ರಾಮನಗರ: ರಾಮನಗರ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾಗಿ ಕನಕಪುರ ತಾಲೂಕು ತುಂಗಣಿ ಜಿಲ್ಲಾ ಪಂಚಾಯ್ತಿ ಕ್ಷೇತ್ರದ ಸದಸ್ಯೆ ಸಿ.ವಿ. ಉಷಾ ರವಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಪಂಚಾಯತ್ ಚುನಾವಣಾ ಪ್ರಕ್ರಿಯೆಯಲ್ಲಿ ಉಷಾ ರವಿ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. ಹೀಗಾಗಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಕಾರಿಯಾಗಿದ್ದ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ಹರ್ಷ ಗುಪ್ತ ಘೋಷಿಸಿದರು.
Advertisement
ಚುನಾವಣಾ ಪ್ರಕ್ರಿಯೆಯು ಮಂಗಳವಾರ ಬೆಳಗ್ಗೆ 8.30ರಿಂದ ಆರಂಭವಾಯಿತು. ತೆರವಾಗಿರುವ ಉಪಾಧ್ಯಕ್ಷರ ಸ್ಥಾನಕ್ಕೆ ನಾಮಪತ್ರಗಳನ್ನು 9.30ರವರೆಗೆ ಸ್ವೀಕರಿಸಲಾಯಿತು. ಹೆಚ್ಚುವರಿ ಜಿಲ್ಲಾಕಾರಿ ಬಿ.ಪಿ.ವಿಜಯ್ ನಾಮಪತ್ರಗಳನ್ನು ಸ್ವೀಕರಿಸಿದರು. ತುಂಗಣಿ ಜಿಲ್ಲಾ ಪಂಚಾಯತ್ ಕ್ಷೇತ್ರದ ಸದಸ್ಯೆ ಸಿ.ವಿ.ಉಷಾ ರವಿ ಮಾತ್ರ ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಹಿಂಪಡೆಯುವ ನಿಗದಿತ ಅವಧಿಯ ನಂತರ ಉಪಾಧ್ಯಕ್ಷ ಸ್ಥಾನಕ್ಕೆ ಒಂದೇ ಒಂದು ನಾಮಪತ್ರ ಸಲ್ಲಿಕೆ ಆಗಿದ್ದರಿಂದ ಉಷಾ ರವಿ ಅವರು ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಘೋಷಣೆ ಆಯಿತು.
Advertisement
Advertisement
ರಾಮನಗರ ಜಿಲ್ಲಾ ಪಂಚಾಯತ್ ಒಟ್ಟು 22 ಸದಸ್ಯರನ್ನು ಹೊಂದಿದೆ. ಆದರೆ ಉಪಾಧ್ಯಕ್ಷರ ಆಯ್ಕೆಗೆ ನಡೆದ ಚುನಾವಣಾ ಸಭೆಯಲ್ಲಿ ಕೇವಲ 15 ಮಂದಿ ಹಾಜರಿದ್ದರು. ಕೋರಂ ಇದ್ದ ಕಾರಣ ಚುನಾವಣೆಗೆ ಭಾದಕವಾಗಲಿಲ್ಲ.
Advertisement
ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾಗಿ ಆಯ್ಕೆಯಾದ ಸಿ.ವಿ.ಉಷಾ ರವಿ ಅವರು ಮಾತನಾಡಿ, ಜಿಲ್ಲಾ ಪಂಚಾಯ್ತಿಗೆ ಬರುವ ಸರ್ಕಾರದ ಅನುದಾನಗಳು ಸದ್ಬಳಕೆಗೆ ತಾವು ಆದ್ಯತೆ ನೀಡುತ್ತೇನೆ. ಅಧ್ಯಕ್ಷರು ಮತ್ತು ಸದಸ್ಯರ ಮಾರ್ಗದರ್ಶನ, ಸಲಹೆಯ ಮೇರೆಗೆ ತಮ್ಮ ಸ್ಥಾನವನ್ನು ಸಮರ್ಪಕವಾಗಿ ನಿರ್ವಹಿಸುತ್ತೇನೆ. ಅಷ್ಟೇ ಅಲ್ಲದೆ ಜಿಲ್ಲೆಯ ಸಮಗ್ರ ಅಭಿವೃದ್ಧಿಯನ್ನು ಗಮನದಲ್ಲಿರಿಸಿಕೊಂಡು ನನ್ನ ಕರ್ತವ್ಯ ನಿರ್ವಹಿಸುತ್ತೇನೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಸದಸ್ಯರುಗಳಾದ ಕಾಂಗ್ರೆಸ್‍ನ ರಾಮನಗರ ಜಿಲ್ಲಾಧ್ಯಕ್ಷರಾದ ಎಸ್.ಗಂಗಾಧರ್, ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಸೋದರ ಸಿ.ಪಿ.ರಾಜೇಶ್ ಸೇರಿದಂತೆ ಎಚ್.ಕೆ.ನಾಗರಾಜು, ಶಂಕರ್, ಎಸ್.ನಾಗರತ್ನ, ನಾಜಿಯಾ ಗೈರಾಗಿದ್ದರು.