ರಾಮನಗರ: ಕೇತುಗ್ರಸ್ಥ ಸೂರ್ಯಗ್ರಹಣದ ವೇಳೆ ಹಲವರು ಜನರಲ್ಲಿನ ಮೂಢನಂಬಿಕೆ ಹೋಗಲಾಡಿಸಲು ನಾನಾ ರೀತಿಯಲ್ಲಿ ಅರಿವು ಕಾರ್ಯಕ್ರಮ ನಡೆಸಿದ್ದಾರೆ. ಆದರೆ ರಾಮನಗರದ ಕನಕಪುರ ತಾಲೂಕಿನ ಹಾರೋಹಳ್ಳಿಯಲ್ಲಿ ಸಂಘಟನೆಯೊಂದರ ಕಾರ್ಯಕರ್ತರು ಬಾಡೂಟ ಸವಿಯುವುದರ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯ ಮಾಡಿದ್ದರು.
ಸಮತಾ ಸೈನಿಕ ದಳ ಸಂಘಟನೆಯ ಕಾರ್ಯಕರ್ತರು ಹಾರೋಹಳ್ಳಿಯ ಸ್ಮಶಾನದಲ್ಲಿ ಬಿರಿಯಾನಿ ಹಾಗೂ ಬಾಡೂಟವನ್ನು ಆಯೋಜನೆ ಮಾಡಿದ್ದರು. ಅಲ್ಲದೇ ಸ್ಮಶಾನದಲ್ಲಿನ ಗೋರಿಗಳ ಬಳಿ ಕುಳಿತು ಗ್ರಹಣದ ಸಮಯದಲ್ಲಿಯೇ ಊಟ ಮಾಡುವ ಮೂಲಕ ಅರಿವು ಕಾರ್ಯಕ್ರಮ ನಡೆಸಿದ್ದರು.
Advertisement
Advertisement
ವಿಜ್ಞಾನದ ಮೇಲೆ ಜ್ಯೋತಿಷ್ಯದ ದಬ್ಬಾಳಿಕೆ ನಿಲ್ಲಲಿ, ಅಜ್ಞಾನ ಅಳಿಯಲಿ-ವಿಜ್ಞಾನ ಉಳಿಯಲಿ, ಗ್ರಹಣದ ಚಿಂತೆ ಬಿಡಿ-ಸಾಮಾನ್ಯ ಜೀವನ ಮಾಡಿ, ಮೂಡನಂಬಿಕೆಗಳ ವಿರುದ್ಧ ನಮ್ಮ ಹೋರಾಟ ಎಂಬ ಪೋಷಣೆಗಳನ್ನು ಕೂಗಿ ಸ್ಮಶಾನದ ದಾರಿಯಲ್ಲಿ ಓಡಾಡುತ್ತಿದ್ದ ಸಾರ್ವಜನಿಕರ ಗಮನ ಸೆಳೆದರು. ಅಲ್ಲದೇ ಗ್ರಹಣದ ಸಮಯದಲ್ಲಿ ಊಟ, ತಿಂಡಿ ಸೇವನೆ, ನೀರು ಕುಡಿಯುವುದರಿಂದ ಏನೂ ಆಗುವುದಿಲ್ಲ ಎಂದು ಸಾರ್ವಜನಿಕರಲ್ಲಿ ಅರಿವು ಮೂಡಿಸುವುದರ ಜೊತೆಗೆ ಸಾರ್ವಜನಿಕರಿಗೂ ಸಹ ಬಾಡೂಟ ಉಣಬಡಿಸಿದ್ದರು.
Advertisement
ಇದೇ ವೇಳೆ ಮಾತನಾಡಿದ ಸಂಘಟನೆಯ ಕೋಟೆ ಕುಮಾರ್, ಗ್ರಹಣದ ಹೆಸರಿನಲ್ಲಿ ಮುಗ್ಧ ಜನರನ್ನ ಮೌಢ್ಯತೆಗೆ ತಳ್ಳುವಂತಹ ಪ್ರಯತ್ನ ಮಾಡಲಾಗುತ್ತಿದೆ. ಗ್ರಹಣ ಕೇವಲ ನೆರಳು-ಬೆಳಕಿನಾಟ ಅಷ್ಟೇ ವಿನಃ ರಾಹು, ಕೇತು ಗಂಡಾಂತರ ಯಾವುದೂ ಇಲ್ಲ. ಜನರನ್ನ ಆಧುನಿಕತೆಯ ವೈಜ್ಞಾನಿಕ ಜೀವನದೆಡೆಗೆ ಕರೆದೊಯ್ಯುವುದು ಎಲ್ಲರ ಕರ್ತವ್ಯವಾಗಬೇಕು. ಗ್ರಹಣದ ಹೆಸರಿನಲ್ಲಿ ಮುಗ್ಧ ಜನರನ್ನ ಮೋಸ ಮಾಡುವಂತಾಗಬಾರದು. ಈ ಹಿಂದೆ ಚಂದ್ರ ಗ್ರಹಣದ ವೇಳೆಯೂ ಸ್ಮಶಾನದಲ್ಲಿ ಸಾಮೂಹಿಕ ಬಾಡೂಟ ಭೋಜನೆ ಮಾಡಿದ್ದೇವೆ. ಅದೇ ರೀತಿ ಸೂರ್ಯ ಗ್ರಹಣದಂದು ಸಹ ಬಾಡೂಟವನ್ನ ಸವಿಯುವುದರ ಮೂಲಕ ಅರಿವು ಮೂಡಿಸುವ ಕೆಲಸ ಮಾಡುತ್ತಿರುವುದಾಗಿ ತಿಳಿಸಿದ್ದರು.