ್ತಿದ್ದಾರೆ ಎಂದು ಹೇಳಿದರು.
Advertisement
Advertisement
ನಾನು ಸಚಿವನಾಗಿ ಆರಾಮವಾಗಿದ್ದೆ. ಆದರೆ ಸತೀಶ್ ಜಾರಕಿಹೊಳಿ ಅವರು ತಮ್ಮ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಕೆಲವರಿಗೆ ಪ್ರಚೋದನೆ ಕೊಟ್ಟರು. ಅಷ್ಟೇ ಅಲ್ಲದೆ ನಾನು ಮಂತ್ರಿಯಾಗಿದ್ದಕ್ಕೆ ಮನೆಗೆ ಬಂದು ಕಣ್ಣೀರು ಹಾಕಿದರು. ಈ ಮೂಲಕ ಪಕ್ಷದಲ್ಲಿ ಭಿನ್ನಮತ ಆರಂಭಕ್ಕೆ ಅವರೇ ಕಾರಣವಾದರು ಎಂದು ಆರೋಪಿಸಿದರು.
Advertisement
ನಾನು ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತ. ಸತೀಶ್ ಜಾರಕಿಹೊಳಿ ಅವರಂತವರು ಬಂದು ಪಕ್ಷ ಹಾಳಾಯಿತು. ಈ ಹಿಂದೆ ಭಾರೀ ನೋವು ಹೊತ್ತುಕೊಂಡು ಬಂದಿದ್ದ ಸಚಿವರು ನನ್ನ ಮುಂದೆ ಕಣ್ಣೀರು ಹಾಕಿದ್ದರು. ಅವರ ಪರಿಸ್ಥಿತಿಗೆ ಕರಗಿ ಮುಖ್ಯಮಂತ್ರಿ ಮಾಡಬೇಕು ಎಂಬ ಹೇಳಿಕೆ ನೀಡಿದ್ದೆ. ಈಗ ನನಗೆ ಮೋಸ ಮಾಡಿ ಮಂತ್ರಿಯಾಗಿದ್ದಾರೆ, ಆಗಲಿ ಬಿಡಿ. ಮುಂದೆ ಇದಕ್ಕೆ ಸರಿಯಾದ ಉತ್ತರ ನೀಡುತ್ತೇನೆ ಎಂದು ಗುಡುಗಿದರು.
Advertisement
ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹೇಳಿದಂತೆ ನಮ್ಮ ಪರಿಸ್ಥಿತಿ ತೋಳ ಬಂತು ತೋಳ ಎನ್ನುವ ರೀತಿ ಆಗಿರುವುದು ನಿಜ. ಪಕ್ಷದ ನಾಯಕರ ವಿರುದ್ಧ ಮಾತನಾಡಿ ಒಬ್ಬನೇ ಕೆಡುವುದು ಬೇಡ ಅಂತ ಸುಮ್ಮನೇ ಇದ್ದೇನೆ. ಈ ಹಿಂದೆಯೇ ನಾನು ರಾಜೀನಾಮೆ ನೀಡಲು ನಿರ್ಧಾರ ಮಾಡಿದ್ದೆ. ಆದರೆ ನಮ್ಮ ಬೆಂಬಲಿಗರಿಂದಾಗಿ ಸ್ವಲ್ಪ ವಿಳಂಬವಾಯಿತು ಎಂದರು.
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ನಡೆಯುವ ಉಪಚುನಾವಣೆಯಲ್ಲಿ ಮಾತ್ರ ಗೋಕಾಕ್ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ. ಬಳಿಕ ನಡೆಯುವ ಚುನಾವಣೆಯಲ್ಲಿ ಗೋಕಾಕ್ ಕ್ಷೇತ್ರವನ್ನು ಲಖನ್ ಜಾರಕಿಹೊಳಿ ಅವರಿಗೆ ಬಿಟ್ಟು, ಯಮಕಮನಮರಡಿ ಕ್ಷೇತ್ರದಿಂದ ಕಣಕ್ಕೆ ಇಳಿಯುತ್ತೇನೆ ಎಂದು ತಿಳಿಸಿದರು.
ಕಂಪ್ಲಿ ಶಾಸಕ ಗಣೇಶ್ ಅವರಿಗೆ ಜಾಮೀನು ಸಿಕ್ಕಿದ್ದು ಸಂತೋಷ ತಂದಿದೆ. ರಾಜಕೀಯ ದುರುದ್ದೇಶದಿಂದ ಘಟನೆ ನಡೆದಿತ್ತು ಎಂದು ರಮೇಶ್ ಜಾರಕಿಹೊಳಿ ಆರೋಪಿಸಿದರು.
ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ನನ್ನ ಬಗ್ಗೆ ಮಾತನಾಡುತ್ತಿದ್ದಾರೆ. ಆಕೆಯ ಬಗ್ಗೆ ಮಾತನಾಡುವುದು ಬಹಳ ಇದೆ. ರಾಜೀನಾಮೆ ಪ್ರಕ್ರಿಯೆ ಮುಗಿದ ಮೇಲೆ ಆಕೆಯ ಕುಟುಂಬ ಹೇಗಿತ್ತು? ಹೇಗೆ ಬೆಳೆದಳು ಎನ್ನುವುದನ್ನು ಬಹಿರಂಗವಾಗಿ ಹೇಳುತ್ತೇನೆ ಎಂದು ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದರು.
ರಾಜೀನಾಮೆ ವಿಚಾರವಾಗಿ ರಮೇಶ್ ಜಾರಕಿಹೊಳಿ ಅವರು ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ. ಅವರಿಗೆ ಬಿಜೆಪಿಯ ಗೋವಿಂದ್ ಕಾರಜೋಳ ಸಾಥ್ ನೀಡಿದ್ದಾರೆ.