ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧದ ಲೈಂಗಿಕ ದುರ್ಬಳಕೆ ಆರೋಪದಲ್ಲಿ ಬೆಂಗಳೂರು ಪೊಲೀಸರಿಗೆ ರಿಲ್ಯಾಕ್ಸ್ ಸಿಕ್ಕಿದೆ.
ಕನಕಪುರದ ದಿನೇಶ್ ಕಲ್ಲಹಳ್ಳಿ ದೂರಿನ ಅನುಸಾರ ಎಫ್‍ಐಆರ್ ದಾಖಲಿಸಲು ನಿರ್ಲಕ್ಷ್ಯ ವಹಿಸಲಾಗಿದೆ. ಪ್ರಕರಣದಲ್ಲಿ ಪೊಲೀಸರ ನಡೆ ಅನುಮಾನ ಮೂಡಿಸಿದೆ. ಹಾಗಾಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಡಿಸಿಪಿ ಅನುಚೇತ್ ಮತ್ತು ಕಬ್ಬನ್ ಪಾರ್ಕ್ ಪೊಲೀಸ್ ಠಾಣಾಧಿಕಾರಿ ವಿರುದ್ಧ ಕ್ರಮ ತೆಗೆದುಕೊಳ್ಳಿ ಅಂತ 8ನೇ ಎಸಿಎಂಎಂ ನ್ಯಾಯಾಲಯಕ್ಕೆ ಆದರ್ಶ್ ಐಯ್ಯರ್ ಎಂಬವರು ದೂರು ನೀಡಿದ್ದರು.
ದೂರು ಸ್ವೀಕರಿಸಿದ್ದ ಅಧೀನ ನ್ಯಾಯಾಲಯ ಪೊಲೀಸರ ವಿರುದ್ಧ ತನಿಖೆಗೆ ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ಪೊಲೀಸರು ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಕೆಳಹಂತದ ನ್ಯಾಯಾಲಯದ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿದೆ. ಇದನ್ನೂ ಓದಿ: ಯಾವುದೇ ಧರ್ಮ, ಸಮಾಜ ಜಾತಿಯನ್ನು ನಿಂದಿಸೋ ಉದ್ದೇಶ ನನ್ನದಲ್ಲ ತಪ್ಪಾಗಿದೆ: ಹಂಸಲೇಖ
ಏನಿದು ಪ್ರಕರಣ..?
ಮಾರ್ಚ್ 2ರಂದು ರಮೇಶ್ ಜಾರಕಿಹೊಳಿ ವಿರುದ್ಧ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆ ಬಳಿಕ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿ ತಮ್ಮ ಹೇಳಿಕೆ ದಾಖಲಿಸಿದ್ದರು. ಇತ್ತ ವೀಡಿಯೋ ಸಂಚಲನ ಸೃಷ್ಟಿಸಿ ರಮೇಶ್ ಜಾರಕಿಹೊಳಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಹ ನೀಡಿದ್ದರು. ಆ ಬಳಿಕದಿಂದ ಅವರು ಎಲ್ಲೂ ಕಾಣಿಸಿಕೊಂಡಿರಲಿಲ್ಲ. ನಂತರ ಸ್ವತಃ ಸುದ್ದಿಗೋಷ್ಠಿ ಕರೆದು ಮಾಧ್ಯಮಗಳ ಮುಂದೆ ಭಾವುಕರಾಗಿದ್ದರು. ಇಷ್ಟೆಲ್ಲಾ ಆದ ನಂತರ ಮಾಜಿ ಸಚಿವರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟು ಗೋಕಾಕ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು.
ಇದಾದ ಬಳಿಕ ಎಸ್‍ಐಟಿ ಮುಂದೆ ಹಾಜರಾಗಿದ್ದ ರಮೇಶ್ ಜಾರಕಿಹೊಳಿ, ಯುವತಿ ಸಮ್ಮತಿಯ ಮೇರೆಗೆ ಲೈಂಗಿಕ ಸಂಪರ್ಕದಲ್ಲಿ ಭಾಗಿಯಾಗಿದ್ದು, ಬಳಿಕ ಆಕೆಯೇ ವೀಡಿಯೋ ಮಾಡಿಕೊಂಡು ಈ ರೀತಿ ನಡೆದುಕೊಳ್ಳುತ್ತಾ ಇದ್ದಾಳೆ ಎಂದು ಅಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದರು. ಆದರೆ ಈ ಮಾಹಿತಿಯನ್ನು ಎಸ್‍ಐಟಿ ಅಧಿಕಾರಿಗಳು ಅಲ್ಲಗೆಳೆದಿತ್ತು.