– ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿ ಎಚ್.ಬಸಪ್ಪ ಆಯ್ಕೆ
ರಾಮನಗರ: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಸಂಸದ ಡಿ.ಕೆ.ಸುರೇಶ್ ಅನುಪಸ್ಥಿತಿಯಲ್ಲಿ ರಾಮನಗರ ಜಿಲ್ಲಾ ಪಂಚಾಯತ್‍ನ ಅಧ್ಯಕ್ಷ ಚುನಾವಣೆ ನಡೆದಿದ್ದು, ಅವರ ಬೆಂಬಲ ಅಭ್ಯರ್ಥಿಯೇ ಆಯ್ಕೆಯಾಗಿದ್ದಾರೆ. ಈ ಮೂಲಕ ಡಿಕೆ ಬ್ರದರ್ಸ್ ಹವಾ ಜಿಲ್ಲೆಯಲ್ಲಿ ಕಡಿಮೆಯಾಗಿಲ್ಲ ಎಂಬುದು ನಿರೂಪಿತವಾಗಿದೆ.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ 10 ತಿಂಗಳ ಅವಧಿಯ ಜಿಲ್ಲಾ ಪಂಚಾಯತ್ ಅಧ್ಯಕ್ಷ ಗಾದಿಗಾಗಿ ಮಂಗಳವಾರ ಚುನಾವಣೆ ನಡೆಯಿತು. ಸಾಮಾನ್ಯ ವರ್ಗಕ್ಕೆ ಮೀಸಲಿರಿಸಿದ್ದ ಅಧ್ಯಕ್ಷ ಸ್ಥಾನಕ್ಕೆ ಕನಕಪುರ ತಾಲೂಕು ಹೊಸದುರ್ಗ ಕ್ಷೇತ್ರದ ಸದಸ್ಯ ಎಚ್.ಬಸಪ್ಪ ಅವರೊಬ್ಬರೇ ನಾಮಪತ್ರ ಸಲ್ಲಿಸಿದ್ದರು. ಇವರನ್ನು ಹೊರತು ಪಡಿಸಿ ಮತ್ಯಾವ ಸದಸ್ಯರು ನಾಮಪತ್ರ ಸಲ್ಲಿಸದ ಕಾರಣ ರಾಮನಗರ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿ ಎಚ್.ಬಸಪ್ಪ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಕಾರಿಯಾಗಿದ್ದ ಪ್ರಾದೇಶಿಕ ಆಯುಕ್ತ ಹರ್ಷಗುಪ್ತ ಘೋಷಿಸಿದರು. ಇದನ್ನೂ ಓದಿ: 100 ರೂ. ಇದ್ದ ಆಸ್ತಿ ಮೌಲ್ಯ ಈಗ 1 ಸಾವಿರಕ್ಕೆ ಏರಿಕೆಯಾಗಿದೆ, ಅಕ್ರಮ ಹೇಗೆ ಆಗುತ್ತೆ – ಸಿಂಘ್ವಿ ಪ್ರಶ್ನೆ
Advertisement
Advertisement
ಮೊದಲ ಬಾರಿಗೆ ಗೈರು:
ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಸಂಸದ ಡಿ.ಕೆ.ಸುರೇಶ್ ಸಹೋದರರು ಜಿಲ್ಲೆಯಲ್ಲಿ ಕಳೆದ 10 ವರ್ಷಗಳಿಂದ ಯಾವುದೇ ಚುನಾವಣೆ ನಡೆದರೂ ಹಾಜರಾಗುತ್ತಿದ್ದರು. ಆದರೆ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ಥಾನದ ಚುನಾವಣೆಗೆ ಇದೇ ಮೊದಲ ಬಾರಿಗೆ ಗೈರಾಗಿದರು. ಹೀಗಾಗಿ ಚುನಾವಣೆಗೆ ಆಸಕ್ತಿ ತೋರದ ಡಿ.ಕೆ ಸಹೋದರರ ಬೆಂಬಲಿಗರು ಸಹ ಸಪ್ಪೆ ಮೊರೆ ಹಾಕಿಕೊಂಡಿದ್ದರು.
Advertisement
ಚುನಾವಣಾ ಪ್ರಕ್ರಿಯೆಯಲ್ಲಿ 22 ಸದಸ್ಯರ ಪೈಕಿ 20 ಸದಸ್ಯರು ಹಾಜರಿದ್ದರು. ದೊಡ್ಡಾಲಹಳ್ಳಿ ಕ್ಷೇತ್ರದ ಸದಸ್ಯ ಶಿವಕುಮಾರ್ ಮತ್ತು ಮಳೂರು ಕ್ಷೇತ್ರದ ಸದಸ್ಯ ಸಿ.ಪಿ.ರಾಜೇಶ್ ಗೈರಾಗಿದ್ದರು. ಪಕ್ಷಾತೀತವಾಗಿ ಎಲ್ಲಾ ಸದಸ್ಯರು ಪ್ರಕ್ರಿಯೆಯಲ್ಲಿ ಭಾಗವಹಿಸಿ ನೂತನ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದರು.
