– ರಾವಣನ ಪರಂಪರೆ ಬೆಳೆದಿದೆ
ರಾಮನಗರ: ಕಾಶ್ಮೀರ ನಮ್ಮ ಜೊತೆಯಲ್ಲಿ ಸೇರಿಕೊಂಡಿದ್ದು ಅಲ್ಲಿಗೆ ನಾವು ಹೋಗಬಹುದು ಬರಬಹುದು. ಹಾಗೇಯೇ ರಾಮನಗರದ ಬಾಲಗೇರಿಗೆ ಹೋಗಬಹುದು, ಅಲ್ಲಿಂದ ಬರಬಹುದು. ಇನ್ನೊಂದು ಸ್ವಲ್ಪ ಪಿಓಕೆ ಬಾಕಿಯಿದೆ ನಾಲಬಂದವಾಡಿ (ಮುಸ್ಲಿಂರೇ ಹೆಚ್ಚಿನದಾಗಿ ಅಲ್ಪ ಹಿಂದುಗಳು ವಾಸಿಸುವ ಬಡಾವಣೆ) ಅದು ಸ್ವಲ್ಪ ದಿನದ ಬಳಿಕ ನಮಗೆ ಸಿಗುತ್ತೆ ಎಂದು ಹಿರಿಯರು ಹೇಳಿರುವುದಾಗಿ ಆರ್‍ಎಸ್‍ಎಸ್ ಮುಖಂಡ ಡಾ.ಕಲ್ಲಡ್ಕ ಪ್ರಭಾಕರ್ ಭಟ್ ಪಥಸಂಚಲನದಲ್ಲಿ ಹೇಳಿದ್ದಾರೆ.
ರಾಮನಗರದಲ್ಲಿ ನಡೆದ ಆರ್‍ಎಸ್‍ಎಸ್ ಪಥಸಂಚಲನದಲ್ಲಿ ಭಾಗವಹಿಸಿ ಗಣವೇಷಧಾರಿಗಳನ್ನುದ್ದೇಶಿ ಮಾತನಾಡಿದ ಅವರು, ರಾಮನಗರದ ದುರ್ದೈವ ರಾಮನಗರ ಪರಂಪರೆ ಇಲ್ಲಿ ಬೆಳೆದಿಲ್ಲ. ಬದಲಿಗೆ ರಾವಣನ ಪರಂಪರೆ ಬೆಳೆಯುವಂತಾಯ್ತು. ಅಧಿಕಾರದ ದರ್ಪ, ದೌರ್ಜನ್ಯದಿಂದ ಅಧಿಕಾರ ನಡೆಸಲು ಸಾಧ್ಯವಿಲ್ಲ. ಅಧಿಕಾರ ಸಾಕಷ್ಟು ದಿನವೂ ಉಳಿಯುವುದಿಲ್ಲ ಎಂದು ಪರೋಕ್ಷವಾಗಿ ಮಾಜಿ ಎಚ್.ಡಿ.ಕುಮಾರಸ್ವಾಮಿ ಮತ್ತು ಡಿ.ಕೆ.ಶಿವಕುಮಾರ್ ಅವರಿಗೆ ಟಾಂಗ್ ನೀಡಿದರು.
Advertisement
Advertisement
ಮಂಗಳೂರು ಗಲಭೆ ವಿಚಾರವಾಗಿ ಮಂಗಳೂರನ್ನು ಪಾಕಿಸ್ತಾನದ ರೀತಿ ಮಾಡಬೇಕು ಎಂದು ಮುಂದಾಗಿದ್ದರು. ಅಲ್ಲದೇ ಅಂದು ನಡೆದ ಗಲಭೆ ಎಲ್ಲೋ ಕಾಶ್ಮೀರದಲ್ಲಿ ನಡೆಯುತ್ತಿದ್ಯಾ ಎನ್ನುವಂತಿತ್ತು ಎಂದು ತಿಳಿಸಿದರು. ಅಂಬೇಡ್ಕರ್ ಅವರನ್ನು ಬರೀ ದಲಿತರ ಬಂಧು ಅಂತಾರೆ. ಆದರೆ ಅವರ ದಲಿತರ ಬಂಧುವಲ್ಲ ರಾಷ್ಟ್ರೀಯ ಬಂಧು ಎಂದರು.
