ರಾಮನಗರ: ಹೊಸ ವರ್ಷದ ಮೊದಲ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಲು ತೆರಳಿದ್ದ ಪೊಲೀಸ್ ಪೇದೆಯೊಬ್ಬ ಹಸುಗಳ ಮೈ ತೊಳೆಯಲು ಹೋಗಿ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕನಕಪುರ ತಾಲೂಕಿನ ಹುಣಸನಹಳ್ಳಿಯಲ್ಲಿ ನಡೆದಿದೆ.
ಕನಕಪುರ ತಾಲೂಕಿನ ಕೋಡಿಹಳ್ಳಿ ಹೋಬಳಿಯ ಹುಣಸನಹಳ್ಳಿ ಗ್ರಾಮದ ಚಿಕ್ಕವೆಂಕಟಯ್ಯ ಪುತ್ರ ಚಿಕ್ಕಯ್ಯ (30) ಮೃತ ಪೊಲೀಸ್ ಪೇದೆ. ರಾಮನಗರ ಜಿಲ್ಲಾ ಪೊಲೀಸ್ ಭವನದಲ್ಲಿ ಕೆಲಸ ಮಾಡುತ್ತಿದ್ದ ಪೇದೆ ಚಿಕ್ಕಯ್ಯ ಸಂಕ್ರಾಂತಿ ಹಬ್ಬ ಆಚರಿಸಲು ನಿನ್ನೆ ಸ್ವಗ್ರಾಮಕ್ಕೆ ತೆರಳಿದ್ದರು. ಮನೆಯಲ್ಲಿನ ರಾಸುಗಳ ಮೈ ತೊಳೆದು ಸಿಂಗಾರ ಮಾಡಲು ಕೆರೆಗೆ ಹೋಗಿದ್ದ ವೇಳೆ ಮುಳುಗಿ ಸಾವನ್ನಪ್ಪಿದ್ದಾರೆ.
Advertisement
Advertisement
ಹಸುಗಳ ಮೈ ತೊಳೆಯಲು ಹೋಗಿದ್ದ ಚಿಕ್ಕಯ್ಯ ಮನೆಗೆ ವಾಪಸ್ ಬಾರದ ಹಿನ್ನೆಲೆಯಲ್ಲಿ ಕೆರೆಯ ಬಳಿ ಹೋಗಿ ನೋಡಿದ ವೇಳೆ ಘಟನೆ ಬೆಳಕಿಗೆ ಬಂದಿದ್ದು, ರಾತ್ರಿಯಾಗಿದ್ದ ಕಾರಣ ಶವ ಸಿಕ್ಕಿರಲಿಲ್ಲ. ಇಂದು ಕೆರೆಯಲ್ಲಿ ಶೋಧ ಕಾರ್ಯ ನಡೆಸಿ ಮೃತದೇಹವನ್ನು ಹೊರತೆಗೆಯಲಾಗಿದೆ.
Advertisement
ಮೃತ ಪೇದೆ ಚಿಕ್ಕಯ್ಯ ರಾಮನಗರ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳ ಕಚೇರಿಯ ಟಪ್ಪಾಲು ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಘಟನೆ ಸಂಬಂಧ ಕೋಡಿಹಳ್ಳಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.