ರಾಮನಗರ: ಜಿಂಕೆಯನ್ನು ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಅಪ್ಪ-ಮಗನನ್ನ ಬೆನ್ನಟ್ಟಿದ ಅರಣ್ಯ ಇಲಾಖೆ ಅಧಿಕಾರಿಗಳು 13 ಕೆಜಿ ಜಿಂಕೆ ಮಾಂಸ ಹಾಗೂ ಒಂದು ಬೈಕ್‍ನ್ನು ವಶಪಡಿಸಿಕೊಂಡಿರುವ ಘಟನೆ ಜಿಲ್ಲೆಯ ಕನಕಪುರ ತಾಲೂಕಿನ ಸಂಗಮ ವನ್ಯಜೀವಿ ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಕಾವೇರಿ ವನ್ಯಜೀವಿಧಾಮಕ್ಕೆ ಅಂಟಿಕೊಂಡಂತಿರುವ ಸಂಗಮ ವನ್ಯಜೀವಿ ಧಾಮದಲ್ಲಿ ಇಂದು ಅರೆಮೇಗಳದೊಡ್ಡಿಯ ನಿವಾಸಿಗಳಾದ ತಂದೆ ಕರಿಯಪ್ಪ ಹಾಗೂ ಮಗ ಸ್ವಾಮಿ ಇಬ್ಬರು ಸೇರಿ ಜಿಂಕೆಯನ್ನು ಗುಂಡಿಟ್ಟು ಬೇಟೆಯಾಡಿದ್ದರು. ಬಳಿಕ ಅರಣ್ಯ ಪ್ರದೇಶದಲ್ಲಿಯೇ ಜಿಂಕೆಯ ಚರ್ಮ ಸುಲಿದು ಮಾಂಸವನ್ನ ಸಾಗಿಸುತ್ತಿದ್ದರು. ಇದೇ ವೇಳೆ ಸಂಗಮ ವನ್ಯಜೀವಿ ಧಾಮದ ಅರಣ್ಯ ಇಲಾಖೆ ಅಧಿಕಾರಿಗಳು ಗುಂಡಿನ ಶಬ್ದ ಬಂದ ಕಡೆಗೆ ಧಾವಿಸಿದ್ದು ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಅಪ್ಪ-ಮಗನ ಬೆನ್ನಟ್ಟಿದ್ದಾರೆ.
Advertisement
ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಅರಣ್ಯ ಪ್ರದೇಶದಲ್ಲಿ ಬರುವುದನ್ನು ಗಮನಿಸಿದ ಬೇಟೆಗಾರರು ಜಿಂಕೆ ಮಾಂಸ ಹಾಗೂ ಬೈಕ್‍ನ್ನು ಸಂಗಮ ವನ್ಯಜೀವಿಧಾಮದ ಅಂಚಿನಲ್ಲಿನ ದೊಡ್ಡ ಆಲಹಳ್ಳಿ ಗ್ರಾಮದ ಸಮೀಪದ ಅರಣ್ಯದಲ್ಲಿ ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾರೆ. ಇನ್ನೂ ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆ ಅಧಿಕಾರಿಗಳು 13 ಕೆಜಿ ಜಿಂಕೆ ಮಾಂಸ, ಜಿಂಕೆ ಚರ್ಮ ಹಾಗೂ ಒಂದು ಬೈಕ್‍ನ್ನು ವಶಪಡಿಸಿಕೊಂಡಿದ್ದು ಬೇಟೆಗಾರ ತಂದೆ-ಮಗನ ಬಂಧನಕ್ಕೆ ಬಲೆ ಬೀಸಿದ್ದಾರೆ.
Advertisement
ಇತ್ತೀಚೆಗೆ ಬನ್ನೇರುಘಟ್ಟ ಅರಣ್ಯ ಪ್ರದೇಶದಲ್ಲಿ ಬೆಂಕಿ ಬಿದ್ದ ವೇಳೆ ಕಾವೇರಿ ವನ್ಯಜೀವಿಧಾಮದಲ್ಲೂ ಸಹ ಬೆಂಕಿ ಬಿದ್ದು ನೂರಾರು ಹೆಕ್ಟೇರ್ ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿದೆ. ಪರಿಣಾಮ ಆಹಾರ ಹರಸಿ ಕಾಡಿನಿಂತ ನಾಡಿನತ್ತ ಪ್ರಾಣಿಗಳು ಮುಖ ಮಾಡುತ್ತಿದ್ದು ಬೇಟೆಗಾರರ ಕೈಗೆ ತಾವಾಗಿಯೇ ಸಿಕ್ಕಿ ಬೀಳುವಂತಾಗಿದೆ.
Advertisement
ಕಾವೇರಿ ವನ್ಯಜೀವಿಧಾಮ ಹಾಗೂ ಸಂಗಮ ವನ್ಯಜೀವಿಧಾಮ ವ್ಯಾಪ್ತಿಯಲ್ಲಿ ಬೇಟೆಗಾರರ ಹಾವಳಿ ವಿಪರೀತವಾಗಿದ್ದು ಬಲೆ, ಉರುಳು, ಸಿಡಿಮದ್ದು ಅಲ್ಲದೇ ಬಂದೂಕಿನಿಂದ ಬೇಟೆಯಾಡುತ್ತಿದ್ದಾರೆ. ಈ ಬಗ್ಗೆ ಸಾಕಷ್ಟು ಬಾರಿ ಅರಣ್ಯ ಇಲಾಖೆ ಸಹ ಬೇಟೆಗಾರರನ್ನು ಬಂಧಿಸಿ ಜೈಲಿಗಟ್ಟಿದೆ. ಕಳೆದ ಎರಡು ವರ್ಷಗಳ ಹಿಂದೆ ಜಿಂಕೆ ಬೇಟೆಯಾಡಲು ಮುಂದಾಗಿದ್ದವರ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ಗುಂಡು ಹಾರಿಸಿದ್ದ ವೇಳೆ ಓರ್ವ ಸಾವನ್ನಪ್ಪಿದ್ದ, ಇದು ಸುತ್ತಮುತ್ತಲ ಹಳ್ಳಿಯ ಜನರ ಆಕ್ರೊಶಕ್ಕೂ ಕಾರಣವಾಗಿತ್ತು.