ಶಪಥ ಮಾಡಿ ಕೊಲೆ- ರಕ್ತಮಯವಾದ ಲಾಂಗ್ ತೋರ್ಸಿ ಗ್ರಾಮದಲ್ಲಿ ವಿಷಯ ಹೇಳಿದ್ದ

Public TV
2 Min Read
Ramanagara 1

– ಕೊಲೆ ಮಾಡಿದ್ದ 6 ಮಂದಿ ಅಂದರ್

ರಾಮನಗರ: ಜಿಲ್ಲೆಯ ಜಾಲಮಂಗಲ ಗ್ರಾಮ ಪಂಚಾಯತ್‍ನ ಮಾಜಿ ಉಪಾಧ್ಯಕ್ಷ ಶ್ರೀಧರ್‍ನನ್ನ ಫೆ. 10 ರಂದು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದ ಆರು ಜನ ಆರೋಪಿಗಳನ್ನ ಬಂಧಿಸುವಲ್ಲಿ ರಾಮನಗರ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.

ರಾಮನಗರ ತಾಲೂಕಿನ ಜಾಲಮಂಗಲ ನಿವಾಸಿ ಅಭಿಷೇಕ್, ವಿಜಯ್, ತಡಕವಾಗಿಲು ಗ್ರಾಮದ ಮನು, ಚನ್ನೇನಹಳ್ಳಿ ಗ್ರಾಮದ ಹನುಮಾನ್, ಸಿದ್ದಲಿಂಗ ಹಾಗೂ ಮಹೇಶ್ ಬಂಧಿತ ಆರೋಪಿಗಳು.

Ramanagara 4

ಫೆಬ್ರವರಿ 10ರಂದು ಮಧ್ಯಾಹ್ನದ ವೇಳೆ ಜಾಲಮಂಗಲದಿಂದ ರಾಮನಗರಕ್ಕೆ ಬೈಕ್ ನಲ್ಲಿ ಹೋಗುತ್ತಿದ್ದ ಶ್ರೀಧರ್ ಹಾಗೂ ಮಧು ಎಂಬವರನ್ನ ಇಂಡಿಕಾ ಕಾರಿನಲ್ಲಿ ಬಂದ ಅಭಿಷೇಕ್, ವಿಜಯ್, ಮನು, ಹನುಮಾನ್ ನಾಗರಕಲ್ಲುದೊಡ್ಡಿ ಬಳಿ ಕಾರಿನಿಂದ ಬೈಕ್ ಗೆ ಹಿಂಭಾಗದಿಂದ ಡಿಕ್ಕಿ ಹೊಡೆದಿದ್ದರು. ನಂತರ ಬೈಕ್ ನಿಂದ ಬಿದ್ದ ಶ್ರೀಧರ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕತ್ತನ್ನು ಕಡಿದು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದರು.

ವೇಳೆ ಬೈಕ್‍ನ ಹಿಂಭಾಗದಲ್ಲಿ ಇದ್ದ ಮಧು ಎಂಬಾತ ತಪ್ಪಿಸಿಕೊಂಡಿದ್ದ. ನಂತರ ಕೊಲೆ ಮಾಡಿರುವ ವಿಚಾರವನ್ನು ಆರೋಪಿಗಳು ಗ್ರಾಮದಲ್ಲಿ ಲಾಂಗ್ ತೋರಿಸಿ ಕೊಲೆ ಮಾಡಿದ್ದೇವೆ ಎಂದು ಹೇಳಿ ಹೋಗಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ರಾಮನಗರ ಗ್ರಾಮಾಂತರ ಠಾಣೆ ಪೊಲೀಸರು ಇದೀಗ ಆರು ಜನ ಆರೋಪಿಗಳನ್ನ ಬಂಧಿಸಿದ್ದಾರೆ.

