ಬಾಗಲಕೋಟೆ: ನಾನು ಯಮಕನಮರಡಿ ಕ್ಷೇತ್ರದಿಂದ ಸ್ಪರ್ಧಿಸಿ ಸತೀಶ್ ತಾಕತ್ತನ್ನು ನೋಡುತ್ತೇನೆ ಎಂದು ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಸಹೋದರನಿಗೆ ಸವಾಲು ಹಾಕಿದ್ದಾರೆ.
ಜಿಲ್ಲೆಯ ಗೋಕಾಕ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಖನ್ ಜಾರಕಿಹೊಳಿಯನ್ನು ಇಂದು ಭೇಟಿ ಮಾಡುತ್ತೇನೆ. ಯಮಕನಮರಡಿಯಿಂದ ಸ್ಪರ್ಧೆ ಮಾಡದಂತೆ ಹಿರಿಯ ಅಣ್ಣನಾಗಿ ನಾನು ಲಖನ್‍ಗೆ ತಿಳಿ ಹೇಳುತ್ತೇನೆ. ಲಖನ್ ನಿಲುವು ಏನೆಂದು ನನಗೆ ತಿಳಿಯುತ್ತಿಲ್ಲ, ಒಂದೇ ರಾತ್ರಿ ಯಾವ ಜಾದು ಆಯ್ತು ಗೊತ್ತಿಲ್ಲ. ಆದರೆ ಲಖನ್ ಬದಲಾಗಿದ್ದಾನೆ. ಇಂದಿಗೂ ಲಖನ್ ಮೇಲೆ ನನಗೆ ಪ್ರೀತಿ ಇದೆ ಎಂದು ರಮೇಶ್ ಜಾರಕಿಹೊಳಿ ತಮ್ಮನ ಮೇಲೆ ಪ್ರೀತಿ ತೋರಿಸಿದ್ದಾರೆ.
Advertisement
Advertisement
ನಮ್ಮ ಮೇಲೆ ಯಾವುದೇ ಹಗರಣ ಇಲ್ಲ ಹೀಗಾಗಿ ಅಳಿಯಂದಿರ ಮೇಲೆ ಲಖನ್ ವಾಗ್ದಾಳಿ ಮಾಡುತ್ತಿದ್ದಾರೆ. ಲಖನ್ ಇವತ್ತಿಗೂ ನನ್ನ ಪ್ರೀತಿಯ ತಮ್ಮ. ಹೀಗಾಗಿ ಈ ಚುನಾವಣೆಯಲ್ಲಿ ಸುಮ್ಮನೆ ಕುಳಿತುಕೊಳ್ಳಲಿ ಎಂದು ಹೇಳುತ್ತೇನೆ. ಮುಂದಿನ ಚುನಾವಣೆಯಲ್ಲಿ ಗೋಕಾಕ್‍ನಲ್ಲಿ ನಿಲ್ಲಲಿ ನಾನೇ ಗೆಲ್ಲಿಸುತ್ತೇನೆ. ಈ ಉಪಚುನಾವಣೆಯಲ್ಲಿ ಲಖನ್ ಸುಮ್ಮನೆ ಇರಲಿ. ಮುಂದಿನ ಚುನಾವಣೆಯಲ್ಲಿ ಗೋಕಾಕ್ ಕ್ಷೇತ್ರ ಬಿಟ್ಟು ಕೊಡುತ್ತೇನೆ ಎಂದು ಭರವಸೆ ನೀಡಿದ್ದಾರೆ. ಅಲ್ಲದೆ ಸೋಮವಾರ ನಾಮಪತ್ರ ಸಲ್ಲಿಸುವುದಾಗಿ ಇದೇ ವೇಳೆ ಸ್ಪಷ್ಟಪಡಿಸಿದರು.
Advertisement
Advertisement
ನ್ಯಾಯಾಲಯದ ಮೇಲೆ ನಮಗೆ ಸಂಪೂರ್ಣ ವಿಶ್ವಾಸ ಇದ್ದು ಕ್ಷೇತ್ರದ ಜನರಿಗೆ ಸ್ವಲ್ಪ ಆತಂಕವಾಗಿದೆ ಅಷ್ಟೇ. ಹೀಗಾಗಿ ಸಭೆ ನಡೆಸುತ್ತಿದ್ದೇನೆ. ತುಘಲಕ್ ರಮೇಶ್ ಕುಮಾರ್ ವಾದದ ಪ್ರಕಾರ ನಾವು ಚುನಾವಣೆಗೆ ನಿಲ್ಲಲು ಬರುವುದಿಲ್ಲ. ಫೆಬ್ರವರಿಯಲ್ಲಿ ವಿಪ್ ಕೊಟ್ಟಿದ್ದಕ್ಕೆ ನಾನು ಅಧಿವೇಶನಕ್ಕೆ ಹಾಜರಾಗಿದ್ದೇನೆ. ಆ ವಿಪ್ ಅಂದಿಗೆ ಮುಕ್ತಾಯವಾಗಿದೆ. ಮಗಳ ಮದುವೆಗೆ ಹೋಗಿದ್ದಾರೆ ಎಂದು ಸಿದ್ದರಾಮಯ್ಯ ಅವರೇ ಹೇಳಿದ್ದರು. ಆ ನಂತರ ವಿಪ್ ಉಲ್ಲಂಘನೆ ಮಾಡಿದ್ದಾರೆ ಎಂದು ತಿರುಚಿದ್ದಾರೆ. ಪ್ರಧಾನಿ ಮೋದಿ ಇದ್ದ ಬ್ಯಾನರ್‍ನಲ್ಲಿ ನನ್ನ ಫೋಟೊ ಸೇರಿಸಿ ಕುತಂತ್ರದಿಂದ ಹಲವು ಸಾಕ್ಷಿ ಸಿದ್ಧಪಡಿಸಿದ್ದಾರೆ. ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸಿದ್ದರಾಮಯ್ಯನವರ ಏಜೆಂಟರಂತೆ ಕೆಲಸ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.