Advertisement
ಕನಕಪುರಕ್ಕೆ ಭೇಟಿ ನೀಡಿದ್ದ ವಿಚಾರವನ್ನು ಪ್ರಸ್ತಾಪಿಸಿದ ಅವರು ಕಪಾಲ ಬೆಟ್ಟದಲ್ಲಿ ಈಗಾಗಲೇ 11 ಅಡಿ ಎತ್ತರದ ಯೇಸು ಪ್ರತಿಮೆ ನಿಲ್ಲಿಸಿದ್ದು, 113 ಅಡಿ ಎತ್ತರದ ಪ್ರತಿಮೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಆದರೆ ಅಲ್ಲಿನ ಮುನೇಶ್ವರ ಕಲ್ಲಿನ ಮೇಲೆ ಶಿಲುಬೆ ನಿಲ್ಲಿಸಿದ್ದಾರೆ. ಪಕ್ಕದಲ್ಲಿನ ಕೆರೆಗೆ ಪಾದ್ರಿ ಕೆರೆ ಎನ್ನುತ್ತಾರೆ, ಅದು ಯಾವಾಗ ಪಾದ್ರಿ ಕೆರೆಯಾಯ್ತು ಎಂದು ಪ್ರಶ್ನಿಸಿದರು. ಅಲ್ಲಿನ ಜನರಿಗೆ ಮತಾಂತರಗೊಂಡರೆ ಎರಡ್ಮೂರು ಎಕರೆ ಜಮೀನು ನೀಡುವ ಷರತ್ತಿನ ಮೇಲೆ ಮತಾಂತರ ಮಾಡಿದ್ದಾರೆ. ಕ್ರಿಶ್ಚಿಯನ್ ಸಮಾಜ ನಿರ್ಮಿಸಲು ಹೊರಟಿದ್ದಾರೆ. ಆದರೆ ಇದು ಕ್ರಿಸ್ತನ ನಾಡಲ್ಲ, ಕೃಷ್ಣನ ನಾಡು ಎಂದು ಕಿಡಿಕಾರಿದರು.
Advertisement
ಸ್ವತಂತ್ರ ಭಾರತದ ವೇಳೆ ದುರ್ಬಲ ಹಾಗೂ ಹೇಡಿ ನಾಯಕತ್ವವಿತ್ತು. ಆದರೆ ಇದೀಗ ದೇಶದಲ್ಲಿ ಅತ್ಯಂತ ಪ್ರಬಲವಾದ ನಾಯಕತ್ವ ಅಧಿಕಾರ ನಡೆಸುತ್ತಿದ್ದು, ಪಾಕಿಸ್ತಾನಕ್ಕೆ ನಮ್ಮನ್ನ ಕೆಣಕುವುದು ಕಷ್ಟದ ಕೆಲಸವಾಗಿದೆ. ಭಯೋತ್ಪಾದಕರನ್ನು ನಿರ್ಮಾಣ ಮಾಡುವಂತಹ ಕಾರ್ಖಾನೆ ಪಾಕಿಸ್ತಾನವಾಗಿದ್ದು, ಅದು ಪಾಪಿಗಳ ರಾಜ್ಯ ಪಾಕಿಸ್ತಾನವಾಗಿದೆ ಎಂದು ವಾಗ್ದಾಳಿ ಮಾಡಿದರು.
ಇದೇ ವೇಳೆ ಹೊರದೇಶದಿಂದ ಬಂದು ದೇಶದಲ್ಲಿರುವ ಎರಡ್ಮೂರು ಕೋಟಿ ಜನರಿಗೆ ರೇಷನ್ ಕಾರ್ಡ್ ಕೊಟ್ಟಿಲ್ಲ. ಭೂಮಿ ಕೊಟ್ಟಿಲ್ಲ, ಏನೇನೂ ಕೊಟ್ಟಿಲ್ಲ. ಆ ಹಿಂದೂ ಸಮಾಜಕ್ಕೆ ನ್ಯಾಯ ಕೊಡುವುದಕ್ಕಾಗಿ ಪೌರತ್ವ ಕಾಯ್ದೆ ತಂದಿರುವುದು. ಪೌರತ್ವವನ್ನು ಕೊಡುತ್ತಿರುವುದೇ ವಿನಃ ತೆಗೆಯುತ್ತಿರುವುದಲ್ಲ ಎಂದು ಪೌರತ್ವ ಕಾಯ್ದೆ ತಿದ್ದುಪಡಿ ಪರ ಬ್ಯಾಟಿಂಗ್ ನಡೆಸಿದರು.
ಸ್ವಾಮಿ ವಿವೇಕಾನಂದರವರು ಭಾಗವಹಿಸಿದ್ದು ಸರ್ವಧರ್ಮ ಸಮ್ಮೇಳನ ಅಲ್ಲ, ಅದು ವರ್ಡ್ ರಿಲಿಜಿಯನ್ ಕಾನ್ಫರೆನ್ಸ್, ರಿಲಿಜಿಯನ್ ಅನ್ನೋದು ಒಂದು ಮತ ಮಾತ್ರವಾಗಿದ್ದು ಕ್ರೈಸ್ತ ಧರ್ಮವೇ ಶ್ರೇಷ್ಠ ಅನ್ನೋದನ್ನ ತೋರಿಸಲು ಮಾಡಿದ್ದ ಕಾರ್ಯಕ್ರಮವಾಗಿತ್ತು. ಆದರೆ ಕಾರ್ಯಕ್ರಮದ ಬಳಿಕ ವಿವೇಕಾನಂದರು ಧರಿಸಿದ್ದ ಕೇಸರಿ ವಸ್ತ್ರವನ್ನ ಮುಟ್ಟಿದರೆ ಪಾವನರಾಗ್ತೇವೆ ಎಂಬ ಭಾವನೆ ಆ ಜನಗಳಿಗೆ ಬಂತು ಎಂದು ತಿಳಿಸಿದರು.