ರಾಮನಗರ: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಎರಡು ವರ್ಷದ ಗಂಡು ಚಿರತೆ ಸಾವನ್ನಪ್ಪಿದ ಘಟನೆ ರಾಮನಗರ ತಾಲೂಕಿನ ವಡೇರಹಳ್ಳಿ ಗ್ರಾಮದ ಬಳಿ ನಡೆದರೆ, ಬಸವನಪುರ ಗ್ರಾಮದ ಬಳಿ ಬೋನಿನಲ್ಲಿ ಚಿರತೆಯೊಂದು ಸೆರೆಯಾಗಿದೆ.
ವಡೇರಹಳ್ಳಿ ಸಮೀಪ ಬಸವನಪುರ ಬೆಟ್ಟದಿಂದ ಆಹಾರ ಅರಸಿ ಬಂದಿದ್ದ ಚಿರತೆ ರೈಲು ಬರುತ್ತಿದ್ದ ವೇಳೆ ಹಳಿ ದಾಟಲು ಹೋಗಿದೆ. ಈ ವೇಳೆ ರೈಲು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಸಾವನ್ನಪ್ಪಿದೆ. ಘಟನೆ ಸಂಬಂಧ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು, ಚನ್ನಪಟ್ಟಣ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಸಂಸ್ಕಾರ ಮಾಡಿದ್ದಾರೆ.
Advertisement
Advertisement
ಡಿಸೆಂಬರ್ 22ರಂದು ಬಸವನಪುರ ಗ್ರಾಮದ ಕುರಿಗಾಯಿ ಮೇಲೆ ದಾಳಿ ನಡೆಸಿದ್ದ ಚಿರತೆ ಅರಣ್ಯ ಇಲಾಖೆ ಇಟ್ಟಿದ್ದ ಬೋನಿನಲ್ಲಿ ಸೆರೆಯಾಗಿದೆ. ಬಸವನಪುರ ಗ್ರಾಮದ ರೈತರೊಬ್ಬರ ಜಮೀನಿನಲ್ಲಿಟ್ಟಿದ್ದ ಬೋನಿಗೆ ಚಿರತೆ ಬಿದ್ದಿದೆ.
Advertisement
ಕಳೆದ ಭಾನುವಾರ ಕುರಿ ಮೇಯಿಸಲು ಹೋಗಿದ್ದ ಕುರಿಗಾಯಿ ನರಸಿಂಹ ಎಂಬಾತನ ಮೇಲೆ ಚಿರತೆ ದಾಳಿ ನಡೆಸಿತ್ತು. ಪರಿಣಾಮ ಆತನ ತಲೆ, ಬೆನ್ನು, ಕತ್ತು ಸೇರಿದಂತೆ ದೇಹದ ಹಲವೆಡೆ ಗಾಯವಾಗಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಬಳಿಕ ಎಚ್ಚೆತ್ತ ಅರಣ್ಯ ಇಲಾಖೆಯ ಅಧಿಕಾರಿಗಳು ಜನರಿಗೆ ನಿದ್ದೆಗೆಡಿಸಿದ್ದ ಚಿರತೆಯನ್ನ ಸೆರೆ ಹಿಡಿಯಲು ಗ್ರಾಮದ ಹೊರ ಭಾಗದಲ್ಲಿ ನಾಲ್ಕು ಬೋನುಗಳನ್ನು ಇಟ್ಟಿದ್ದರು. ಮತ್ತೆ ಆಹಾರ ಅರಸಿ ಬಂದಿದ್ದ ಚಿರತೆ ಅರಣ್ಯ ಇಲಾಖೆ ಇಟ್ಟಿದ್ದ ಬೋನಿನಲ್ಲಿ ಸೆರೆಯಾಗಿದೆ. ಚಿರತೆ ಸೆರೆಯಾದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಚಿರತೆಯನ್ನು ಬನ್ನೇರುಘಟ್ಟ ಅರಣ್ಯ ಪ್ರದೇಶಕ್ಕೆ ಬಿಟ್ಟು ಬರಲು ನಿರ್ಧರಿಸಿದ್ದರು.