ಬೆಂಗಳೂರು: ರಾಮನಗರ ಹಾಗೂ ಬಾಗಲಕೋಟೆ ಜಿಲ್ಲೆಯ ಜಮಖಂಡಿ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಗೆ ಶೀಘ್ರವೇ ದಿನಾಂಕ ಪ್ರಕಟವಾಗುವ ಸಾಧ್ಯತೆಯಿದೆ.
ನವೆಂಬರ್ 13ಕ್ಕೆ ಚುನಾವಣೆ 16ಕ್ಕೆ ಮತ ಎಣಿಕೆ ನಡೆಸಲು ಆಯೋಗ ಸಿದ್ಧತೆ ನಡೆಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ವಿಧಾನ ಸಭಾ ಉಪ ಚುನಾವಣೆಯ ಜೊತೆಗೆ ಶಿವಮೊಗ್ಗ, ಮಂಡ್ಯ ಮತ್ತು ಬಳ್ಳಾರಿ ಲೋಕಸಭೆಗೂ ಉಪಚುನಾವಣೆ ನಡೆಯುವ ಸಾಧ್ಯತೆಯಿದೆ.
Advertisement
ಚುನಾವಣಾ ದಿನಾಂಕ ಅಂತಿಮಗೊಳಿಸಲು ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಸಂಜೀವ್ ಕುಮಾರ್ ದೆಹಲಿಗೆ ತೆರಳಿದ್ದು, ಶೀಘ್ರವೇ ದಿನಾಂಕ ಪ್ರಕಟವಾಗುವ ಸಾಧ್ಯತೆಯಿದೆ.
Advertisement
Advertisement
ಮೇ ತಿಂಗಳಲ್ಲಿ ರಾಜ್ಯ ವಿಧಾನಸಭೆಗೆ ನಡೆದಿದ್ದ ಚುನಾವಣೆಯಲ್ಲಿ ರಾಮನಗರ ಮತ್ತು ಚನ್ನಪಟ್ಟಣ ಎರಡೂ ಕ್ಷೇತ್ರಗಳಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಎರಡೂ ಕ್ಷೇತ್ರಗಳಲ್ಲೂ ಗೆದ್ದಿದ್ದ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಅವರ ರಾಜೀನಾಮೆಯಿಂದ ರಾಮನಗರ ಕ್ಷೇತ್ರ ತೆರವಾಗಿದೆ.
Advertisement
ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ವಿಧಾನಸಭೆ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಆಯ್ಕೆಯಾಗಿದ್ದ ಸಿದ್ದು ನ್ಯಾಮಗೌಡ ಅವರು, ಮೇ 28ರಂದು ಸಂಭವಿಸಿದ್ದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಅವರ ನಿಧನದ ಹಿನ್ನೆಲೆಯಲ್ಲಿ ಜಮಖಂಡಿ ಕ್ಷೇತ್ರ ತೆರವಾಗಿದೆ.
ಸಂಸದರಾಗಿದ್ದ ಯಡಿಯೂರಪ್ಪ, ಶ್ರೀರಾಮುಲು, ಪುಟ್ಟರಾಜು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಜಯಗಳಿಸಿದ್ದರಿಂದ ಶಿವಮೊಗ್ಗ, ಬಳ್ಳಾರಿ, ಮಂಡ್ಯ ಲೋಕಸಭಾ ಕ್ಷೇತ್ರ ತೆರವಾಗಿದೆ. ಯಾವುದೇ ಕ್ಷೇತ್ರ ತೆರವಾದ 6 ತಿಂಗಳಲ್ಲಿ ಮತ್ತೊಂದು ಚುನಾವಣೆ ಪ್ರಕ್ರಿಯೆಯನ್ನು ನಡೆಸಬೇಕಾಗಿರುವುದರಿಂದ ಚುನಾವಣೆ ಆಯೋಗ ಈಗ ಉಪ ಚುನಾವಣೆಗೆ ಸಕಲ ಸಿದ್ಧತೆ ನಡೆಸುತ್ತಿದೆ.