Tuesday, 17th July 2018

Recent News

ತಾಕತ್ತಿದ್ದರೆ ನನ್ನ ವಿರುದ್ಧ ಚುನಾವಣೆಗೆ ನಿಲ್ಲಲಿ- ಕಲ್ಲಡ್ಕ ಭಟ್ ಗೆ ರೈ ಸವಾಲ್

ಮಡಿಕೇರಿ: ತಾಕತ್ತಿದ್ದರೆ ಆರ್‍ಎಸ್‍ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ನನ್ನ ವಿರುದ್ಧ ಚುನಾವಣೆಗೆ ನಿಲ್ಲಲಿ ಅಂತ ಅರಣ್ಯ ಸಚಿವ ರಮಾನಾಥ ರೈ ಸವಾಲೆಸೆದಿದ್ದಾರೆ.

ಕೊಡಗು ಜಿಲ್ಲೆ ವಿರಾಜಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ವಿರುದ್ಧ ಚುನಾವಣೆಗೆ ನಿಂತರೆ ಅವರಿಗೆ ಠೇವಣಿ ಸಿಗಲ್ಲ. ಅವ್ರನ್ನ ದೊಡ್ಡ ಜನ ಅಂದುಕೊಂಡಿದ್ದೀರಾ? ಅವರೇನೆಂದು ನಮ್ಮೂರಿನ ಜನರಿಗೆ ಗೊತ್ತಿದೆ ಅಂತ ಪ್ರಭಾಕರ್ ಭಟ್ ವಿರುದ್ಧ ರೈ ಮತ್ತೆ ಕಿಡಿಕಾರಿದ್ರು.

ಕಲ್ಲಡ್ಕ ಪ್ರಭಾಕರ ಭಟ್ ಕೂಡ ಮಂಜೂರಾತಿ ಆಗಿದ್ದ ಒಂದು ಶಾಲೆಯನ್ನು ಸ್ವಾರ್ಥಕ್ಕಾಗಿ ಮುಚ್ಚಿದ್ದಾರೆ. ಇದೀಗ ಶಾಲೆಯ ವಿಚಾರದ ಚರ್ಚೆ ಅರ್ಥಹೀನ. ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಸರ್ಕಾರ ಬಿಸಿಯೂಟ ನೀಡುತ್ತದೆ. ಕಲ್ಲಡ್ಕ ಪ್ರಭಾಕರ ಭಟ್ ಶಾಲೆ ಅನುದಾನಿತ ಶಾಲೆ ಅದಕ್ಕೆ ಬಿಸಿಯೂಟ ಸಿಗುತ್ತದೆ. ಆದರೆ ಅವರಿಗೆ ಬಿಸಿಯೂಟ ಬೇಡ, ಹಣ ಬೇಕು, ಅದೂ ದೇವಸ್ಥಾನ ಹಣ. ನಾನು ಹೇಳುತ್ತೇನೆ ದೇವಾಲಯದ ಹಣ ದೇವಾಲಯಕ್ಕೆ ಮಾತ್ರ ಬಳಕೆಯಾಗಬೇಕು. ದೇವಸ್ಥಾನದ ಹಣ ಶಾಲೆಗೆ ಬಳಸಿಕೊಂಡಿರುವುದು ಅಧಿಕಾರ ದುರುಪಯೋಗ. ಹೀಗಾಗಿ ಶಾಲೆಗೆ ಹೋಗುವ ಹಣಕ್ಕೆ ಕಡಿವಾಣ ಹಾಕಿರುವುದು ಸರಿ ಅಂತ ಅವರು ಸರ್ಕಾರದ ನಡೆಯನ್ನು ಮತ್ತೊಮ್ಮೆ ಸಮರ್ಥಿಸಿಕೊಂಡರು.

ದೇಶದಲ್ಲಿ ಬಿಜೆಪಿ ವರ್ಚಸ್ಸು ಕಡಿಮೆಯಾಗುತ್ತಿದೆ. ಲೋಕಸಭಾ ಚುನಾವಣಾ ವೇಳೆ ಇದ್ದ ಶಕ್ತಿ ಅವರಿಗಿಲ್ಲ. ಸಿಎಂ ಮತ್ತು ಕೆಪಿಸಿಸಿ ಅಧ್ಯಕ್ಷರ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ತಾವು ನಡೆಸಿದ ಸಾಮರಸ್ಯ ಯಾತ್ರೆ ಯಶಸ್ವಿಯಾಗಿದೆ. ಸೋನಿಯಾ ಗಾಂಧಿ ಸಕ್ರಿಯ ರಾಜಕಾರಣದಿಂದ ನಿವೃತ್ತಿ ವಿಚಾರದ ಬಗ್ಗೆ ಮಾಹಿತಿ ಇಲ್ಲ, ಸೊ ನೋ ಕಮೆಂಟ್ ಎಂದು ಪ್ರತಿಕ್ರಿಯಿಸಿದರು.

ಕಾಂಗ್ರೆಸ್ ಮುತ್ಸದ್ಧಿ ಜಾಫರ್ ಷರೀಫ್ ಹೇಳಿಕೆ ಅವರ ವೈಯಕ್ತಿಕ ವಿಚಾರ. ಅಂತಹ ಭಿನ್ನಾಭಿಪ್ರಾಯ ಇಲ್ಲ. ಗುಜರಾತ್ ಚುನಾವಣೆಯ ಎಕ್ಸಿಟ್ ಪೋಲ್ ಬಿಜೆಪಿ ಪರ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ವಿರೋಧಿ ಅಲೆ ಇದ್ದ ಗುಜರಾತ್ ನಲ್ಲಿ ಕಾಂಗ್ರೆಸ್ ಸುಧಾರಣೆ ಕಾಣುತ್ತಿದೆ. ಇನ್ನೂ ಮತ ಎಣಿಕೆ ಕಾರ್ಯ ಬಾಕಿ ಇದೆ, ಚುನಾವಣೆ ಫಲಿತಾಂಶ ಬರುವವರೆಗೆ ಕಾದು ನೋಡೋಣ ಅಂತ ಅವರು ಹೇಳಿದ್ರು.

Leave a Reply

Your email address will not be published. Required fields are marked *