Advertisement
ಸದಸ್ಯರಲ್ಲಿ ಯಾವುದೇ ಬಿನ್ನಾಭಿಪ್ರಾಯ ಇಟ್ಟುಕೊಳ್ಳದೆ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದೇವೆ. ಅಧ್ಯಕ್ಷರಾಗಿ ಕೆಲಸ ಮಾಡಿರುವವರ ಸಹಕಾರ ಪಡೆದು ಸಂಸದ ಡಿ.ಕೆ.ಸುರೇಶ್ ಮತ್ತು ನಾಲ್ಕು ತಾಲೂಕಿನ ಶಾಸಕರ ಮಾರ್ಗದರ್ಶನದಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿ ಮಾಡುವುದಾಗಿ ಜಿಲ್ಲಾ ಪಂಚಾಯತ್ ನೂತನ ಅಧ್ಯಕ್ಷ ಬಸಪ್ಪ ಭರವಸೆ ನೀಡಿದರು.
ಡಿಕೆ ಬ್ರದರ್ಸ್ ಇಲ್ಲದೇ ನಮ್ಮಲ್ಲಿ ನಗು ಹೋಗಿದೆ. ಅವರಿಲ್ಲದೇ ಅಧಿಕಾರ ಸ್ವೀಕರಿಸೋಕು ಮನಸ್ಸಿರಲಿಲ್ಲ. ಅಲ್ಲದೇ ಅವರು ಕಷ್ಟದಲ್ಲಿರುವಾಗ ಅಧಿಕಾರ ನಮಗೆ ಮುಖ್ಯವಾಗಿರಲಿಲ್ಲ. ಆದರೆ ಅವರೇ ಈ ಮುನ್ನ ನೀಡಿದ್ದ ಸೂಚನೆ ಮೇರೆಗೆ ಅಧಿಕಾರ ಸ್ವೀಕರಿಸಲಾಗಿದೆ. ಅಧಿಕಾರಕ್ಕಾಗಿ ಅವರ ಮೇಲೆ ಪ್ರಭಾವ ಬೀರುವಂತಹ ಯಾವುದೇ ಕೆಲಸವನ್ನೂ ಯಾರೂ ಮಾಡಿಲ್ಲ. ಇಂತಹ ಸಮಯದಲ್ಲಿ ಅವರ ಬಳಿ ಪ್ರಸ್ತಾಪ ಮಾಡುವುದು ಸರಿಯಲ್ಲ ಎಂದು ಜಿಲ್ಲಾ ನಾಯಕರು, ಪ್ರಮುಖ ಮುಖಂಡರೆಲ್ಲ ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಬಸಪ್ಪ ತಿಳಿಸಿದರು.
ಜಿಲ್ಲಾ ಪಂಚಾಯತ್ ಬಲಾಬಲ:
22 ಸದಸ್ಯರ ಸಂಖ್ಯಾಬಲ ಹೊಂದಿರುವ ರಾಮನಗರ ಜಿಲ್ಲಾ ಪಂಚಾಯತ್‍ಗೆ 2016ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಕಾಂಗ್ರೆಸ್‍ನ 16 ಮತ್ತು ಜೆಡಿಎಸ್‍ನ 6 ಸದಸ್ಯರು ಗೆಲವು ಸಾಧಿಸಿದ್ದವು. ಕುದೂರು ಜಿಲ್ಲಾ ಪಂಚಾಯತ್ ಕ್ಷೇತ್ರದ ಸದಸ್ಯ ಎ.ಮಂಜು ಅವರು 2018ರ ಮಾಗಡಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ವಿಜೇತರಾದ ಹಿನ್ನಲೆ ಇವರಿಂದ ತೆರವಾಗಿದ್ದ ಸ್ಥಾನಕ್ಕೆ ಅಣ್ಣೇಗೌಡ ಅವಿರೋಧವಾಗಿ ಆಯ್ಕೆ ಯಾಗಿದ್ದರು. ಪ್ರಸ್ತುತ ಜಿಲ್ಲಾ ಪಂಚಾಯಿತ್‍ನಲ್ಲಿ ಕಾಂಗ್ರೆಸ್‍ನ 16, ಜೆಡಿಎಸ್‍ನ 5 ಹಾಗೂ ಒಬ್ಬ ಪಕ್ಷೇತರ ಸದಸ್ಯರಿದ್ದಾರೆ.