Ramanagara 2

ಕೊಲೆಗೆ ಕಾರಣವೇನು:
ಶ್ರೀಧರ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಅಭಿಷೇಕ್‍ನ ತಂದೆ ಕುಮಾರ ಅಲಿಯಾಸ್ ದತ್ತಾತ್ರೇಯ ಎಂಬಾತ ಅದೇ ಜಾಲಮಂಗಲ ಗ್ರಾಮಪಂಚಾಯಿತಿ ಸದಸ್ಯನಾಗಿದ್ದ. ಬೇರೆ ಬೇರೆ ಪಕ್ಷಕ್ಕೆ ಸೇರಿದ್ದ ಶ್ರೀಧರ್ ಹಾಗೂ ಕುಮಾರ್ ನಡುವೆ ಹಲವಾರು ವರ್ಷಗಳಿಂದ ಸಾಕಷ್ಟು ವೈರತ್ವವಿತ್ತು. ಹೀಗಾಗಿ 2016ರಲ್ಲಿ ತನ್ನ ಸಹೋದರರ ಜೊತೆ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಕುಮಾರನನ್ನ ಶ್ರೀಧರ್ ಹಾಗೂ ಆತನ ಟೀಂ ಬರ್ಬರವಾಗಿ ಹತ್ಯೆ ಮಾಡಿತ್ತು.

ಈ ಸಂಬಂಧ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅನಂತರ ಶ್ರೀಧರ್ ಜೈಲು ಪಾಲಾಗಿ 2018ರಲ್ಲಿ ಜಾಮೀನಿನ ಮೇಲೆ ಹೊರಬಂದಿದ್ದ. ಹೊರ ಬಂದ ಮೇಲೆ ಸುಮ್ಮನಿರದ ಶ್ರೀಧರ್, ಕುಮಾರನ ಮಗನಾದ ಆರೋಪಿ ಅಭಿಷೇಕ್‍ಗೆ ಸಾಕಷ್ಟು ಕಿರುಕುಳ ನೀಡುತ್ತಿದ್ದ. ಅಲ್ಲದೇ ಅಭಿಷೇಕ್ ತಾಯಿಗೂ ಕೂಡ ಬೆದರಿಕೆ ಹಾಕುತ್ತಿದ್ದ. ಜೊತೆಗೆ ಕುಮಾರ್ ಕೊಲೆ ಪ್ರಕರಣದ ಸಾಕ್ಷಿಗಳಿಗೂ ಕೂಡ ಬೆದರಿಕೆ ಹಾಕುತ್ತಿದ್ದ. ಅಭೀಷೇಕ್ ನನ್ನ ಮನೆಯಿಂದ ಹೊರ ಬಾರದ ರೀತಿಯಲ್ಲಿ ಬೆದರಿಸಿದ್ದ.

Ramanagara 3 1

ಶ್ರೀಧರ್‍ನ ಆಟಾಟೋಪದಿಂದ ರೋಸಿ ಹೋಗಿದ್ದ ಅಭಿಷೇಕ್, ಶ್ರೀಧರ್ ನನ್ನ ಹಾಗೆ ಬಿಟ್ಟರೇ ಉಳಿಗಾಲವಿಲ್ಲ ಎಂದು ಒಂದು ತಿಂಗಳಗಳ ಕಾಲ ಪ್ಲಾನ್ ಮಾಡಿದ್ದ. ಸ್ನೇಹಿತರ ಸಹಾಯ ಪಡೆದು ಬಾಡಿಗೆಗೆಂದು ಇಂಡಿಕಾ ಕಾರು ಬಾಡಿಗೆ ಮಾಡಿಕೊಂಡು, ಜಾಲಮಂಗಲದಿಂದ ರಾಮನಗರಕ್ಕೆ ಬೈಕ್ ನಲ್ಲಿ ಹೋಗುತ್ತಿದ್ದ ಶ್ರೀಧರ್ ನನ್ನ ತನ್ನ ಸಂಗಡಿಗರ ಜೊತೆಗೂಡಿ ಹತ್ಯೆ ಮಾಡಿದ್ದ. ಅಲ್ಲದೇ ಮೊದಲೇ ತನ್ನ ತಂದೆಯ ಕೊಲೆಯ ಬಳಿಕ ಶ್ರೀಧರ್‍ನನ್ನ ಕೊಲೆ ಮಾಡುವ ಶಪಥ ಸಹ ಮಾಡಿದ್ದ ಅಭಿಷೇಕ್ ತನ್ನ ತಂದೆಯ ಸಾವಿಗೆ ಸೇಡು ತೀರಿಸಿಕೊಂಡಿದ್ದಾನೆ.

Share This Article
Leave a Comment

Leave a Reply

Your email address will not be published. Required fields are marked *