ಹೈದರಾಬಾದ್: ರಾಮ್ ಚರಣ್‍ತೇಜಾ ಹಾಗೂ ಮೆಗಾ ಸ್ಟಾರ್ ಚಿರಂಜೀವಿ ತಂದೆ ಮಕ್ಕಳು ಎನ್ನುವುದಕ್ಕಿಂತ ಪರಸ್ಪರ ಸ್ನೇಹಿತರಂತೆ ಇದ್ದಾರೆ. ಏಕೆಂದರೆ ಚಿರು ಅವರ ಹಲವು ಸಿನಿಮಾಗಳಲ್ಲಿ ರಾಮ್ ಚರಣ್ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಈ ಮೂಲಕ ತಂದೆಯ ಸಿನಿಮಾಗಳಿಗೆ ಬೂಸ್ಟ್ ನೀಡುತ್ತಿದ್ದಾರೆ. ಅಲ್ಲದೆ ತಂದೆಗಾಗಿ ಎರಡು ಸಿನಿಮಾಗಳನ್ನು ಸಹ ನಿರ್ಮಿಸಿದ್ದಾರೆ. ಹೀಗೆ ತಂದೆಗೆ ಬೆನ್ನುಲುಬಾಗಿ ನಿಂತಿರುವ ರಾಮ್‍ಚರಣ್ ಇದೀಗ ಚಿರಂಜೀವಿಯರಿಗೆ ಗುರುವಾಗುತ್ತಿದ್ದಾರಂತೆ.
ಮೆಗಾ ಸ್ಟಾರ್ ಕಮ್ ಬ್ಯಾಕ್ ಮಾಡಿದ್ದ ‘ಕೈದಿ ನಂ.150’ಯಲ್ಲಿ ರಾಮ್ ಚರಣ್ ಕಾಣಿಸಿಕೊಂಡು, ಅಪ್ಪನ ಜೊತೆಗೆ ಡಾನ್ಸ್ ಮಾಡಿದ್ದರು. ನಂತರ ಅಪ್ಪನಿಗಾಗಿ ಎರಡು ಸಿನಿಮಾ ನಿರ್ಮಿಸಿದ್ದಾರೆ ಸಹ. ಮಾತ್ರವಲ್ಲದೆ ಇತ್ತೀಚೆಗೆ ತಂದೆ ಟ್ವಿಟ್ಟರ್ ಖಾತೆ ತೆರೆದಿದ್ದಕ್ಕೆ ರಾಮ್‍ಚರಣ್ ಸಹ ಟ್ವಿಟ್ಟರ್ ಗೆ ಎಂಟ್ರಿ ಕೊಟ್ಟಿದ್ದರು. ಹೀಗೆ ಅಪ್ಪನಿಗೆ ಸಪೋರ್ಟ್ ಮಾಡುತ್ತ ಬಂದಿದ್ದಾರೆ. ಆದರೆ ಇದೀಗ ಗುರುವಾಗಲು ಹೊರಟಿದ್ದಾರೆ.
ಹೌದು ಚಿರು ನಟನೆಯ ‘ಆಚಾರ್ಯ’ ಸಿನಿಮಾದಲ್ಲಿ ಇನ್ನೊಂದು ಮಹತ್ವದ ಪಾತ್ರವಿದ್ದು, ಈ ಪಾತ್ರವನ್ನು ಯಾರು ನಿರ್ವಹಿಸುತ್ತಾರೆ ಎಂಬ ಕುರಿತು ಬಹಳ ದಿನಗಳಿಂದ ಚರ್ಚೆ ನಡೆಯುತ್ತಿತ್ತು. ಅದೀಗ ರಾಮ್ ಚರಣ್ ನಟಿಸುವುದು ಕನ್ಫರ್ಮ್ ಆಗಿದೆಯಂತೆ. ಇನ್ನೂ ಅಚ್ಚರಿ ಎಂದರೆ ಈ ಪಾತ್ರ ಚಿರಂಜೀವಿಯವರ ಗುರುವಿನ ಪಾತ್ರವಂತೆ. ಸಿನಿಮಾದಲ್ಲಿ 30 ನಿಮಿಷ ಕಾಣಿಸಿಕೊಳ್ಳುವ ಈ ಪಾತ್ರವನ್ನು ರಾಮ್‍ಚರಣ್ ನಿರ್ವಹಿಸಲಿದ್ದಾರಂತೆ. ಈ ಮೂಲಕ ತಂದೆಗೆ ಬೂಸ್ಟ್ ನೀಡಲು ತಯಾರಾಗುತ್ತಿದ್ದಾರೆ.
ರಾಮ್ ಚರಣ್ ಈಗಾಗಲೇ ಆರ್‍ಆರ್‍ಆರ್ ಚಿತ್ರದಲ್ಲಿ ಬ್ಯೂಸಿಯಾಗಿದ್ದು, ಹೀಗಾಗಿ ‘ಆಚಾರ್ಯ’ ಚಿತ್ರಕ್ಕೆ ಡೇಟ್ ಹೊಂದಿಸುವುದು ಸಾಧ್ಯವಿಲ್ಲ ಎನ್ನಲಾಗಿತ್ತು. ಅಲ್ಲದೆ ಈ ಪಾತ್ರವನ್ನು ಮಹೇಶ್ ಬಾಬು ನಿರ್ವಹಿಸಲಿದ್ದಾರೆ ಎಂಬ ಮಾತುಗಳು ಸಹ ಕೇಳಿ ಬಂದಿದ್ದವು. ಇದೀಗ ಆರ್‍ಆರ್‍ಆರ್ ನಿರ್ದೇಶಕ ರಾಜಮೌಳಿ ಅವರು ರಾಮ್‍ಚರಣ್ ‘ಆಚಾರ್ಯ’ ಚಿತ್ರದಲ್ಲಿ ನಟಿಸಲು ಒಂದು ತಿಂಗಳು ಅವಕಾಶ ನೀಡಿದ್ದಾರೆ. ಹೀಗಾಗಿ ಅವರೇ ತಮ್ಮ ತಂದೆಯ ಗುರುವಿನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಕೊರೊನಾ ಹಿನ್ನೆಲೆ ದೇಶವೇ ಲಾಕ್‍ಡೌನ್ ಆಗಿದ್ದು, ಸಿನಿಮಾ ಕ್ಷೇತ್ರ ಸಹ ಸ್ತಬ್ಧವಾಗಿದೆ. ಹೀಗಾಗಿ ಪರಿಸ್ಥಿತಿ ತಿಳಿಯಾದ ಬಳಿಕ ಶೂಟಿಂಗ್ ಪ್ರಾರಂಭವಾಗಲಿದೆ. ಕೊರೊನಾ ಅವಾಂತರದ ಬಳಿಕ ರಾಮ್ ಚರಣ್ ಎರಡೂ ಚಿತ್ರಗಳಲ್ಲಿ ಬ್ಯುಸಿಯಾಗಲಿದ್ದಾರೆ.